ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ಈವರೆಗೆ 265 ಕೋಟಿ ರೂ. ಜಪ್ತಿ ಮಾಡಲಾಗಿದೆ ಎಂದು ರಾಜ್ಯ ಮುಖ್ಯಚುನಾವಣಾಧಿಕಾರಿ ಮನೋಜ್ ಕುಮಾರ್ ತಿಳಿಸಿದರು.
ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗುಂಪು ಘರ್ಷಣೆ ಸಂಬಂಧ 15 ಎಫ್ ಐಆರ್ ದಾಖಲಾಗಿದೆ. ದ್ವೇಷ ರಾಜಕಾರಣ ಸಂಬಂಧ 5 ಎಫ್ ಐಆರ್ ಸೇರಿ 673 ಎಫ್ ಐ ಆರ್ ದಾಖಲಾಗಿದೆ ಎಂದು ಮಾಹಿತಿ ನೀಡಿದರು.
ರಾಜ್ಯದ 224 ಕ್ಷೇತ್ರಗಳಲ್ಲಿ ಒಟ್ಟು 2615 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. 2429 ಪುರುಷ ಅಭ್ಯರ್ಥಿಗಳು 185 ಮಹಿಳಾ ಅಭ್ಯರ್ಥಿಗಳು ಇತರೇ 1 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ರಾಜ್ಯದಲ್ಲಿ ಒಟ್ಟಾರೆ 5,30,85,566 ಮತದಾರರು ಇದ್ದಾರೆ. ಪುರುಷ ಮತದಾರರ ಸಂಖ್ಯೆ 2,66,82,156 ಹಾಗೂ ಮಹಿಳಾ ಮತದಾರರ ಸಂಖ್ಯೆ 2,63,98,483 ಆಗಿದೆ. 16,04,285 ಮಂದಿ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
ಹೊಸದಾಗಿ ಸೇರ್ಪಡೆಯಾದವರಲ್ಲಿ 11,71,558 ಯುವ ಮತದಾರರಾಗಿದ್ದು, 18-19 ವಯಸ್ಸಿನವರಾಗಿದ್ದಾರೆ. 2022ರ ಸೆಪ್ಟೆಂಬರ್ 1 ರಿಂದ 38 ಲಕ್ಷ ವೋಟರ್ ಐಡಿ ನೀಡಲಾಗಿದೆ.ರಾಜ್ಯದಲ್ಲಿ 58,545 ಪೋಲಿಂಗ್ ಸ್ಟೇಷನ್ ಸ್ಥಾಪಿಸಲಾಗುವುದು. 1,15,709 ಇವಿಎಂ, 89379 ವಿವಿಪ್ಯಾಟ್ ಯಂತ್ರ ಅಳವಡಿಸಲಾಗುವುದು. 47,488 ಯೋಧರಿಗೆ ಅಂಚೆ ಮತಪತ್ರಗಳನ್ನು ಕಳುಹಿಸಲಾಗಿದೆ. 80 ವರ್ಷ ದಾಟಿದ 80,250 ಜನರು ಮನೆಯಿಂದಲೇ ಮತದಾನಕ್ಕೆ ನೋಂದಾಯಿಸಿದ್ದಾರೆ.
19279 ವಿಕಲ ಚೇತನರು, 13771 ಅಗತ್ಯ ಸೇವೆ ಒದಗಿಸುವವರು ನೋಂದಾಯಿಸಿದ್ದಾರೆ.
ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ 80 ಸಾವಿರಕ್ಕೂ ಹೆಚ್ಚು ಮಂದಿ ವೋಟ್ ಫ್ರಂ ಹೋಮ್ ಅವಕಾಶ ಪಡೆಯಲಿದ್ದಾರೆ ಎಂದು ಮನೋಜ್ ಕುಮಾರ್ ಹೇಳಿದರು.