ಮನೆ ರಾಜಕೀಯ ಮಕರ ಸಂಕ್ರಾಂತಿ ಬಳಿಕ ಒಕ್ಕಲಿಗರ ಸಭೆ; ಸಂಘ ಒಮ್ಮತದ ತೀರ್ಮಾನ

ಮಕರ ಸಂಕ್ರಾಂತಿ ಬಳಿಕ ಒಕ್ಕಲಿಗರ ಸಭೆ; ಸಂಘ ಒಮ್ಮತದ ತೀರ್ಮಾನ

0

ಬೆಂಗಳೂರು: ಜಾತಿ ಗಣತಿ (ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ)ಗೆ ಸಂಬಂಧಿಸಿದಂತೆ ಮಕರ ಸಂಕ್ರಾಂತಿ ಅನಂತರ ಸಭೆ ನಡೆಸಿ ಒಮ್ಮತದ ತೀರ್ಮಾನ ಕೈಗೊಳ್ಳಲು ಒಕ್ಕಲಿಗರ ಸಂಘ ತೀರ್ಮಾನಿಸಿದೆ.

Join Our Whatsapp Group

ಕಾಂಗ್ರೆಸ್‌ನಲ್ಲಿ “ಡಿನ್ನರ್‌ ಸಭೆ’ ಮುಂದೂಡಿಕೆ ವಿಚಾರ ತಾರಕಕ್ಕೇರಿದ ಪ್ರಸ್ತುತ ಸಂದರ್ಭದಲ್ಲೇ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಸದಾಶಿವನಗರದಲ್ಲಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮನೆಯಲ್ಲಿ ಸಭೆ ನಡೆಸಲು ಆಗಮಿಸಿದ್ದರು. ಆದರೆ ಈ ಹಂತದಲ್ಲಿ ಹಲವು ಅನಗತ್ಯ ಗೊಂದಲಗಳಿಗೆ ಎಡೆಮಾಡಿಕೊಡಲಿದೆ ಎಂಬ ಹಿನ್ನೆಲೆಯಲ್ಲಿ ಸಭೆಯನ್ನು ಮುಂದೂಡಲಾಯಿತು. ಮೂಲಗಳ ಪ್ರಕಾರ ಸಂಕ್ರಾಂತಿ ಅನಂತರ ಸಭೆ ಸೇರಲು ತೀರ್ಮಾನಿಸಲಾಗಿದೆ.

ಈ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್‌, ಜಾತಿ ಗಣತಿ ವಿಚಾರವಾಗಿ ಈಗಲೇ ಸಭೆ ಮಾಡಿ ಗೊಂದಲ ಸೃಷ್ಟಿಸುವುದು ಬೇಡ, ಸಭೆಯನ್ನು ಮುಂದೂಡುವಂತೆ ನಾನೇ ಒಕ್ಕಲಿಗರ ಸಂಘದ ಪದಾಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

ಒಕ್ಕಲಿಗರ ಸಂಘದ ಪದಾಧಿಕಾರಿಗಳ ಜತೆ ಸಭೆ ಬಗ್ಗೆ ಕೇಳಿದಾಗ, ನಾನು ಯಾವುದೇ ಸಭೆ ಮಾಡಿಲ್ಲ. ಅದರ ಆವಶ್ಯಕತೆಯೂ ನನಗಿಲ್ಲ. ಇಂದು (ಜ. 12) ಜಾತಿ ಗಣತಿ ವಿಚಾರವಾಗಿ ಪ್ರತ್ಯೇಕವಾಗಿ ಸಭೆ ಮಾಡಬೇಕು ಎಂದು ತೀರ್ಮಾನಿಸಿದ್ದರು. ಆದರೆ ಈ ಹಂತದಲ್ಲಿ ಸಭೆಯಿಂದ ಅನಗತ್ಯ ಗೊಂದಲ ಉಂಟಾಗುವುದು ಬೇಡ. ಈ ಸಭೆಯನ್ನು ಮುಂದಕ್ಕೆ ಹಾಕಿ, ಯಾರಿಗೂ ಅನ್ಯಾಯವಾಗದಂತೆ ನಾವು ನೋಡಿಕೊಳ್ಳುತ್ತೇವೆ. ಆದಿಚುಂಚನಗಿರಿ ಸ್ವಾಮೀಜಿ ಜತೆಗೂ ತಾವು ಮಾತನಾಡುವುದಾಗಿ ಭರವಸೆ ನೀಡಿದ್ದೇನೆ’ ಎಂದು ತಿಳಿಸಿದರು.