ಮೈಸೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮಹತ್ವದ್ದಾಗಿದ್ದು, ದೇಶದ ಬೆಳವಣಿಗೆ ಮತ್ತು ಭವಿಷ್ಯದ ದೃಷ್ಟಿಯಿಂದ ಪ್ರತಿಯೊಬ್ಬರೂ ಮತದಾನ ಮಾಡಬೇಕು ಎಂದು ಮೈಸೂರು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಡಿ.ಗಿರೀಶ್ ಅವರು ಹೇಳಿದರು.
ಅವರು ಇಂದು ಜಿಲ್ಲಾ ಹಾಗೂ ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ನಗರದ ರುಡ್ ಸೆಟ್ ಸಂಸ್ಥೆಯಲ್ಲಿ ಶುಕ್ರವಾರ ನಡೆದ ಮತದಾನದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮತದಾನ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಜಗತ್ತಿನಲ್ಲಿಯೇ ಅತಿದೊಡ್ಡ ಸಂವಿಧಾನ ಹೊಂದಿರುವ ಭಾರತ ದೇಶದಲ್ಲಿ ಚುನಾವಣೆ ವ್ಯವಸ್ಥೆಯು ದೇಶದ ಅಭಿವೃದ್ಧಿಗೆ ಬಹುಮುಖ್ಯವಾದ ಪಾತ್ರವಹಿಸುತ್ತದೆ. ಈ ಹಿನ್ನೆಲೆ ನೀವು ಮತದಾನ ಮಾಡಿ ಹಾಗೂ ನಿಮ್ಮ ಕುಟುಂಬದವರಿಗೂ ಮತದಾನ ಮಾಡಲು ಸಲಹೆ ನೀಡಿ ಎಂದು ಕರೆ ನೀಡಿದರು.
ಹೊಸದಾಗಿ ಮತದಾರ ಪಟ್ಟಿಗೆ ಹೆಸರು ಸೇರಿಸಲು ನಿಮ್ಮ ವ್ಯಾಪ್ತಿಯ ಮತಗಟ್ಟೆ ಅಧಿಕಾರಿಗಳನ್ನು ಭೇಟಿ ಮಾಡಿ, ಅಗತ್ಯ ದಾಖಲಾತಿಗಳನ್ನು ನೀಡುವ ಮೂಲಕ ನಮೂನೆ-6 ರಲ್ಲಿ ಮತದಾರ ಪಟ್ಟಿಗೆ ನಿಮ್ಮ ಹೆಸರು ಸೇರ್ಪಡೆಗೊಳಿಸಿ. ಮತದಾನ ಗುರುತಿನ ಚೀಟಿ ಹೊಂದಿದ್ದರೂ ನಿಮ್ಮ ಹೆಸರನ್ನು ಮತ್ತೊಮ್ಮೆ ಪರಿಶೀಲಿಸಿಕೊಳ್ಳಿ. ಹೆಸರು, ಮಾಹಿತಿ ತಪ್ಪಿದ್ದರೆ ಹಾಗೂ ವಿಳಾಸ ವರ್ಗಾವಣೆಯನ್ನು ಕೂಡಲೇ ಮಾಡಿಸಿಕೊಳ್ಳಿ ಎಂದು ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಉಪ ತಹಸಿಲ್ದಾರ್ ಪುಟ್ಟಸ್ವಾಮಿಗೌಡ ಮಾತನಾಡಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಂಜುಳಾ ಪಾಟೀಲ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ರುಡ್ ಸೆಟ್ ಸಂಸ್ಥೆಯ ನಿರ್ದೇಶಕ ಆನಂದನಾಯಕ, ಮೈಸೂರು ತಾಲ್ಲೂಕಿನ ಎಲ್.ಸಿ.ಸಿ ಡಿ.ಟಿ.ವೆಂಕಟೇಶ್, ಉಪನ್ಯಾಸಕರಾದ ಆರ್.ಪಾಲರಾಜು, ಲತಾಮಣಿ ಸೇರಿದಂತೆ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಯ 94 ಹಳ್ಳಿಗಳಿಂದ ತರಬೇತಿಗೆ ಆಗಮಿಸಿದ್ದ ಮಹಿಳಾ ಶಿಬಿರಾರ್ಥಿಗಳು ಹಾಜರಿದ್ದರು.