ಕೊಲ್ಲಂ(ಕೇರಳ): ಕೇರಳ ವೈದ್ಯ ವಿದ್ಯಾರ್ಥಿನಿ ವಿಸ್ಮಯಾ ಕೊಲೆ ಪ್ರಕರಣದಲ್ಲಿ ಅಪರಾಧಿಯಾಗಿದ್ದ ವಿಸ್ಮಯಾಳ ಪತಿಗೆ ಕೋರ್ಟ್ 10 ವರ್ಷ ಜೈಲು ಶಿಕ್ಷೆ, 12.5 ಲಕ್ಷ ರೂಪಾಯಿ ದಂಡ ವಿಧಿಸಿ ಕೊಲ್ಲಂ ಹೆಚ್ಚುವರಿ ಸೆಷನ್ಸ್ ಕೋರ್ಟ್ ಆದೇಶ ಹೊರಡಿಸಿದೆ.
ವಿಸ್ಮಯಾಳ ಪತಿ ಕಿರಣ್ಕುಮಾರ್ ವಿರುದ್ಧ ದಾಖಲಾಗಿದ್ದ ವರದಕ್ಷಿಣೆ ಕಿರುಕುಳ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ್ದ ಕೋರ್ಟ್, ಪ್ರಕರಣದಲ್ಲಿ ಕಿರಣ್ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿ ಎಂದು ಘೋಷಿಸಿ ತೀರ್ಪು ಕಾಯ್ದರಿಸಿತ್ತು.
ಇಂದು ಕಿರಣ್ ವಿರುದ್ಧದ ಶಿಕ್ಷೆ ಪ್ರಮಾಣ ಪ್ರಕಟಿಸಿದ ಕೋರ್ಟ್ 10 ವರ್ಷ ಜೈಲು ಶಿಕ್ಷೆ, 12 ಲಕ್ಷ ರೂಪಾಯಿ ದಂಡ ವಿಧಿಸಿದೆ. ಅಲ್ಲದೇ, ದಂಡದಲ್ಲಿ ವಿಸ್ಮಯಾ ಅವರ ಪೋಷಕರಿಗೆ 2 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಕೋರ್ಟ್ ಸೂಚಿಸಿದೆ.
ಪ್ರಕರಣದ ಹಿನ್ನೆಲೆ: ಕೇರಳದ ನರ್ಸಿಂಗ್ ವಿದ್ಯಾರ್ಥಿನಿ ವಿಸ್ಮಯಾ ಅವರು ಜೂನ್ 21, 2021 ರಂದು ಕೊಲ್ಲಂ ಜಿಲ್ಲೆಯ ಸಾಸ್ತಾಮಕೋಟಾದಲ್ಲಿ ತನ್ನ ಗಂಡನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಘಟನೆಗೆ ಒಂದು ದಿನ ಮೊದಲು, ವಿಸ್ಮಯಾ ತನ್ನ ಸಂಬಂಧಿಕರಿಗೆ ವರದಕ್ಷಿಣೆ ಕಿರುಕುಳದ ಆರೋಪದ ಬಗ್ಗೆ ವಾಟ್ಸ್ಆ್ಯಪ್ ಸಂದೇಶಗಳನ್ನು ಕಳುಹಿಸಿದ್ದಳು. ಜೊತೆಗೆ ತನ್ನ ದೇಹದ ಮೇಲಾದ ಗಾಯಗಳು ಮತ್ತು ಹೊಡೆತದ ಗುರುತುಗಳುಳ್ಳ ಫೋಟೋಗಳನ್ನು ರವಾನಿಸಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದರು. ತನಿಖೆ ನಡೆಸಿದ ಪೊಲೀಸರು, ವರದಕ್ಷಿಣೆ ಕಿರುಕುಳದಿಂದ ವೈದ್ಯ ವಿದ್ಯಾರ್ಥಿನಿ ವಿಸ್ಮಯಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕೇರಳ ಪೊಲೀಸರು 500 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದರು.
ಕೋರ್ಟ್ ವಿಚಾರಣೆಯ ವೇಳೆ ವಿಸ್ಮಯಾ ಪತಿ ಕಿರಣ್, ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಪುನರುಚ್ಚರಿಸುತ್ತಿದ್ದ. ಅಲ್ಲದೇ, ಪ್ರಕರಣದಲ್ಲಿ ಕಡಿಮೆ ಶಿಕ್ಷೆಯನ್ನು ಕೋರಿದ್ದ. ತನ್ನ ತಂದೆ ಮತ್ತು ತಾಯಿ ವಯಸ್ಸಾದವರು ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರನ್ನು ನೋಡಿಕೊಳ್ಳಲು ತನ್ನ ಹೊರತು ಬೇರೆ ಯಾರೂ ಇಲ್ಲ ಎಂದು ಕೋರ್ಟ್ಗೆ ತಿಳಿಸಿದ್ದ. ಇದಲ್ಲದೇ, ಸಾರಿಗೆ ಇಲಾಖೆಯಲ್ಲಿ ಮೋಟಾರು ವಾಹನ ನಿರೀಕ್ಷಕರಾಗಿ ಕೆಲಸ ಮಾಡುತ್ತಿದ್ದ ಕಿರಣ್ ಕುಮಾರ್ ನನ್ನು ಪೊಲೀಸರು ಬಂಧಿಸಿದ ಹಿನ್ನೆಲೆಯಲ್ಲಿ ಸೇವೆಯಿಂದ ವಜಾಗೊಳಿಸಲಾಗಿದೆ.
ತೀರ್ಪು ಎಚ್ಚರಿಕೆ ಗಂಟೆ: ತನ್ನ ಮಗಳ ಸಾವಿಗೆ ಕಾರಣನಾದ ಅಪರಾಧಿ ಕಿರಣ್ಕುಮಾರ್ಗೆ ಶಿಕ್ಷೆ ಪ್ರಕಟವಾದ ಸುದ್ದಿ ಕೇಳಿ ವಿಸ್ಮಯಾ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ. ತನಿಖಾ ತಂಡಕ್ಕೆ ಧನ್ಯವಾದ ಅರ್ಪಿಸಿದ ಅವರು, ಈ ತೀರ್ಪು ವರದಕ್ಷಿಣೆ ಕೇಳುವವರಿಗೆ ಎಚ್ಚರಿಕೆ ಗಂಟೆಯಾಗಬೇಕು ಎಂದು ಹೇಳಿದ್ದಾರೆ.