ಮನೆ ಕಾನೂನು ಎಐಬಿಇ, ಸಿಎಲ್ ಎಟಿ ಪರೀಕ್ಷೆ ಆಯೋಜನೆ ವೇಳೆ ವಿಕಲಚೇತನರ ಹಕ್ಕು ಉಲ್ಲಂಘನೆ: ಸುಪ್ರೀಂ ಕೋರ್ಟ್‌ ಗೆ...

ಎಐಬಿಇ, ಸಿಎಲ್ ಎಟಿ ಪರೀಕ್ಷೆ ಆಯೋಜನೆ ವೇಳೆ ವಿಕಲಚೇತನರ ಹಕ್ಕು ಉಲ್ಲಂಘನೆ: ಸುಪ್ರೀಂ ಕೋರ್ಟ್‌ ಗೆ ಅರ್ಜಿ

0

ಅಖಿಲ ಭಾರತ ವಕೀಲರ ಪರೀಕ್ಷೆ (ಎಐಬಿಇ) ಮತ್ತು ಸಾಮಾನ್ಯ ಕಾನೂನು ಪ್ರವೇಶಪರೀಕ್ಷೆ  (ಸಿಎಲ್‌ಎಟಿ) ನಡೆಸುವಾಗ ವಿಕಲಚೇತನರ ವಿರುದ್ಧ ವ್ಯವಸ್ಥಿತ ತಾರತಮ್ಯ ಎಸಗಲಾಗುತ್ತಿದ್ದು ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಕಾಯಿದೆ  ಪಾಲನೆಯಾಗುತ್ತಿಲ್ಲ ಎಂದು ಆರೋಪಿಸಿ ದೃಷ್ಟಿ ವಿಕಲಚೇತನ ಕಾನೂನು ವಿದ್ಯಾರ್ಥಿಗಳು ಮತ್ತು ಪದವೀಧರರ ಗುಂಪು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ.

Join Our Whatsapp Group

ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ನೋಟಿಸ್‌ ನೀಡಿದ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ಇಂದು ಪ್ರಕರಣದ ವಿಚಾರಣೆ ನಡೆಸಲು ನಿರ್ಧರಿಸಿದೆ.

ಭಾರತೀಯ ವಕೀಲರ ಪರಿಷತ್ತು (ಬಿಸಿಐ) ಮತ್ತು ಸಿಎಲ್‌ಎಟಿ ನಡೆಸುವ ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿದರೂ ಈ ಪರೀಕ್ಷೆಗಳ ವೇಳೆ ಅಗತ್ಯ ಅನುಕೂಲಗಳನ್ನು ಒದಗಿಸಲು ನಿರಂತರ ಅಡೆತಡೆಗಳು ಉಂಟಾದವು ಎಂದು ಅರ್ಜಿದಾರರು ದೂರಿದ್ದಾರೆ.

ಶೇ 90ಕ್ಕಿಂತ ಕಡಿಮೆ ದೃಷ್ಟಿ ಇರುವ ನಾಲ್ಸಾರ್‌ ವಿವಿಯ ಕಾನೂನು ಪದವೀಧರರೊಬ್ಬರ ದೂರಿನ ಪ್ರಕಾರ ಅವರು ಎಐಬಿಇ-XIX ಪರೀಕ್ಷೆ ಬರೆಯುವುದಕ್ಕಾಗಿ ಕಂಪ್ಯೂಟರ್‌ ಬಳಸುವುದಾಗಿ ಬಿಸಿಐಗೆ ಪುನರಾವರ್ತಿತ ಇಮೇಲ್‌, ಪತ್ರ ಬರೆದರೂ ನೆರವು ದೊರೆಯಲಿಲ್ಲ. ದೃಷ್ಟಿ ಮತ್ತು ಶ್ರವಣದೋಷವುಳ್ಳ ವ್ಯಕ್ತಿಗಳಿಗೆ ಸಹಾಯವಾಗುವ ನಿಟ್ಟಿನಲ್ಲಿ ಪ್ರವೇಶಿಕೆ ಲ್ಯಾಬ್ ಸ್ಥಾಪಿಸಬೇಕು ಎಂಬುದು ಅವರ ಪ್ರಮುಖ ಅಹವಾಲಾಗಿದೆ.

ಮತ್ತೊಬ್ಬ ಅರ್ಜಿದಾರ ಮುಂಬೈನ ಸರ್ಕಾರಿ ಕಾನೂನು ಕಾಲೇಜಿನ ಅಂಧ ಕಾನೂನು ವಿದ್ಯಾರ್ಥಿ ಹೇಳಿರುವಂತೆ ಅಭ್ಯರ್ಥಿಗಳ ಅರ್ಹತಾ ಮಾನದಂಡಗಳು ಮತ್ತು ಸಿಎಲ್‌ಎಟಿ ಪರೀಕ್ಷೆಗೆ ಕಂಪ್ಯೂಟರ್ ಬಳಸಲು ಅನುಮತಿ ಬಗ್ಗೆ ಸ್ಪಷ್ಟೀಕರಣ ಕೋರಿದ್ದರೂ ಪ್ರಯೋಜನವಾಗಲಿಲ್ಲ.

ಬೇರ್‌ ಕಾಯಿದೆಗಳ ಸಾಫ್ಟ್‌ ಪ್ರತಿ ಮತ್ತು ಕಂಪ್ಯೂಟರ್‌ ಬಳಕೆಗೆ ಮೂರನೇ ಅರ್ಜಿದಾರ , ಸೂರತ್‌ನ ಔರೋ ವಿಶ್ವವಿದ್ಯಾನಿಲಯದ ಅಂಧ ಕಾನೂನು ಪದವೀಧರ ಮಾಡಿದ್ದ ಮನವಿಯನ್ನು ಮೌಖಿಕವಾಗಿ ನಿರಾಕರಿಸಿದ್ದ ಬಿಸಿಐ ಅವರ ಸಮಸ್ಯೆ ಬಗೆಹರಿಸುವಂತಹ ಲಿಖಿತ ಪ್ರತಿ ನೀಡಲಿಲ್ಲ. ಈ ಹಿನ್ನೆಲೆಯಲ್ಲಿ ಅರ್ಜಿದಾರರು ಸುಪ್ರೀಂ ಕೋರ್ಟ್‌ ಮೊರೆಹೋಗಿದ್ದಾರೆ.

ಈ ಲೋಪ ಆರ್‌ಪಿಡಬ್ಲ್ಯೂಡಿ ಕಾಯಿದೆ ಮಾತ್ರವಲ್ಲದೆ ವಿಕಲಾಂಗ ವ್ಯಕ್ತಿಗಳಿಗೆ ಪರೀಕ್ಷೆಗಳನ್ನು ನಡೆಸುವ ಕುರಿತು ಭಾರತ ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತದೆ ಎಂದು ಅವರು ದೂರಿದ್ದಾರೆ.