ಹಿರಿಯ ನಟಿ ಪ್ರೇಮಾ ಹಾಗೂ ಸಾಯಿಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ‘ವರಾಹಚಕ್ರಂ’ ಚಿತ್ರ ಇತ್ತೀಚೆಗಷ್ಟೇ ಸೆಟ್ಟೇರಿತು. ‘ಮನಸುಗಳ ಮಾತು ಮಧುರ’ ಖ್ಯಾತಿಯ ನಿರ್ದೇಶಕ ಮಂಜು ಮಸ್ಕಲ್ ಮಟ್ಟಿ ಅವರದೇ ನಿರ್ಮಾಣ ಹಾಗೂ ನಿರ್ದೇಶನ ಈ ಚಿತ್ರಕ್ಕಿದೆ.
ಮಾಜಿ ಸಚಿವ ಆರ್.ಅಶೋಕ್ ಚಿತ್ರದ ಪ್ರಥಮ ದೃಶ್ಯಕ್ಕೆ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು. ‘ಈಗಿನ ಡಿಜಿಟಲ್ ಜಗತ್ತಿನಲ್ಲಿ ಏನೆಲ್ಲ ಅನ್ಯಾಯ, ಮೋಸ, ಅಕ್ರಮಗಳು ನಡೆಯುತ್ತಿವೆ ಎಂಬುದನ್ನು ಹೇಳುವ ಕಥೆಯ ಚಿತ್ರವಿದು. ಆಧುನಿಕ ಪಂಚ ಪಾಂಡವರಂತೆ ಐವರು ನಾಯಕರಿದ್ದಾರೆ. ವರಾಹ ವಿಷ್ಣುವಿನ ಒಂದು ಅವತಾರ. ಕಥೆಯಲ್ಲಿ ಇದರ ಪ್ರಸ್ತಾಪ ಬರುತ್ತದೆ’ ಎಂದರು ನಿರ್ದೇಶಕರು.
ಅರ್ಜುನ್ ದೇವ್, ರಾಣಾ, ಇಮ್ರಾನ್ ಷರೀಫ್, ಆರ್ಯನ್ ಹಾಗೂ ಪ್ರತೀಕ್ ಗೌಡ ಪಂಚಪಾಂಡವರಾಗಿ ಕಾಣಿಸಿಕೊಳ್ಳಲಿದ್ದಾರೆ. ನಾಯಕಿಯರಾಗಿ ಶೋಭಾರಾಣಿ, ಪ್ರಿಯಾ ತರುಣ್, ಅನನ್ಯ, ಜಾಹ್ನವಿ, ದೀಕ್ಷಾ, ಚೈತ್ರಾ ನಟಿಸುತ್ತಿದ್ದಾರೆ. ವಿ. ನಾಗೇಂದ್ರಪ್ರಸಾದ್, ತೆಲುಗುನಟ ಭಾನುಚಂದರ್, ಚಿ.ಗುರುದತ್, ಶೋಭರಾಜ್ ತಾರಾಬಳಗದಲ್ಲಿದ್ದಾರೆ.
ಕಣ್ಣು, ಗನ್ನು, ಪೆನ್ನು ಈ ಮೂರನ್ನೂ ಇಟ್ಟುಕೊಂಡು ಏನೋ ಮಾಡಲು ಹೊರಟಿದ್ದೇನೆ. ಬಳ್ಳಾರಿ, ಹಿರಿಯೂರು, ಬೆಂಗಳೂರು, ಚಿತ್ರದುರ್ಗ, ತಮಿಳುನಾಡಿನ ಪೊಲ್ಲಾಚ್ಚಿ ಅಲ್ಲದೆ ಉತ್ತರ ಪ್ರದೇಶದ ವಾರಾಣಸಿ, ಕಾಶಿಯಲ್ಲಿ ಚಿತ್ರೀಕರಿಸುವ ಯೋಜನೆಯಿದೆ ಎಂದು ಮಸ್ಕಲ್ ಮಟ್ಟಿ ತಿಳಿಸಿದರು.
ನಟಿ ಪ್ರೇಮಾ ಮಾತನಾಡಿ, ‘‘ಈ ಹಿಂದೆ ಮಾಡಿದ ಎಲ್ಲಾ ಪಾತ್ರಗಳಿಗಿಂತ ವಿಭಿನ್ನವಾದ, ಸ್ವಲ್ಪ ನೆಗೆಟಿವ್, ಪಾಸಿಟಿವ್ ಎರಡೂ ಶೇಡ್ ಇರುವ ಪಾತ್ರ. ಭಾನುಚಂದರ್ ಜೊತೆ ಹಿಂದೆ ‘ದೇವಿ’ ಚಿತ್ರದಲ್ಲಿ ಅಭಿನಯಿಸಿದ್ದೆ’’ ಎಂದು ಹೇಳಿದರು. ವಿ.ನಾಗೇಂದ್ರಪ್ರಸಾದ್ ಸಂಗೀತ, ಶರತ್‌ಕುಮಾರ್ ಜಿ. ಛಾಯಾಗ್ರಹಣ, ಭಾರ್ಗವ ಅವರ ಸಂಕಲನವಿದೆ.