ಮೈಸೂರು: ಪ್ರತಾಪ್ ಸಿಂಹ ನಿನ್ನ ದರ್ಪ ತೋರಿಸಬೇಡ, ಮಾಧ್ಯಮದ ಮುಂದೆ ನಿನ್ನ ವರಸೆ ಸಲ್ಲದು. ನೀನೇನು ಬೆತ್ತಲೆ ಜಗತ್ತು ಬರೆಯೋದು. ನಿನ್ನನ್ನು ನಾನೇ ಬೆತ್ತಲೆ ಮಾಡುತ್ತೇನೆ. ನಿನ್ನ ಕರ್ಮಕಾಂಡ ನನ್ನ ಬಳಿಯಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಸಂಸದ ಪ್ರತಾಪ್ ಸಿಂಹ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿ ಸೋಮಣ್ಣ, ಸಿದ್ದರಾಮಯ್ಯ ನೆಲದಿಂದ ಮೇಲೆದ್ದು ಬಂದವರು. ಪಾಪ ಸೋಮಣ್ಣ ತಳ ಮಟ್ಟದಿಂದ ಬಂದವರು. ಸಮಾಜದ ಕಷ್ಟ ಸುಖ ಅರಿತು ಬಂದವರು. ಸುಳ್ಳು ಹೇಳಿ ಸೈಟ್ ತೆಗೆದುಕೊಂಡವ ನೀನು. ಯಾರ ಬಗ್ಗೆಯೂ ನೀನು ಮಾತಾಡಬೇಡ ಎಂದು ಕಿಡಿಕಾರಿದರು.
ಉತ್ತರ ಭಾರತದವರ ಯಜಮಾನಿಕೆ ಜಾಸ್ತಿಯಾಗುತ್ತಿದೆ
ದಕ್ಷಿಣ ಭಾರತದ ಮೇಲೆ ಉತ್ತರ ಭಾರತದವರ ಯಜಮಾನಿಕೆ ಜಾಸ್ತಿಯಾಗುತ್ತಿದೆ. ಕರ್ನಾಟಕದ ಮೇಲೆ ಕೇಂದ್ರದ ಯಜಮಾನಿಕೆ ಹೆಚ್ಚಾಗುತ್ತಿದೆ. ಪ್ರತಿಯೊಂದು ವಿಚಾರಕ್ಕೂ ಜಿಎಸ್ ಟಿ ಪಾವತಿ ಮಾಡಬೇಕಾಗಿದೆ. ಅಗತ್ಯ ವಸ್ತುಗಳ ಬೆಲೆ ಏರುತ್ತಿದ್ದು, ಹೆಣ್ಣು ಮಕ್ಕಳು ಶಾಪ ಹಾಕುತ್ತಿದ್ದಾರೆ ಎಂದು
ರಾಜ್ಯದ ಜಿಎಸ್ಟಿ ಪಾಲು ಸರಿಯಾಗಿ ಸಿಗುತ್ತಿಲ್ಲ. ನಮ್ಮ ರಾಜ್ಯದ ಜಿಎಸ್ ಟಿ ಪಾಲು ಉತ್ತರದ ರಾಜ್ಯಗಳತ್ತ ಹರಿದು ಹೋಗುತ್ತಿದೆ. ನಮ್ಮ ಹೆಮ್ಮೆಯ ಅಸ್ಮಿತೆ ನಂದಿನಿಯ ಮೇಲೂ ಕಣ್ಣು ಬಿದ್ಧಿದೆ. ಉತ್ತರದವರ ಯಜಮಾನಿಕೆಯಿಂದ ನಾವು ತತ್ತರಿಸುವಂತಾಗಿದೆ ಎಂದು ಕಿಡಿಕಾರಿದರು.
ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲ್ಲ!
ದಕ್ಷಿಣ ಭಾರತದಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಅಧಿಕಾರಕ್ಕೆ ಬರಲ್ಲ. ಹಿಂದೆ ನಾವು, ಕುಮಾರಸ್ವಾಮಿ ಅಂತಹವರ ಸಹಾಯದಿಂದ ಅಧಿಕಾರಕ್ಕೆ ಬಂದಿರೋದು. ನೀವು ಇಲ್ಲಿ ಹೊಸದಾಗಿ ಹೇಳುವುದು ಏನೂ ಇಲ್ಲ. ಹೊಸದಾಗಿ ಹೇಳುವುದು ಏನಾದರೂ ಇದ್ದರೆ ಕಳ್ಳತನ ಮಾಡುವುದನ್ನು ಹೇಳಿಕೊಡಬೇಕು ಅಷ್ಟೇ. ನಿಮ್ಮ ತತ್ವ ಸಿದ್ಧಾಂತಗಳಿಂದ ಯಾವುದೇ ಕಾರಣಕ್ಕೂ ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.
ಕರ್ನಾಟಕದ ಬಿಜೆಪಿ ಕಸದ ತೊಟ್ಟಿಯಾಗಿದೆ. ಮೋದಿಯವರು ಕರ್ನಾಟಕಕ್ಕೆ ಬಂದಿದ್ದಾರೆ. ಭಾನುವಾರ ಮೈಸೂರಿಗೆ ಬಂದು ಕಸದ ತೊಟ್ಟಿಯಾಗಿರುವ ಕರ್ನಾಟಕ ಬಿಜೆಪಿಯನ್ನು ಸ್ವಚ್ಛಗೊಳಿಸಿ ಎಂದು ಮೋದಿಯವರಿಗೆ ಮನವಿ ಮಾಡಿದರು.
ಕರ್ನಾಟಕ ಸರ್ಕಾರ ಮೀಸಲಾತಿಯ ಅರ್ಥವನ್ನೇ ಹಾಳು ಮಾಡಿದೆ. ಎಸ್ಸಿ ಹಾಗೂ ಎಸ್ಟಿಗಳಿಗೆ ಸುಳ್ಳು ಹೇಳಿ ಮೋಸ ಮಾಡಿದ್ದೀರಿ. ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಎಷ್ಟು ಬಾರಿ ಚಾಟಿ ಏಟು ಕೊಟ್ಟಿದೆ. ಜಟ್ಕಾ ಕಟ್, ಹಲಾಲ್ ಎಂದು ಹೇಳುತ್ತೀರಾ. ಅದರಿಂದ ಜನರಿಗೆ ಏನು ಉಪಯೋಗ? ಮೋದಿಯವರೇ ಇದಕ್ಕೆಲ್ಲಾ ಉತ್ತರ ಕೊಡಬೇಕು ಎಂದು ಟಾಂಗ್ ನೀಡಿದರು.
ನಡ್ಡಾ ಅವರು ದಡ್ಡತನದ ಹೇಳಿಕೆ ನಿಲ್ಲಿಸಿ
ನಡ್ಡಾ ಬಿಜೆಪಿಗೆ ವೋಟ್ ಹಾಕದಿದ್ದರೆ ಮೋದಿ ಆಶೀರ್ವಾದ ಸಿಗಲ್ಲ ಎಂದು ಹೇಳುತ್ತಾರೆ. ಸ್ವಾಮಿ ನಮಗೆ ಮೋದಿ ಆಶೀರ್ವಾದ ಬೇಡ. ನಮಗೆ ಬಸವಣ್ಣ, ಕನಕದಾಸ, ಕುವೆಂಪು, ನಾರಾಯಣ ಗುರು ಅವರಂತಹ ಆಶೀರ್ವಾದ ಬೇಕು. ನಡ್ಡಾ ಅವರ ದಡ್ಡತನದ ಹೇಳಿಕೆಗಳನ್ನು ನಿಲ್ಲಿಸಬೇಕು. ಅಮಿತ್ ಶಾ ಅವರು ಕಾಂಗ್ರೆಸ್ ಗೆ ವೋಟ್ ಹಾಕಿದರೆ ಧಂಗೆ ಏಳುತ್ತೆ ಎಂದು ಹೇಳುತ್ತಾರೆ. ಛೇ, ಇವರ ಬಾಯಲ್ಲಿ ಧಂಗೆ ಪದ ಎಂದು ವ್ಯಂಗ್ಯವಾಡಿದರು.
ಮೋದಿಯವರೇ ರಾಜ್ಯಕ್ಕೆ ಏನು ಕೊಡುತ್ತೀರಾ ಎನ್ನುವುದನ್ನು ಹೇಳಿ. ದಯಮಾಡಿ ಕರ್ನಾಟಕ ಬಿಜೆಪಿ ಸರಿ ಮಾಡಿ. ಹಿಂದಿ ಹೇರಿಕೆ ಮಾಡಬೇಡಿ. ನಮ್ಮ ನಂದಿನಿ ಹೊತ್ತುಕೊಂಡು ಹೋಗಬೇಡಿ. ರಾಜ್ಯಕ್ಕೆ ನೀಡುವ ಕೊಡುಗೆಯ ಬಗ್ಗೆ ಹೇಳುವುದರ ಜೊತೆಗೆ ಬಿಜೆಪಿಯನ್ನು ಸರಿ ಮಾಡಿ ಹೋಗಿ. ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ನಾಯಕರು ತಾತ್ವಿಕ ಟೀಕೆಗಳನ್ನು ಮಾಡಿ. ತೀರಾ ವೈಯಕ್ತಿಕ ಟೀಕೆಗಳನ್ನು ಮಾಡಬೇಡಿ ಎಂದು ಕಿವಿಮಾತು ಹೇಳಿದರು.