ನಭೋ ಮಂಡಲದಲ್ಲಿ ಸೂರ್ಯ ಮಂಡಲಕ್ಕಿಂತಲೂ ಅನೇಕ ಗುಣಿತವಾಗಿ ಕಾಂತಿಮಂತವಾಗಿ ಪ್ರಕಾಶಿಸುತ್ತಿರುವ ಅಗಸ್ತ್ರ ಪದಕ್ಕೆ ಹತ್ತಿರದಲ್ಲಿಯೇ ಮೂರು ನಕ್ಷತ್ರಾವಸ್ಥಾನಗಳಿವೆ. ಇವುಗಳಲ್ಲಿ ಉತ್ತರ ದಿಕ್ಕಿನಲ್ಲಿ ನೆಲೆಸಿರುವುದು ಐರಾವತ ನಕ್ಷತ್ರಾವಸ್ಥಾನ. ದಕ್ಷಿಣದಲ್ಲಿರುವುದು ಜಾರದ್ಗವ. ಇವೆರಡಕ್ಕೂ ಮಧ್ಯ ತಳವು ವೈಶ್ವಾನರ ನಕ್ಷತ್ರಾವಸ್ಥಾನ.
ನಕ್ಷತ್ರಾವಸ್ಥಾನಗಳು ಮೂರರಲ್ಲೂ ಒಂದೊಂದು ಕಡೆ ಮೂರರಂತೆ ಬೀದಿಗಳಿವೆ. ಒಂದೊಂದು ಬೀದಿಗಳಲ್ಲಿಯೂ ಮೂರರಂತೆ ನಕ್ಷತ್ರಗಳು ಕಾಣಿಸುತ್ತವೆ. ಉತ್ತರ ದಿಕ್ಕಿನ ಭಾಗದಲ್ಲಿರುವ ಐರಾವತಾ ಸ್ಥಾನದಲ್ಲಿ ನಾಗಬೀಧಿ, ನಾಗಬೀಧಿ, ಐರಾವತೀ ಬೀಧಿಗಳಿವೆ. ಇವುಗಳ ಸ್ವರೂಪಗಳನ್ನು ಸುಲಭವಾಗಿಯೇ ಊಹಿಸಬಹುದು. ಅಶ್ವಿನೀ, ಭರಣೀ, ಕೃತಿಕಗಳ ಸಮುದಾಯವು ನಾಗಬೀಧಿ, ರೋಹಿಣಿ, ಮೃಗಶಿರ ಆರ್ದ್ರಗಳ ಕುರುಂಬವು ಗಜಬೀಧಿ, ಪುನರ್ವಸು, ಪುಷ್ಯಮಿ, ಆಶ್ಲೇಷಗಳ ಕದಂಬ ಐರಾವತೀ ಬೀಧಿ. ಜಾಗದ್ಗವ ನಕ್ಷತ್ರಾವಸ್ಥಾನದಲ್ಲಿ ಆರ್ಷಭಿ, ಗೋವಿಧಿ ಜಾರದ್ದವೀ ಬೀಧಿಗಳು ಭಾಸಿಸುತ್ತಿವೆ. ಮಖ, ಪೂರ್ವಫಲ್ಗುಣೀ, ಉತ್ತರ ಫಲ್ಗುಣೀ, ನಕ್ಷತ್ರಗಳ ಸಮಾಹಾರವು ಆರ್ಷಭೀಬೀಧಿ. ಹಸ್ತ, ಚಿತ್ರ, ಸ್ವಾತಿ ನಕ್ಷತ್ರಗಳ ಸಂದೋಹವು ಗೋಬಿಧಿ, ವಿಶಾಖ, ಅನೂರಾಧ, ಜೇಷ್ಠಗಳ ಸಮೂಹ ಜಾರದ್ಭವೀ ಬೀಧಿ. ದಕ್ಷಿಣದಲ್ಲಿ ದ್ಯೋತಿಸುತ್ತಿರುವ ವೈಶ್ವಾನರ ಸ್ಥಾನದಲ್ಲಿ ಅಜಬೀಧಿ, ಮೃಗಬೀಧಿ, ವೈಶ್ವಾನರೀಬೀಧಿ ಗೋಚರಿಸುತ್ತವೆ. ಇವುಗಳಲ್ಲಿ ಅಜಬೀಧಿ ಮೂಲ, ಪೂರ್ವಾಷಾಢ, ಉತ್ತರಾಷಾಢಗಳ ಬೃಂದವಿರುವ ಪ್ರದೇಶ,
ಶ್ರವಣ, ಧನಿಷ್ಠ, ಶತಭಿಷ ಸಂಘಾತ ಮೃಗಬೀಧಿ, ಪೂರ್ವಾಭಾದ್ರ,ಉತ್ತರಾಭಾದ್ರ, ರೇವತಿ ನಕ್ಷತ್ರಗಳ ಸಮಾವೇಶ ಸ್ಥಳವು ವೈಶ್ವಾನರ ರಥ, ಅಗಸ್ತ ಪದಕ್ಕೂ ಉತ್ತರದಲ್ಲಿ ಅಜಬೀಧಿಗೂ ದಕ್ಷಿಣ ಭಾಗದಲ್ಲಿ ವೈಶ್ವಾನರ ಪಥಕ್ಕೂ ಆವರಣದಲ್ಲಿ ಮೋಕ್ಷ ಮಾರ್ಗೋಪಾಧಿಯಾದ ಪಿತೃಪಥವಿದೆ. ಇದು ಪಿತೃದೇವತೆಗಳಿಗೂ, ಮಂತ್ರ’ದ್ರಷ್ಟರಾದ ಆದಿಮಹರ್ಷಿಗಳಿಗೂ ನಿಲಯ. ಬ್ರಹ್ಮದಿನವು ಗತಿಸಿ ಕಲ್ಪಾವಸಾನದಲ್ಲಿ ಪ್ರಳಯವು ಸಂಭವಿಸಿದ ನಂತರ ಪದ್ಮಗರ್ಭನು ಮತ್ತೆ ಸೃಷ್ಟಿಗೆ ಉಪಕ್ರಮಿಸಿದಾಗ ಈ ಮಹರ್ಷಿಗಳು ವೇದಮಂತ್ರಗಳನ್ನು ಪುನರುದ್ಧರಿಸಿ ಲೋಕಗಳಲ್ಲಿ ವೇದ ಧರ್ಮವನ್ನು ವ್ಯಾಪಿಸುವಂತೆ ಮಾಡಿದರು. ನಾಗಬೀಧಿಯ ಉತ್ತರ ದಿಕ್ಕಿನಲ್ಲಿ ಎಂಭತ್ತೆಂಟು ಸಾವಿರ ಸಿದ್ದರು ವಾಸಿಸುವ ದೈವಪದವಿದೆ. ಇವರು ಜಿತೇಂದ್ರಿಯರಾಗಿ ಧರ್ಮನಿಷ್ಠೆಯನ್ನು ಹೊಂದಿ ಕಲ್ಪಾಂತರದವರೆಗೂ ಜೀವಿಸಿ ವೈಘಾನಸತೇಜದಲ್ಲಿ ವಿಲೀನವಾಗುತ್ತಾರೆ ಸಪ್ತರ್ಷಿ ಮಂಡಲಕ್ಕೆ ಊರ್ಧ ಅಭಿಮುಖವಾಗಿ ಲಕ್ಷ ಯೋಜನಗಳ ದೂರದಲ್ಲಿ ಧ್ರುವಪದವಿದೆ. ಈ ಎರಡೂ ಪ್ರದೇಶಗಳಿಗೂ ಮಾಧ್ಯಮಿಕವಾಗಿ ನೆಲೆಸಿರುವುದು ಶ್ರೀಮನ್ನಾರಾಯಣನ ಪರಮಪದವಾದ ವಿಷ್ಣುಪದ, ವಿಷ್ಣುಪದ ಸರ್ವಜೀವರಾಶಿಗೂ ಆರಾಧ್ಯಮಂಡಲ. ಈ ಪವಿತ್ರಾವಾಸವನ್ನು ಆಧಾರವಾಗಿ ಮಾಡಿಕೊಂಡು ಜ್ಯೋತಿಶ್ಚಕ್ರವನ್ನು ಕೈಯಲ್ಲಿಡಿದಿರುವ ಧ್ರುವನು ತನ್ನ ಸ್ಥಾನದಲ್ಲಿ ಪ್ರಕಾಶಿಸುತ್ತಿದ್ದಾನೆ.
درಚತುರ್ದಶ ಭುವನಗಳಲ್ಲಿಯೂ ಸಚ್ಚರಿತರೆಂದು ಹೆಸರು ಪಡೆದ ತಪೋಧನರೂ, ಸಂಯಮಿ ಪ್ರವರ್ತರೂ, ಈ ಪರಮಪಾವನ ಪದಕ್ಕೆ ಬಂದು ಜನ್ಮ ಜನ್ಮಾಂತರಗಳ ಮಹಾಪುಣ್ಯ ಫಲವನ್ನು ಹೊಂದಿ ಧನ್ಯತೆಯನ್ನು ಪಡೆಯುತ್ತಾರೆ. ವಿಷ್ಣುಪದವು ಶ್ರೀಮನ್ನಾರಾಯಣನ ಚರಣಸ್ಮರಣೆ ಪಾರಾಯಣರಾದ ಭಕ್ತಗಣಗಳಿಗೆ ಎಷ್ಟು ಸನ್ನಿಧಾನದಲ್ಲಿದೆಯೋ ಶ್ರೀಹರಿ ಪಾದಸೇವೆಯನ್ನು ಮಾಡದ ಭಾಗ್ಯಹೀನರಿಗೆ ಅಷ್ಟು ವಿಪ್ರಕೃಷ್ಟವಾಗಿದೆ. ವಿಷ್ಣುನಿಲಯ ಸೌಭಾಗ್ಯವನ್ನು ಅಭಿವರ್ಣಿಸುವುದಕ್ಕೆ ಸಾವಿರ ನಾಲಿಗೆಗಳಿದ್ದರೂ ಸಾಲದು. ಶ್ರೀ ಮಹಾವಿಷ್ಣು ಪಾದಗಳನ್ನು ಹೃದಯದಲ್ಲಿಟ್ಟು ಪೂಜಿಸುತ್ತಾ ಬ್ರಹ್ಮಭಾವನಾಪರರಾದ ಸನಕಾದಿ ಮುನೀಂದ್ರರೂ ದಾಮೋದರನ ಸನ್ನಿಧಿಯ ಸೇವೆಯನ್ನು ಮಾಡದ ಕರ್ಮಭಾವನಾಪರರಾದ ಪುರಂದರಾದಿ ಬೃಂದಾರಕರೂ ಬ್ರಹ್ಮಕರ್ಮ ತತ್ಪರರಾಗಿ ಭವ್ಯವಿವೇಕವನ್ನು ಕಳೆದ ಪದ್ಮಗರ್ಭಾದಿಗಳೂ ಅಷ್ಟಾಕ್ಷರೀ ಮಂತ್ರವನ್ನು ಭಕ್ತಿಪೂರ್ವಕವಾಗಿ ಜಪಿಸಿ ಸಚ್ಚಿದಾನಂದ ನಿಲಯವನ್ನು ‘ತದ್ದಿಷ್ಟೋ: ಪರಮಂಪದಂ’ ಎಂದು ಸಂಭಾವಿಸುವರೋ ಆ ವಿಷ್ಣು ಪದವನ್ನು ಎಷ್ಟು ಸ್ತುತಿಸಿದರೂ ಸಾಲದಾಗುತ್ತದೆ.
ಆಕಾಶಗಂಗೆ :
ಪರಮೋತ್ತಮವಾದ ವಿಷ್ಣುಪದದಲ್ಲಿ ಶ್ರೀ ವಾಸುದೇವನ ಅಂಫ್ರೀ ಕಮಲಗಳಿಂದ ಆಕಾಶಗಂಗೆಯು ಅವತರಿಸಿದೆ. ಆತನ ಕಾಲಿನ ಹೆಬ್ಬೆರಳಿನಿಂದ ಆವಿರ್ಭವಿಸಿದ ಆ ಗಗನ ಗಂಗಾ ತರಂಗಿಣಿಯು ದಕ್ಷಿಣಾಭಿಮುಖವಾಗಿ ಕೆಳಕ್ಕೆ ಜಾರಿ ಕೈಲಾಸ ಪರ್ವತದ ಮೇಲಿನ ದೂರ್ಜಟಿಯ ಜಟಾಜೂಟವನ್ನು ತಲುಪಿ, ಅಲ್ಲಿಂದ ಅನೇಕ ಸಹಸ್ರ ಯೋಜನಗಳು ಹರಿದು ಸಪ್ತರ್ಷಿ ಮಂಡಲವನ್ನು ಪವಿತ್ರಗೊಳಿಸಿ ನಕ್ಷತ್ರಗ್ರಹ ತಾರಾಮಂಡಲಗಳ ಮೂಲಕ ಎಂಭತ್ತೆಂಟು ಸಾವಿರ ಯೋಜನಗಳ ಚಂದ್ರಮಂಡಲವನ್ನು ನೆನೆಸಿ, ಚಂದ್ರ ಚಂದ್ರಿಕಗಳಲ್ಲಿನ ಅಮೃತಧಾರಗಳ ಶೀತಲ ಶ್ವೇತಕಾಂತಿಗಳ ಹೊಳಪಿನಿಂದ ಮೇರುಪರ್ವತದ ಮೇಲಕ್ಕೆ ಧುಮುಕಿ, ದೇವೇಂದ್ರನ ರಾಜಧಾನಿಯಾದ ಅಮರಾವತಿ ಸಮೀಪದಲ್ಲಿನ ಸೀತ, ಅಲಕನಂದ, ಚಕ್ಷು, ಭದ್ರ ಎಂಬ ಹೆಸರುಗಳೊಂದಿಗೆ ನದಿಗಳಾಗಿ ಸೀಳಿ ಜಂಬೂದ್ವೀಪವನ್ನು ಪ್ರವೇಶಿಸಿತು.
ಅಮರಾವತಿಯ ದಕ್ಷಿಣದ ತುದಿಯ ಆಕಾಶಗಂಗೆಯಿಂದ ಹುಟ್ಟಿದ ಅಲಕನಂದಾ ನದಿಯು ಕೈಲಾಸ ಶಿಖರಗಳ ಮೇಲೆ ಶ್ರೀ ಮಹಾದೇವನ ಕಪರ್ಥದೊಳಕ್ಕೆ ಪ್ರವೇಶಿಸಿ ನೂರು ದಿವ್ಯ ವರ್ಷಗಳ ಕಾಲ ಅಲ್ಲೇ ಇದ್ದು ಆನಂತರ ಕಾಲಾಂತರದಲ್ಲಿ ಸೂರ್ಯವಂಶ ಸಂಜಾತನಾದ ಭಗೀರಥನ ಪ್ರಯತ್ನದಿಂದ ಭೂಮಿಗೆ ಇಳಿದುಬಂದಿತು. ಪೂರ್ವದಲ್ಲಿ ಒಮ್ಮೆ ಕಪಿಲ ಮಹರ್ಷಿಯ ಆಗ್ರಹಕ್ಕೆ ಒಳಗಾಗಿ ಆತನ ಕೋಪಾಗ್ನಿಯಲ್ಲಿ ಸುಟ್ಟು ಭಸ್ಮವಾದ ಸಗರಪುತ್ರರ ಭಸ್ಮಾವಶೇಷಗಳ ಮೇಲೆ ಅಲಕನಂದವನ್ನು ಪ್ರವಹಿಸುವಂತೆ ಮಾಡಿ ಭಗೀರಥನು ತನ್ನ ಪಿತರರಿಗೆ ಪುಣ್ಯ ಲೋಕಗಳನ್ನು ಉಂಟುಮಾಡಿದನು. ಪರಮಪಾವನವಾದ ಭಾಗೀರಥಿ ತೀರವು ರಮಾದೇವೀ ಸಮೇತ ಶ್ರೀಮನ್ನಾರಾಯಣನ ನಿತ್ಯ ನಿವಾಸ, ಐಹಿಕ ಸುಖ ಭೋಗಗಳ ಮೇಲೆ ವಿರಕ್ತಿಯನ್ನು ಹೊಂದಿ ಮೋಕ್ಷಾಭಿಲಾಷಿಯಾಗಿ ತಪಸ್ಸನ್ನು ಮಾಡಲು ಗಂಗಾನದೀ ತೀರಕ್ಕೆ ಬಂದ ವಿಷ್ಣುಭಕ್ತರಿಗೆ ಸಕಲ ಶುಭಗಳೂ ಸಂಪ್ರಾಪ್ತಿಸುತ್ತವೆ. ಗಂಗಾ ಸ್ನಾನವೆಂದರೆ ಸಕಲ ಕಲ್ಮಷ ಮಲಿನಗಳ ಅಪಹರಣ. ಪುಣ್ಯ ಕಾಲದಲ್ಲಿ ಗಂಗಾ ತರಂಗಿಣಿಗೆ ಹೋಗಿ ಶ್ರಾದ್ಧಕರ್ಮಗಳನ್ನು ಆಚರಿಸಿ ತಿಲೋದಕ ಪಿಂಡದಾನಗಳನ್ನು ಜೀವನದಲ್ಲಿ ಕನಿಷ್ಠ ಪಕ್ಷ ಒಮ್ಮೆಯಾದರೂ ಪ್ರಧಾನ ಮಾಡಿದರೆ ಸಾಕು. ಅವರ ಕುಲವೆಲ್ಲಾ ಏಳೇಳು ಜನ್ಮಗಳ ಪಾಪಗಳಿಂದ ಮುಕ್ತಿಯನ್ನು ಪಡೆಯುತ್ತಾರೆ. ದೂರದ ದೇಶಗಳಲ್ಲಿರುವವರು ವಿಷ್ಣು ಪಾದೋದ್ಭವವನ್ನು ದರ್ಶಿಸುವ ಭಾಗ್ಯವು ಉಂಟಾಗಲಿಲ್ಲವೆಂದು ಬೇಸರಪಡುವ ಅಗತ್ಯವಿಲ್ಲ. ಭಕ್ತಿಪೂರ್ವಕವಾಗಿ ಆ ಪುಣ್ಯವಾಹಿನಿಗೆ ನಮಸ್ಕರಿಸಿದರೆ ಸಾಕು. ಮೂರು ಜನ್ಮಗಳಲ್ಲಿ ಸಂಘಟಿಸಿದ ದುಃಖಭಾರವು ತೊಲಗಿ ಹೋಗಿ ಮನಸ್ಸಿಗೆ ಪ್ರಶಾಂತಿಯು ಲಭಿಸುತ್ತದೆ. ಈ ರೀತಿಯಾಗಿ ಪಾಪಾತ್ಮರಿಗೆ ಪುಣ್ಯಫಲವಾಗಿ ನೆಲೆಸಿರುವ ಗಂಗಾನದಿಗೆ ತವರಾದ ವಿಷ್ಣುಪಥದಲ್ಲಿ ಶಾಶ್ವತವಾಗಿ ವೈಷ್ಣವಾಗ್ರೇಸರನಾದ ಶಿಂಶುಮಾರ ಪ್ರಜಾಪತಿಯು ಮಕರ ರೂಪದಲ್ಲಿದ್ದುಕೊಂಡು ಪೂಜಿಸುತ್ತಿದ್ದಾನೆ.