ಮನೆ ರಾಜ್ಯ ಮತದಾನ ನೋಂದಣಿ ಸಂಬಂಧದ ಜಾಥಾ ಕಾರ್ಯಕ್ರಮಕ್ಕೆ ಚಾಲನೆ

ಮತದಾನ ನೋಂದಣಿ ಸಂಬಂಧದ ಜಾಥಾ ಕಾರ್ಯಕ್ರಮಕ್ಕೆ ಚಾಲನೆ

0

ಮೈಸೂರು: ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ಮೈಸೂರು ಮಹಾನಗರ ಪಾಲಿಕೆ ಹಾಗೂ ರೋಟರಿ ಐವರಿ ಸಿಟಿ, ಮೈಸೂರು ಇವರ ಸಹಯೋಗದಲ್ಲಿ ನಗರದ ಕೋಟೆ ಆಂಜನೇಯಸ್ವಾಮಿ ದೇವಾಲಯದ ಮುಂಭಾಗ ಮತದಾನ ನೊಂದಣಿ ಬಗ್ಗೆ ಹಮ್ಮಿಕೊಳ್ಳಲಾಗಿದ್ದ ಜಾಥಾ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮತ್ತು ಜಿಪಂ ಸಿಇಓ ಕೆ.ಎಂ.ಗಾಯಿತ್ರಿ ಅವರು ಚಾಲನೆ ನೀಡಿದರು.

ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು, ಡಿಸೆಂಬರ್ 2 ಮತ್ತು 3 ರಂದು ಮತದಾರರ ಪಟ್ಟಿ ಪರಿಷ್ಕರಣೆಗಾಗಿ ಆಯಾ ಬೂತ್ ಮತಗಟ್ಟೆಗಳಲ್ಲಿ ಮತಗಟ್ಟೆ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದು, ತಪ್ಪದೇ ಸಾರ್ವಜನಿಕರು, ಯುವ ಮತದಾರರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ವೋಟರ್ ಹೆಲ್ಪ್ ಲೈನ್  ಆಪ್  ಮೂಲಕವೇ ಯುವ ಮತದಾರರು ಅರ್ಜಿ ಸಲ್ಲಿಸಬಹುದು ಹಾಗೂ ಮತಗಟ್ಟೆಯ ಬಗ್ಗೆ ಮಾಹಿತಿ ಪಡೆಯಬಹುದು ಎಂದ ಅವರು, ಯುವಜನತೆ ಮತದಾನದಲ್ಲಿ ಹೆಚ್ಚು ಪಾಲ್ಗೊಳ್ಳಲು ಹಾಗೂ ಅವರ ಹಕ್ಕಿನ ಬಗ್ಗೆ ಪ್ರೇರೇಪಿಸಲು ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಜಿಪಂ ಸಿಇಒ ಕೆ.ಎಂ.ಗಾಯಿತ್ರಿ ಅವರು ಮಾತನಾಡಿ, ನಗರ ಪ್ರದೇಶದಲ್ಲಿ ಮತದಾನದಲ್ಲಿ ಭಾಗವಹಿಸುವಿಕೆ ಕಡಿಮೆ ಇರುವ ಕಾರಣ, ಇಂತಹ ಕಾರ್ಯಕ್ರಮಗಳ ಮೂಲಕ ನೊಂದಣಿ ಪ್ರಕ್ರಿಯೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಹೆಚ್ಚೆಚ್ಚು ಜನರು ಹಾಗೂ ಯುವ ಮತದಾರರು ಭಾಗವಹಿಸಬೇಕು. ಆ ಮೂಲಕ ಆರೋಗ್ಯಕರ ಮತದಾನ ಪಟ್ಟಿ ತಯಾರಿಕೆಗೆ ಅನುವಾಗುತ್ತದೆ ಎಂದು ತಿಳಿಸಿದರು.

ಕೋಟೆ ಆಂಜನೇಯಸ್ವಾಮಿ ದೇವಾಲಯದಿಂದ ಪ್ರಾರಂಭವಾದ ಜಾಥವು ನಗರದ ಚಿಕ್ಕಗಡಿಯಾರ ವೃತ್ತದಲ್ಲಿ ಅಂತ್ಯಗೊಂಡಿತು. ವಿವಿಧ ಸಂಘ ಸಂಸ್ಥೆಯಿಂದ ನೂರಾರು ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಉಪಆಯುಕ್ತರಾದ ಸೋಮಶೇಖರ್, ಉಪಕಾರ್ಯದರ್ಶಿ(ಅಭಿವೃದ್ಧಿ) ಡಾ.ಎಂ.ಕೃಷ್ಣರಾಜು, ಕ್ರೀಡಾಪಟು ಖುಷಿ ಸೇರಿದಂತೆ ಇತರರು ಹಾಜರಿದ್ದರು.

ಹಿಂದಿನ ಲೇಖನಮೈಸೂರು: ವಿನಾಯಕ ದೇವಸ್ಥಾನದ ಕಿಟಕಿ ಗಾಜು ಒಡೆದು ಕಳ್ಳತನ
ಮುಂದಿನ ಲೇಖನಮೈಸೂರು ಮೆಡಿಕಲ್ ಕಾಲೇಜು ಹೊರಗುತ್ತಿಗೆ ನೌಕರರಿಗೆ ಪಾವತಿಯಾಗದ ವೇತನ: ನಿರ್ದೇಶಕಿ ಡಾ.ದಾಕ್ಷಾಯಿಣಿಯವರಿಗೆ ಮನವಿ ಸಲ್ಲಿಕೆ