ವಿಜಯಪುರ: ವಿಜಯಪುರದಲ್ಲಿ ಇಂದು ಘೋರವಾದ ದುರಂತ ಒಂದು ಸಂಭವಿಸಿದ್ದು, ಸಮಾಜ ಕಲ್ಯಾಣ ಇಲಾಖೆಯ ಮಹಿಳಾ ಅಧಿಕಾರಿ ರೇಣುಕಾ ಕನ್ನೊಳ್ಳಿ (30) ಅವರನ್ನು ಚಾಕುವಿನಿಂದ ಇರಿದು ಬರ್ಬರ ಹತ್ಯೆ ಮಾಡಲಾಗಿದೆ. ಈ ಭೀಕರ ಘಟನೆ ಇಂಡಿ ಪಟ್ಟಣದ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಸಂಭವಿಸಿದ್ದು, ಸ್ಥಳೀಯರಲ್ಲಿ ಭೀತಿಯ ಪರಿಸರವನ್ನುಂಟುಮಾಡಿದೆ.
ಇಂದು ಬೆಳಗ್ಗೆ, ಇಂಡಿ ತಾಲೂಕಿನ ಕೋಟ್ನಾಳ ಗ್ರಾಮದ ನಿವಾಸಿಯಾದ ರೇಣುಕಾ ಸಾಯಬಣ್ಣ ಕನ್ನೊಳ್ಳಿ, ತನ್ನ ಬೈಕ್ನಲ್ಲಿ ಕೆಲಸದ ನಿಮಿತ್ತ ಹೊರಟಿದ್ದ ಸಂದರ್ಭದಲ್ಲಿ, ಟಿಪ್ಪು ಸುಲ್ತಾನ್ ವೃತ್ತದ ಬಳಿ ಆರೋಪಿ ಸಂಜು ಬನಸೋಡೆ ಎಂಬಾತ ಚಾಕುವಿನಿಂದ ಭೀಕರವಾಗಿ ಇರಿದಿದ್ದಾನೆ. ಸ್ಥಳೀಯರು ಶೀಘ್ರವಾಗಿ ಅವರನ್ನು ವಿಜಯಪುರ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ, ಕೆಲವು ತಾಸುಗಳ ಬಳಿಕ ಮಹಿಳಾ ಅಧಿಕಾರಿ ರೇಣುಕಾ ಸಾವಿಗೀಡಾದರು. ವೈದ್ಯರ ಪ್ರಕಾರ, ಆಕೆಗೆ ಸಂಭವಿಸಿದ್ದ ಗಾಯಗಳು ತೀವ್ರವಾಗಿದ್ದರಿಂದ ರಕ್ತಸ್ರಾವ ಹೆಚ್ಚಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು.
ಘಟನೆ ಬಳಿಕ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಸಂಜು ಬನಸೋಡೆ ಎಂಬಾತನನ್ನು ಪೊಲೀಸರು ಬೆನ್ನಟ್ಟಿಸಿ ಸೆರೆಹಿಡಿದಿದ್ದಾರೆ. ಪ್ರಸ್ತುತ ಆರೋಪಿ ಪೊಲೀಸ್ ವಶದಲ್ಲಿದ್ದು, ಪ್ರಾಥಮಿಕ ವಿಚಾರಣೆ ಪ್ರಾರಂಭಿಸಲಾಗಿದೆ. ಸಂಜು ಹಾಗೂ ರೇಣುಕಾ ನಡುವೆ ಯಾವುದೇ ವೈಯಕ್ತಿಕ ದ್ವೇಷವಿದ್ದಿತಾ ಅಥವಾ ಇತರ ಕಾರಣಗಳಿದೆಯಾ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.














