ಬೆಂಗಳೂರು: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ ಮಂಡಳಿ ಅಧ್ಯಕ್ಷ ವಿರೂಪಾಕ್ಷಪ್ಪ ಮಾಡಾಳ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಲಂಚ ಸ್ವೀಕಾರ ಪ್ರಕರಣದಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ಇವರ ಪುತ್ರ ಪ್ರಶಾಂತ್ ಮಾಡಾಳ್ ಬಂಧನದ ಬಳಿಕ ರಾಜೀನಾಮೆ ನಿರ್ಧಾರ ಕೈಗೊಂಡಿದ್ದಾರೆ.
ಸಿಎಂ ಸೂಚನೆ ಮೇರೆಗೆ ವಿರೂಪಾಕ್ಷಪ್ಪ ರಾಜೀನಾಮೆ ಸಲ್ಲಿಸಿದ್ದು, ಆಪ್ತರ ಮೂಲಕ ಸಿಎಂ ಕಚೇರಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ.
“ನಿನ್ನೆ ನಡೆದ ದಾಳಿಗೂ ನನಗೂ ಸಂಬಂಧವಿಲ್ಲ. ಇದು ನನ್ನ ಕುಟುಂಬದ ವಿರುದ್ಧ ಷಡ್ಯಂತ್ರವಾಗಿದೆ. ಆದರೂ ನನ್ನ ಮೇಲೆ ಆಪಾದನೆ ಬಂದಿರುವುದರಿಂದ ನಾನು ನೈತಿಕ ಹೊಣೆ ಹೊತ್ತು ಕೆಎಸ್ಡಿಎಲ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ನನ್ನ ರಾಜೀನಾಮೆ ಅಂಗೀಕರಿಸಬೇಕು” ಎಂದು ಮುಖ್ಯಮಂತ್ರಿಗಳಿಗೆ ರಾಜೀನಾಮೆ ಪತ್ರದಲ್ಲಿ ವಿರೂಪಾಕ್ಷಪ್ಪ ಮಾಡಾಳ್ ಮನವಿ ಮಾಡಿದ್ದಾರೆ.
ನಿನ್ನೆ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆಗೆ ರಾಸಾಯನಿಕ ಪೂರೈಸುವ ಟೆಂಡರ್ ನೀಡಲು ಟೆಂಡರ್ ಆಕಾಂಕ್ಷಿಯೊಬ್ಬರಿಂದ 40 ಲಕ್ಷ ರೂ ಲಂಚ ಸ್ವೀಕರಿಸುತ್ತಿದ್ದ ವೇಳೆ ವಿರೂಪಾಕ್ಷ ಮಾಡಾಳ್ ಅವರ ಪುತ್ರ ಪ್ರಶಾಂತ್ ಮಾಡಾಳ್ ಕ್ರೆಸೆಂಟ್ ರಸ್ತೆಯ ತಮ್ಮ ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದರು. ತನಿಖೆ ತೀವ್ರಗೊಳಿಸಿದ್ದ ಲೋಕಾ ಅಧಿಕಾರಿಗಳು ಪ್ರಶಾಂತ್ ಮಾಡಾಳ್ ಮನೆಯಲ್ಲಿ ದೊರೆತ 6 ಕೋಟಿ ರೂ ಹಣವನ್ನು ಜಪ್ತಿ ಮಾಡಿದ್ದರು.