ವಿಜಯಪುರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ವ್ಯಂಗ್ಯ ಮತ್ತು ಅಪಹಾಸ್ಯ ರೀತಿಯಲ್ಲಿ ನೀಡಿದ ಹೇಳಿಕೆ ಖಂಡಿಸಿ ಹಾಗೂ ಅವರ ರಾಜೀನಾಮೆಗೆ ಆಗ್ರಹಿಸಿ ಅಹಿಂದ, ದಲಿತ ಸಂಘಟನೆಗಳ ಒಕ್ಕೂಟ ಹಾಗೂ ಡಾ.ಅಂಬೇಡ್ಕರ್ ವಿಚಾರವಾದಿಗಳ ಬಳಗ ವತಿಯಿಂದ ಡಿ.28ರಂದು ವಿಜಯಪುರ ಜಿಲ್ಲಾ ಬಂದ್‌ಗೆ ಕರೆ ನೀಡಲಾಗಿದೆ ಎಂದು ಮಾಜಿ ಶಾಸಕ ರಾಜು ಆಲಗೂರ ತಿಳಿಸಿದರು.
ನಗರದಲ್ಲಿ ಡಿ.25ರ ಬುಧವಾರ ವಿವಿಧ ಸಂಘಟನೆಗಳ ಪ್ರಮುಖರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಹಲವು ಧರ್ಮಗಳು, ಭಾಷೆಗಳು, ಸಂಸ್ಕೃತಿಗಳು, ಜಾತಿಗಳು ಹಾಗೂ ಸಂಪ್ರಾಯಗಳನ್ನು ಒಳಗೊಂಡಿರುವ ಭಾರತದಂತಹ ದೇಶವನ್ನು ಸಂವಿಧಾನದ ಮೂಲಕ ವಿವಿಧತೆಯಲ್ಲಿ ಏಕತೆ ಮೂಡಿಸಿ ಸರ್ವ ಭಾರತೀಯರನ್ನು ಒಂದುಗೂಡಿಸಿದವರು. ಯಾವುದೇ ಧರ್ಮ, ಜಾತಿಗಳನ್ನು ಪರಿಗಣಿಸದೆ ಎಲ್ಲ ಭಾರತೀಯರ ಬದುಕಿನ ಘನತೆಯನ್ನು ಹೆಚ್ಚಿಸಲು ತಮ್ಮ ಜೀವನವನ್ನೇ ಪಣಕ್ಕಿಟ್ಟವರು. ಆದರೆ, ಪ್ರಜಾಪ್ರಭುತ್ವದ ದೇಗುಲ ಸಂಸತ್ತಿನಲ್ಲಿ ಅಮಿತ್ ಶಾ ಸಂವಿಧಾನಾತ್ಮಕ ಹುದ್ದೆಯಲ್ಲಿದ್ದುಕೊಂಡು ಅಂಬೇಡ್ಕರ್ ಬಗ್ಗೆ ಅವಹೇಳನ ಮಾಡಿದ್ದು, ಕೋಟ್ಯಾಂತರ ಭಾರತೀಯರಿಗೆ ನೋವುಂಟಾಗಿದೆ ಎಂದರು.
ಅಂಬೇಡ್ಕರ್ ಕುರಿತು ಅಮಿತ್ ಶಾ ಪ್ರಜ್ಞಾಪೂರ್ವಕವಾಗಿಯೇ ಈ ಮಾತುಗಳನ್ನಾಡಿದ್ದಾರೆ. ಇದು ಆರ್‌ಎಸ್‌ಎಸ್, ಬಿಜೆಪಿಯ ಮನಸ್ಥಿತಿ ಹಾಗೂ ಅಂತರಾಳದ ಮಾತಾಗಿದೆ. ಅಂಬೇಡ್ಕರ್ ಅವರ ಬಗ್ಗೆ ಏನಾದರೂ ಹೇಳಿದರೆ, ಸಮಾಜ ಯಾವ ಪ್ರಕ್ರಿಯೆ ಕೊಡುತ್ತದೆ ಎಂದು ನೋಡುವ ಪ್ರಯತ್ನವಾಗಿದೆ. ಇದರಲ್ಲಿ ಸಂವಿಧಾನ ಬದಲಾವಣೆ ಮಾಡುವ ವಿಚಾರವನ್ನು ಬಿಜೆಪಿಯವರು ಹೊಂದಿದ್ದಾರೆ. ಸಂವಿಧಾನದ ಮೇಲೆ ಆಕ್ರಮಣ ನಡೆಯುತ್ತಿದೆ. ಆದ್ದರಿಂದ ಅಮಿತ್ ಶಾ ರಾಜೀನಾಮೆ ನೀಡಬೇಕು ಎಂದು ಜಿಲ್ಲಾ ಬಂದ್ ನಡೆಸಲಾಗುತ್ತಿದೆ. ತಾಲೂಕಗಳ ಮಟ್ಟದಲ್ಲೂ ಬಂದ್ ಆಚರಣೆ ಮಾಡಲಾಗುತ್ತದೆ. ಅಂದು ಶಾಲಾ-ಕಾಲೇಜು, ಬಸ್ ಸಂಚಾರ ಹಾಗೂ ಮಾರುಕಟ್ಟೆ ಬಂದ್ ಆಗಲಿದೆ. ಶಾಲಾ-ಕಾಲೇಜುಗಳ ರಜೆ ಬಗ್ಗೆ ಜಿಲ್ಲಾಡಳಿತ ಸಕಾರಾತ್ಮಕ ಸ್ಪಂದನೆ ಕೊಟ್ಟಿದೆ ಎಂದು ತಿಳಿಸಿದರು.
ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಮಾತನಾಡಿ, ಜಿಲ್ಲಾ ಬಂದ್ ನಿಮಿತ್ತ ವಿಜಯಪುರ ನಗರದಲ್ಲಿ ದೊಡ್ಡ ಪ್ರತಿಭಟನೆ, ಹೋರಾಟ ನಡೆಯಲಿದೆ. ಸಿದ್ದೇಶ್ವರ ದೇವಸ್ಥಾನದಿಂದ ಗಣಪತಿ ಚೌಕ್, ವಾಜಪೇಯಿ ಚರ್ಕಲ್, ಕಿರಾಣ ಬಜಾರ್, ಗಾಂಧಿ ವೃತ್ತ, ಬಸವೇಶ್ವರ ವೃತದ ಮಾರ್ಗವಾಗಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದವರಿಗೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿಕೊಂಡು ಪ್ರತಿಭಟನಾ ಮೆರವಣಿಗೆ ಜರುಗಲಿದೆ ಎಂದರು.