ಮನೆ ಕಾನೂನು ಭಾರತದ ನ್ಯಾಯಾಲಯಗಳ ಜಾಗತಿಕ ನಿರ್ಬಂಧ ಆದೇಶದಿಂದ ಇತರೆ ದೇಶಗಳ ಸಾರ್ವಭೌಮತ್ವ ಉಲ್ಲಂಘನೆ: ಎಕ್ಸ್‌ ಕಾರ್ಪ್‌ ವಿವರಣೆ

ಭಾರತದ ನ್ಯಾಯಾಲಯಗಳ ಜಾಗತಿಕ ನಿರ್ಬಂಧ ಆದೇಶದಿಂದ ಇತರೆ ದೇಶಗಳ ಸಾರ್ವಭೌಮತ್ವ ಉಲ್ಲಂಘನೆ: ಎಕ್ಸ್‌ ಕಾರ್ಪ್‌ ವಿವರಣೆ

0

ಭಾರತೀಯ ನ್ಯಾಯಾಲಯಗಳು ತನ್ನ (ಎಕ್ಸ್‌ ಕಾರ್ಪ್‌) ವೇದಿಕೆಯಲ್ಲಿನ ಮಾಹಿತಿಗೆ ಸಂಬಂಧಿಸಿದಂತೆ ಜಾಗತಿಕ ನಿರ್ಬಂಧ ಆದೇಶ ಮಾಡುವುದರಿಂದ ಅಂತಾರಾಷ್ಟ್ರೀಯ ಕಾನೂನು ಉಲ್ಲಂಘನೆಯಾಗಲಿದ್ದು, ಬೇರೆಲ್ಲಾ ದೇಶಗಳ ಸಾರ್ವಭೌಮತ್ವಕ್ಕೆ ಅಡ್ಡಿ ಉಂಟು ಮಾಡಿದಂತಾಗುತ್ತದೆ ಎಂದು ದೆಹಲಿ ಹೈಕೋರ್ಟ್‌ಗೆ ಸಾಮಾಜಿಕ ಜಾಲತಾಣ ಎಕ್ಸ್‌ ಕಾರ್ಪ್‌ ತಿಳಿಸಿದೆ.

Join Our Whatsapp Group

ಭಾರತದ ವ್ಯಾಪ್ತಿಯಲ್ಲಿ ತನ್ನ ಕಾನೂನು ಅನ್ವಯಿಸುವ ಭಾರತದ ಹಕ್ಕನ್ನು ಗೌರವಿಸುವುದಾಗಿ ಎಕ್ಸ್‌ ಕಾರ್ಪ್‌ ಅಫಿಡವಿಟ್‌ನಲ್ಲಿ ತಿಳಿಸಿದೆ.

ಬೇರೆ ದೇಶಗಳ ಜನರು ಯಾವ ಮಾಹಿತಿ ನೋಡಬಹುದು ಎಂಬುದನ್ನು ಭಾರತದ ನ್ಯಾಯಾಲಯಗಳು ನಿರ್ಧರಿಸಬಹುದು ಎಂಬ ವಾದ ಒಪ್ಪುವುದಾದರೆ ಪಾಕಿಸ್ತಾನ ಮತ್ತು ಚೀನಾದ ನ್ಯಾಯಾಲಯಗಳು ಇಂಟರ್‌ನೆಟ್‌ನಲ್ಲಿ ಭಾರತೀಯರು ಏನು ಪರಿಶೀಲಿಸಬಹುದು ಅಥವಾ ಏನು ಪರಿಶೀಲಿಸಬಾರದು ಎಂಬುದನ್ನು ಆದೇಶಿಸಬಹುದಾಗಿದೆ ಎಂದು ಅಫಿಡವಿಟ್‌ನಲ್ಲಿ ಅದು ಹೇಳಿದೆ.

“ಇಂಟರ್‌ನೆಟ್‌ನಲ್ಲಿ ಭಾರತೀಯರು ಏನು ನೋಡಬೇಕು ಅಥವಾ ನೋಡಬಾರದು ಎಂಬುದನ್ನು ಬೇರೊಂದು ದೇಶ ನಿರ್ಧರಿಸುವ ಅಧಿಕಾರ ಹೊಂದುವುದನ್ನು ಊಹಿಸಿಕೊಳ್ಳಿ. ಅರ್ಜಿದಾರರ ವಾದವನ್ನು ಅರ್ಥೈಸಿದರೆ ಬೇರೆ ದೇಶದ ನ್ಯಾಯಾಲಯಗಳು ಉದಾಹರಣೆಗೆ ಪಾಕಿಸ್ತಾನ ಅಥವಾ ಚೀನಾದ ನ್ಯಾಯಾಲಯಗಳು ಆನ್‌ಲೈನ್‌ನಲ್ಲಿ ಭಾರತದ ಪ್ರಜೆಗಳು ಏನು ನೋಡಬಾರದು ಅಥವಾ ನೋಡಬಹುದು ಎಂದು ನಿರ್ದೇಶಿಸಬಹುದಾಗಿದೆ” ಎಂದು ಎಕ್ಸ್‌ ಕಾರ್ಪ್‌ ಹೇಳಿದೆ.

“ಭಾರತದಲ್ಲಿ ಪೋಸ್ಟ್‌ ಕಾಣದಂತೆ ಮಾಡಬೇಕು ಎಂದು ಆದೇಶಿಸುವ ಬದಲು ಎಲ್ಲಾ ದೇಶಗಳು ಆ ಪೋಸ್ಟ್‌ ಕಾಣದಂತೆ ನಿರ್ಬಂಧಿಸಬೇಕು ಎಂಬುದು ಅಂತಾರಾಷ್ಟ್ರೀಯ ಕಾನೂನಿಗೆ ವಿರುದ್ಧ. ಹೀಗಾಗಿ, ಇದು ಎಲ್ಲಾ ದೇಶಗಳ ಸಹಭಾಗಿತ್ವ ತತ್ವಕ್ಕೆ ವಿರುದ್ಧವಾಗಿದೆ. ಈ ಆದೇಶವುೀ ಘನ ನ್ಯಾಯಾಲಯದ ವ್ಯಾಪ್ತಿ ಮೀರಿದ್ದು, ಅಮೆರಿಕಾ ಸೇರಿದಂತೆ ಇತರೆ ದೇಶಗಳ ಸಾರ್ವಭೌಮತ್ವ ಅಡ್ಡಿಯಾಗಬಹುದು. ಅಲ್ಲಿ ಭಿನ್ನವಾದ ಕಾನೂನು ಮತ್ತು ರಕ್ಷಣೆ ಅನ್ವಯಿಸುತ್ತದೆ” ಎಂದು ಎಕ್ಸ್‌ ಕಾರ್ಪ್‌ ಹೇಳಿದೆ.

ಭಾರತದ ಹೊರಗೆ ಇಲ್ಲಿನ ನ್ಯಾಯಾಲಯದ ಆದೇಶವನ್ನು ಜಾರಿಗೊಳಿಸಲಾಗದು ಎಂದಿರುವ ಎಕ್ಸ್‌ ಕಾರ್ಪ್‌, ಬಾಬಾ ರಾಮ್‌ದೇವ್‌ ಪ್ರಕರಣದಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಭೌಗೋಳಿಕ ನಿರ್ಬಂಧ ಆದೇಶವು ದೋಷಪೂರಿತ ಎಂದಿದೆ.

ಐಟಿ ಕಾಯಿದೆಯ ಸೆಕ್ಷನ್‌ 79 ಅಡಿ ಜಾಗತಿಕವಾಗಿ ಮಾಹಿತಿ ತೆಗೆಯಲು ಆದೇಶಿಸಬಹುದು ಎಂದು ದೆಹಲಿ ಹೈಕೋರ್ಟ್‌ ಹೇಳಿದೆ. ಆದರೆ, ಈ ಸೆಕ್ಷನ್‌ ವಿನಾಯಿತಿ ನಿಬಂಧನೆ ಮಾತ್ರ ಆಗಿದೆ ಎಂದು ವಾದಿಸಿದೆ.

ಹೈಕೋರ್ಟ್‌ ಆದೇಶದ ಹೊರತಾಗಿಯೂ ಪತ್ರಕರ್ತ ರಜತ್‌ ಶರ್ಮಾ ವಿರುದ್ಧದ ಸಾಮಾಜಿಕ ಮಾಧ್ಯಮದಲ್ಲಿನ ಪೋಸ್ಟ್‌ ಅನ್ನು ಭಾರತದಲ್ಲಿ ಮಾತ್ರ ತೆಗೆಯಲಾಗಿದೆ. ಜಾಗತಿಕ ಮಟ್ಟದಲ್ಲಿ ತೆಗೆದಿಲ್ಲ ಎಂದು ಆಕ್ಷೇಪಿಸಿ ಸಲ್ಲಿಸಲಾಗಿರುವ ನ್ಯಾಯಾಂಗ ನಿಂದನೆ ಅರ್ಜಿಗೆ ಎಕ್ಸ್‌ ಕಾರ್ಪ್‌ ಆಕ್ಷೇಪಣೆ ಸಲ್ಲಿಸಿದೆ.

ವಿದ್ಯುನ್ಮಾನ ಮಾಧ್ಯಮದ ಚರ್ಚಾ ಕಾರ್ಯಕ್ರಮದಲ್ಲಿ ರಜತ್‌ ಶರ್ಮಾ ಕಾಂಗ್ರೆಸ್‌ ನಾಯಕಿ ರಾಗಿಣಿ ನಾಯಕ್‌ ವಿರುದ್ಧ ಆಕ್ಷೇಪಾರ್ಹವಾದ ಪದ ಬಳಕೆ ಮಾಡಿದ್ದರು ಎಂದು ಕಾಂಗ್ರೆಸ್‌ ನಾಯಕರು ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಶರ್ಮಾ ಅವರು ಕಾಂಗ್ರೆಸ್‌  ಮುಖಂಡರಾದ ಜೈರಾಮ್‌ ರಮೇಶ್‌, ಪವನ್‌ ಖೇರಾ, ರಾಗಿಣಿ ನಾಯಕ್‌ ವಿರುದ್ಧ ಮಾನಹಾನಿ ದಾವೆ ಹೂಡಿದ್ದರು. ಇದರ ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್‌ನ ಏಕಸದಸ್ಯ ಪೀಠವು ಟ್ವೀಟ್‌ ಅಳಿಸಿ ಹಾಕುವಂತೆ ಕಾಂಗ್ರೆಸ್‌ ನಾಯಕರು ಹಾಗೂ ಎಕ್ಸ್‌ ಕಾರ್ಪ್‌ ವಿರುದ್ಧ ಮಧ್ಯಂತರ ಆದೇಶ ಮಾಡಿತ್ತು.