ಇಂಫಾಲ: ಜನಾಂಗೀಯ ಸಂಘರ್ಷದಿಂದ ಬೂದಿಮುಚ್ಚಿದ ಕೆಂಡದಂತಿದ್ದ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ.
ಇಂಫಾಲ್ ಪಶ್ಚಿಮ ಜಿಲ್ಲೆಯ ಸಿಂಗ್ಡಾ ಮತ್ತು ಕಾಂಗ್ ಚುಪ್ ನಡುವಿನ ಹಳ್ಳಿಯಲ್ಲಿ ಅಪರಿಚತ ವ್ಯಕ್ತಿಗಳು ಗುಂಡಿನ ದಾಳಿ ನಡೆಸುತ್ತಿದ್ದು, ದಾಳಿಯಲ್ಲಿ ಇಬ್ಬರು ಪೊಲೀಸರು ಸೇರಿ 10 ಮಂದಿ ಗಾಯಗೊಂಡಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.
ಗಾಯಗೊಂಡವರಲ್ಲಿ ಏಳು ಮಂದಿಯನ್ನು ಲ್ಯಾಂಫೆಲ್‌ನ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ ಮತ್ತು ಮೂವರು ಇಂಫಾಲ್ ನ ರಾಜ್ ಮೆಡಿಸಿಟಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.
ಶಸ್ತ್ರಸಜ್ಜಿತ ಉಗ್ರರು ಕಾಂಗ್ ಚುಪ್ ಚಿಂಗ್ ಖಾಂಗ್ ಪ್ರದೇಶದ ಸಮೀಪದಲ್ಲಿರುವ ಮೈತೆಯ್ ಗ್ರಾಮಗಳ ಕಡೆಗೆ ಗುಂಡು ಹಾರಿಸಿದ್ದಾರೆಂದು ತಿಳಿದುಬಂದಿದೆ.
ಇಂಫಾಲ್ ಪಶ್ಚಿಮದ ಸಿಂಗ್ಡಾ ಕಡಂಗ್ ಬಂಡ್ ಪ್ರದೇಶದ ಸಮೀಪವಿರುವ ಗ್ರಾಮಗಳ ಮೇಲೂ ದಾಳಿ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ನಡುವೆ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿದ್ದು, ಗುಂಡಿನ ಕಾಳಗ ಕೆಲವು ಗಂಟೆಗಳ ಕಾಲ ಮುಂದುವರೆದಿದ್ದು, ಸ್ಥಳದಲ್ಲಿ ಯಾವುದೇ ಸಾವು ನೋವುಗಳ ವರದಿಯಾಗಿಲ್ಲ ಎನ್ನಲಾಗಿದೆ.