ಮಾಜಿ ಸಂಸದ ವೈ ಎಸ್ ವಿವೇಕಾನಂದ ರೆಡ್ಡಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡಪ ಲೋಕಸಭಾ ಸದಸ್ಯ ವೈ ಎಸ್ ಅವಿನಾಶ್ ರೆಡ್ಡಿ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವ ತೆಲಂಗಾಣ ಹೈಕೋರ್ಟ್ ಆದೇಶ ಪ್ರಶ್ನಿಸಿ ವಿವೇಕಾನಂದ ರೆಡ್ಡಿ ಪುತ್ರಿ ಸುನೀತಾ ನರ್ರೆಡ್ಡಿ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಪ್ರಕರಣವನ್ನು ಪಟ್ಟಿ ಮಾಡುವ ಸಂಬಂಧ ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ರಾಜೇಶ್ ಬಿಂದಾಲ್ ಅವರ ನೇತೃತ್ವದ ರಜಾಕಾಲೀನ ವಿಭಾಗೀಯ ಪೀಠದ ಮುಂದೆ ಇಂದು ಉಲ್ಲೇಖಿಸಲಾಯಿತು.
ಅರ್ಜಿದಾರೆಯನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿದ್ಧಾರ್ಥ್ ಲೂಥ್ರಾ ಅವರು “ಆರೋಪಿಗಳು ಸಮನ್ಸ್ಗೆ ಸಹಕರಿಸುತ್ತಿಲ್ಲ. ತಾಯಿ ಅನಾರೋಗ್ಯದ ನೆಪದಲ್ಲಿ ತನಿಖೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ತಂದೆಯ ಕೊಲೆಯಲ್ಲಿ ಅವಿನಾಶ್ ಅವರು ಪ್ರಧಾನ ಪಿತೂರಿದಾರರಾಗಿದ್ದಾರೆ.. ನನ್ನ ತಂದೆಯನ್ನು ಕೊಲೆ ಮಾಡಲಾಗಿದೆ. ಆರಂಭದಲ್ಲಿ ಹೈಕೋರ್ಟ್ ರಕ್ಷಣೆ ನೀಡಿರಲಿಲ್ಲ” ಎಂದು ವಾದಿಸಿದರು.
ಆಗ ನ್ಯಾ. ಬೋಸ್ ಅವರು “ನಿರೀಕ್ಷಣಾ ಜಾಮೀನು ರದ್ದತಿಯನ್ನು ನೀವು ಕೋರುತ್ತಿದ್ದೀರಾ” ಎಂದು ಪ್ರಶ್ನಿಸಿದರು.
ಅದಕ್ಕೆ ಲೂಥ್ರಾ ಅವರು “ಮಾಧ್ಯಮಗಳ ವರದಿ ಆಧರಿಸಿ ನ್ಯಾಯಾಲಯ ಮುಂದುವರಿದಿದೆ. ಪರಿಶೋಧನೆಗಳಿಂದ ತಿಳಿದುಬಂದಿರುವ ವಿಚಾರಗಳನ್ನು ನೋಡಿ” ಎಂದರು. ಅಂತಿಮವಾಗಿ ಪೀಠವು ಪ್ರಕರಣವನ್ನು ಜೂನ್ 13ಕ್ಕೆ ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡಲಾಗುವುದು ಎಂದಿತು.
ಪ್ರಕರಣದಲ್ಲಿ ಅವಿನಾಶ್ ಅವರ ಪಾತ್ರ ಸಾಬೀತುಪಡಿಸಲು ಯಾವುದೇ ಸಾಕ್ಷಿಗಳು ಇಲ್ಲ. ಇಡೀ ಪ್ರಕರಣ ಅಂತೆಕಂತೆಗಳ ಆಧಾರದ ಮೇಲಿದೆ ಎಂದು ವಿವೇಕಾನಂದ ರೆಡ್ಡಿ ಕೊಲೆ ಪ್ರಕರಣದಲ್ಲಿ ಮೇ 31ರಂದು ಅವಿನಾಶ್ ರೆಡ್ಡಿಗೆ ತೆಲಂಗಾಣ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.
ಕಡಪದ ಮಾಜಿ ಸಂಸದ ವಿವೇಕಾನಂದ ರೆಡ್ಡಿ ಅವರನ್ನು ಅವರ ಮನೆಯ ಮುಂದೆ 2019ರ ಮಾರ್ಚ್ನಲ್ಲಿ ಚೂರಿಯಿಂದ ಇರಿದು ಕೊಲೆ ಮಾಡಲಾಗಿತ್ತು. 2020ರಲ್ಲಿ ಆಂಧ್ರಪ್ರದೇಶ ಹೈಕೋರ್ಟ್ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿತ್ತು. ಆನಂತರ ಕಳೆದ ನವೆಂಬರ್ನಲ್ಲಿ ಪ್ರಕರಣವನ್ನು ಹೈದರಾಬಾದ್ ಸಿಬಿಐ ನ್ಯಾಯಾಲಯಕ್ಕೆ ವಹಿಸಿತ್ತು. ತನ್ನ ಪುನರಾವರ್ತಿತ ಆದೇಶದ ಹೊರತಾಗಿಯೂ ಜಾಮೀನು ಅರ್ಜಿ ನಿರ್ಧರಿಸದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಪ್ರಕರಣವನ್ನು ತೆಲಂಗಾಣ ಹೈಕೋರ್ಟ್ನ ರಜಾಕಾಲೀನ ಪೀಠಕ್ಕೆ ವಿಚಾರಣೆ ನಡೆಸಲು ಆದೇಶಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ತೆಲಂಗಾಣ ಹೈಕೋರ್ಟ್ ಅವಿನಾಶ್ ರೆಡ್ಡಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಇದನ್ನು ಈಗ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲಾಗಿದೆ.