ಬೆಂಗಳೂರು/ನವದೆಹಲಿ (Bengaluru / New Delhi): ರಾಜ್ಯಸಭೆಯ 16 ಸ್ಥಾನಗಳಿಗೆ ಇಂದು (ಜೂ.10) ಮತದಾನ ನಡೆಯಲಿದ್ದು, ಕರ್ನಾಟಕದಿಂದ ನಾಲ್ವರು ಅಭ್ಯರ್ಥಿಗಳ ಆಯ್ಕೆಗೆ ಮತದಾನ ನಡೆಯಲಿದೆ.
ಇಂದು ಬೆಳಿಗ್ಗೆ 9 ಗಂಟೆಯಿಂದ ಸಾಯಂಕಾಲ 4 ಗಂಟೆಯವರೆಗೆ ಮತದಾನ ನಡೆಯಲಿದೆ. ಸಂಜೆ 6 ಗಂಟೆಯವರೆಗೆ ಮತ ಎಣಿಕೆ ಪ್ರಕ್ರಿಯೆ ನಡೆಯಲಿದ್ದು, ನಂತರ ಫಲಿತಾಂಶ ಪ್ರಕಟವಾಗಲಿದೆ. ಮತದಾನಕ್ಕೆ ಕೊಠಡಿಯಲ್ಲಿ ಎರಡು ಕಂಪಾರ್ಟ್ ಮೆಂಟ್ ನಿರ್ಮಿಸಲಾಗಿದೆ. ಕೊಠಡಿಯೊಳಗೆ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ.
ವಿಧಾನಸೌಧದ ಕೊಠಡಿ ಸಂಖ್ಯೆ 106ರಲ್ಲಿ ಶಾಸಕರ ಮತದಾನಕ್ಕೆ ಸಕಲ ಸಿದ್ಧತೆ ಮಾಡಲಾಗಿದ್ದು, 224 ಸದಸ್ಯರು ಮತ ಚಲಾಯಿಸಲಿದ್ದಾರೆ.
ಬಿಜೆಪಿಯಿಂದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಜಗ್ಗೇಶ್, ಲೆಹರ್ ಸಿಂಗ್, ಕಾಂಗ್ರೆಸ್ ನಿಂದ ಜೈರಾಮ್ ರಮೇಶ್, ಮನ್ಸೂರ್ ಆಲಿ ಖಾನ್, ಜೆಡಿಎಸ್ ನಿಂದ ಕುಪೇಂದ್ರ ರೆಡ್ಡಿ ಕಣದಲ್ಲಿದ್ದಾರೆ. ರಾಜ್ಯಸಭೆಗೆ ಆಯ್ಕೆಯಾಗಲು ಪ್ರತಿ ಅಭ್ಯರ್ಥಿಗೆ 45 ಮತಗಳ ಅಗತ್ಯವಿರುತ್ತದೆ. ಬಿಜೆಪಿ 122, ಕಾಂಗ್ರೆಸ್ 71, ಜೆಡಿಎಸ್ ನಲ್ಲಿ 32 ಮತಗಳಿವೆ.
ಅಡ್ಡ ಮತದಾನ: ಕಾಂಗ್ರೆಸ್ ನಿಂದ ನಾಲ್ಕನೇ ಅಭ್ಯರ್ಥಿ ಹಾಕಿರುವುದರಿಂದ ಜೆಡಿಎಸ್ ಅಭ್ಯರ್ಥಿ ಗೆಲ್ಲಲು ಅಡ್ಡ ಮತದಾನ ನಡೆಯಲೇ ಬೇಕು. ಅಡ್ಡ ಮತದಾನ ತಡೆಯದಿದ್ದರೆ ಜೆಡಿಎಸ್ ಅಭ್ಯರ್ಥಿಗೆ ಸೋಲು ಖಚಿತ. ಸಂಖ್ಯಾಬಲ ತೆಗೆದುಕೊಂಡರೆ ಬಿಜೆಪಿಯ ನಿರ್ಮಲಾ ಸೀತಾರಾಮನ್, ಜಗ್ಗೇಶ್, ಕಾಂಗ್ರೆಸ್ ನ ಜೈರಾಮ್ ರಮೇಶ್ ಅವರ ಆಯ್ಕೆಗೆ ಸಮಸ್ಯೆಯಿಲ್ಲ. ಕಾಂಗ್ರೆಸ್ ನ 2ನೇ ಅಭ್ಯರ್ಥಿ ಮನ್ಸೂರ್ ಆಲಿ ಖಾನ್, ಜೆಡಿಎಸ್ ನ ಕುಪೇಂದ್ರ ರೆಡ್ಡಿ, ಬಿಜೆಪಿಯ 3ನೇ ಅಭ್ಯರ್ಥಿ ಲೆಹರ್ ಸಿಂಗ್ ಮಧ್ಯೆ ಭಾರೀ ಪೈಪೋಟಿ ಏರ್ಪಟ್ಟಿದೆ.
ಉತ್ತರ ಪ್ರದೇಶ, ತಮಿಳು ನಾಡು, ಆಂಧ್ರ ಪ್ರದೇಶ, ಬಿಹಾರ, ಒಡಿಶಾ, ಮಧ್ಯ ಪ್ರದೇಶ, ಪಂಜಾಬ್, ಛತ್ತೀಸ್ ಗಢ, ಉತ್ತರಾಖಂಡ, ಜಾರ್ಖಂಡ್ ಮತ್ತು ತೆಲಂಗಾಣಗಳಲ್ಲಿ 41 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 16 ಸ್ಥಾನಗಳಿಗೆ ನಡೆಯುವ ಚುನಾವಣಾ ರಾಜ್ಯಗಳು ಕರ್ನಾಟಕ, ಮಹಾರಾಷ್ಟ್ರ, ರಾಜಸ್ತಾನ ಮತ್ತು ಹರ್ಯಾಣಗಳಾಗಿವೆ.














