ಬೆಂಗಳೂರು(Bengaluru): ನಾಳೆ(ಡಿಸೆಂಬರ್ 21) ಬೆಳಗಾವಿಯ ಸುವರ್ಣಸೌಧದಲ್ಲಿ ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಬಿಜೆಪಿ ಅಭ್ಯರ್ಥಿಯಾಗಿ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಇಂದು ನಾಮಪತ್ರ ಸಲ್ಲಿಸಿದ್ದಾರೆ.
ವಿಧಾನ ಪರಿಷತ್ ಕಾರ್ಯದರ್ಶಿ ಕೆ ಆರ್ ಮಹಾಲಕ್ಷ್ಮಿ ಅವರಿಗೆ ಬಸವರಾಜ ಹೊರಟ್ಟಿ ನಾಮಪತ್ರ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಚಿವರಾದ ಜೆ.ಸಿ. ಮಾಧುಸ್ವಾಮಿ, ಗೋವಿಂದ ಕಾರಜೋಳ, ವಿಧಾನ ಪರಿಷತ್ ಮುಖ್ಯ ಸಚೇತಕ ವೈ ಎ ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು ಸಾತ್ ನೀಡಿದರು.
ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಹೊರಟ್ಟಿ, ನನಗೆ ಇದೊಂದು ಅವಿಸ್ಮರಣೀಯ ದಿನ. ನಾನು ಅತ್ಯಂತ ವಿಶ್ವಾಸದಿಂದ ನಾಮಪತ್ರ ಸಲ್ಲಿಸಿದ್ದೇನೆ. ಪಕ್ಷ ನನ್ನ ಮೇಲೆ ಇಟ್ಟಿರುವ ನಂಬಿಕೆ, ವಿಶ್ವಾಸವನ್ನು ಎಂದೆಂದೂ ದುರುಪಯೋಗ ಮಾಡಲ್ಲ. ನನ್ನ ಮೇಲೆ ಇಟ್ಟಿರುವ ವಿಶ್ವಾಸ ಕಾಯ್ದುಕೊಂಡು, ಪಕ್ಷಕ್ಕೆ ಸರ್ಕಾರಕ್ಕೆ ಒಳ್ಳೆಯ ಹೆಸರು ತರುವಂತೆ ಕೆಲಸ ಮಾಡಲಿದ್ದೇನೆ ಎಂದರು.
ಸಭಾಪತಿ ಸ್ಥಾನದಲ್ಲಿ ಕುಳಿತಾಗ ನ್ಯಾಯವಾಗಿ ಎಲ್ಲವನ್ನೂ ನಡೆಸಿಕೊಂಡು ಹೋಗುತ್ತೇನೆ ಎಂದ ಹೊರಟ್ಟಿ, ಕೊಟ್ಟಿರುವ ಮಾತಿನಂತೆ ನಡೆದುಕೊಂಡಿದ್ದಾರೆ. ತಾಂತ್ರಿಕ ತೊಂದರೆಗಳು ಇರುತ್ತವೆ. ಸರ್ಕಾರದಲ್ಲಿ, ಪಕ್ಷದಲ್ಲಿ ತೊಂದರೆಗಳು ಇರುತ್ತವೆ, ಅವೆಲ್ಲವನ್ನೂ ಸರಿ ಪಡಿಸಿಕೊಳ್ಳಲು ಸಮಯ ಬೇಕಾಗುತ್ತದೆ. ನಾನು ಹೆಂಗಿದ್ದೇನೊ ಹಾಗೆ ಇದ್ದೇನೆ, ನಂಗೆ ಅತೃಪ್ತಿ ಆಗಿಲ್ಲ ಎಂದು ತಿಳಿಸಿದರು.