ಬೆಂಗಳೂರು : ನಿರ್ಮಾಪಕಿಯ ಅನುಮತಿ ಪಡೆಯದೆ ನಕಲಿ ಸಹಿ ಮಾಡಿ ನಟ ವಿಷ್ಣುವರ್ಧನ್ ಅಭಿನಯದ ʻಗಂಡುಗಲಿ ರಾಮʼ ಸಿನಿಮಾ ಸೇರಿ 3 ಚಿತ್ರಗಳನ್ನು ಯೂಟ್ಯೂಬ್, ಒಟಿಟಿ ಇನ್ನಿತರ ಸೋಷಿಯಲ್ ಮೀಡಿಯಾ ಫ್ಲಾಟ್ ಫಾರ್ಮ್‌ಗೆ ಹಂಚಿಕೆ ಮಾಡಲಾಗಿದೆ.
ಕಿಡಿಗೇಡಿಗಳ ಕೃತ್ಯದಿಂದ ಕೋಟಿ ಕೋಟಿ ನಷ್ಟ ಅನುಭವಿಸುರುವ ಖ್ಯಾತ ನಿರ್ಮಾಪಕಿ ಲಕ್ಷ್ಮೀ ವೆಂಕಟೇಶ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತನ್ನ ಸಹಿಯನ್ನು ನಕಲಿ ಮಾಡಿ ಹಣ ನೀಡಿ ಚಿತ್ರ ಖರೀದಿಸಿರುವಂತೆ ದಾಖಲೆ ಸೃಷ್ಟಿ ಮಾಡಿದ್ದಾರೆ. ಆರೋಪಿಗಳಿಂದ ಒಂದು ಕೋಟಿ ರೂ. ನಷ್ಟವಾಗಿದೆ ಎಂದು ದೂರಿನಲ್ಲಿ ಅವರು ಉಲ್ಲೇಖಿಸಿದ್ದಾರೆ.
ಡಾ.ವಿಷ್ಣುವರ್ಧನ್ ನಟನೆಯ 1983 ರಲ್ಲಿ ತೆರೆಕಂಡ ʻಗಂಡುಗಲಿ ರಾಮʼ ಚಿತ್ರ ಲಕ್ಷ್ಮಿ ವೆಂಕಟೇಶ್ ಮಾಲೀಕತ್ವದ ಮಮತಾ ಮೂವೀಸ್ ಬ್ಯಾನರ್ ಅಡಿ ನಿರ್ಮಾಣಗೊಂಡಿತ್ತು. ಅದರ ಜೊತೆ ನಟ ಅಶೋಕ್, ಆರತಿ ನಟನೆಯ 1981ರ ʻಗಣೇಶ ಮಹಿಮೆʼ ಚಿತ್ರ ಸೇರಿದಂತೆ 3 ಚಿತ್ರಗಳನ್ನು ಖರೀದಿ ಮಾಡಿರೋದಾಗಿ ನಕಲಿ ದಾಖಲೆ ಸೃಷ್ಟಿ ಮಾಡಿದ್ದಾರೆ ಎಂದು ನಿರ್ಮಾಪಕಿ ಆರೋಪಿಸಿದ್ದಾರೆ. ಸದ್ಯ ಅವರು ತಮ್ಮ ಬ್ಯಾನರ್‌ನಿಂದ ಚಿತ್ರ ನಿರ್ಮಾಣವನ್ನು ಸ್ಥಗಿತಗೊಳಿಸಿದ್ದಾರೆ.
ಲಕ್ಷ್ಮಿ ವೆಂಕಟೇಶ್ ಅವರ ಹೆಸರಿನಲ್ಲಿ ನಕಲಿ ವಿಳಾಸ, ನಕಲಿ ಚೆಕ್ ಸೃಷ್ಟಿ ಮಾಡಿ, ನಂತರ ಚಿತ್ರ ಮಾರಾಟ ಮಾಡಲಾಗಿದೆ. ಎ.ಎನ್ ಜಗದೀಶ್, ಪುರುಷೋತ್ತಮ್, ರಸೂಲ್ ಎಂಬುವವರು ತಮಗೆ ಈ ರೀತಿ ಮೋಸ ಮಾಡಿದ್ದಾರೆ. ಚಿತ್ರಗಳನ್ನ ಏಜೆಂಟರ ಮೂಲಕ ಮಾರಾಟ ಮಾಡಲು ಮುಂದಾದಾಗ ವಿಚಾರ ಬಯಲಾಗಿದೆ ಎಂದು ನಿರ್ಮಾಪಕಿ ಆರೋಪಿಸಿದ್ದಾರೆ. ಈ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.














