ಬೆಂಗಳೂರು: ಲೋಕಸಭೆ ಚುನಾವಣೆ ಕಾವು ಜೋರಾಗಿರುವ ಬೆನ್ನಲ್ಲೆ ಚುನಾವಣೆ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ ಚುನಾವಣಾ ಪ್ರಚಾರ ಹಿನ್ನಲೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನ್ಯಾಯಮೂರ್ತಿ ಜೆ.ಪ್ರೀತ್ ಅವರು ಆದೇಶಿಸಿದ್ದಾರೆ.
ಚುನಾವಣಾ ಅಧಿಕಾರಿಗಳ ಅನುಮತಿಯಿಲ್ಲದೇ ಬೆಳಗಾವಿಯ ಹಿಂಡಲಗಾದಲ್ಲಿ ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಸಭೆ ನಡೆಸಿದ ಆರೋಪ ಕೇಳಿಬಂದಿತ್ತು. ಈ ಹಿನ್ನಲೆ ಚುನಾವಣಾ ಅಧಿಕಾರಿ ಮಹಾಂತೇಶ್ ಅವರು ಖಾಸಗಿ ದೂರು ದಾಖಲಿಸಿದ್ದರು. ಇದೀಗ ಏಪ್ರಿಲ್.30ರಂದು ಕೋರ್ಟ್ ಗೆ ಹಾಜರಾಗುವಂತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ಗೆ ಸಮನ್ಸ್ ಜಾರಿಗೆ ಕೋರ್ಟ್ ಆದೇಶಿಸಿದೆ.
ಇಂದು(ಮಾ.28) ಬೆಳಗಾವಿಯಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವೆ, ‘ ಲೋಕಸಭೆಗೆ ನಿಂತಿರುವ ತಮ್ಮ ಮಗ ಮೃಣಾಲ್ ಪ್ರತಿಸ್ಪರ್ಧಿ ಮತ್ತು ಹಿರಿಯ ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ವಿರುದ್ಧ ಕಿಡಿಕಾರಿದ್ದರು. ಬಿಜೆಪಿ ಕಾರ್ಯಕರ್ತರುಗಳೇ ಶೆಟ್ಟರ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ ಅಂದರೆ ಅವರ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಿದೆ. ಅವರು ಮಾತ್ರವಲ್ಲ ಬೆಳಗಾವಿ ಕ್ಷೇತ್ರದ ಸ್ವಾಭಿಮಾನಕ್ಕೂ ಧಕ್ಕೆಯಾಗಿದೆ. ಬೆಳಗಾವಿ ತಮ್ಮ ಕರ್ಮಭೂಮಿ ಎಂದು ಹೇಳುವ ಅವರಿಗೆ ನಾಚಿಕೆಯಾಗಬೇಕು, ಬೆಳಗಾವಿ ಜಿಲ್ಲೆಗೆ ಅವರು ನೀಡಿರುವ ಕೊಡುಗೆದಾದರೂ ಏನು? ಎಂದು ವಾಗ್ದಾಳಿ ನಡೆಸಿದ್ದರು.