ಮತ ಎಣಿಕೆಗೂ ಮುನ್ನ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರೈಲ್ (ವಿವಿಪಿಎಟಿ) ಪರಿಶೀಲನೆ ಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನು ನಾಳೆ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.
ಪ್ರಕರಣವನ್ನು ಹಿರಿಯ ವಕೀಲೆ ಮೀನಾಕ್ಷಿ ಅರೋರಾ ಅವರು ಪ್ರಸ್ತಾಪಿಸಿದ ಬಳಿಕ ನಾಳೆ ಪ್ರಕರಣದ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್ ವಿ ರಮಣ ಒಪ್ಪಿಗೆ ಸೂಚಿಸಿದರು.
“ಮತ ಎಣಿಕೆ ಮುಗಿದ ಬಳಿಕ ವಿವಿಪ್ಯಾಟ್ ಪರಿಶೀಲನೆ ನಡೆಯುತ್ತಿದ್ದು, ಅಷ್ಟರೊಳಗೆ ಎಲ್ಲ ಚುನಾವಣಾ ಏಜೆಂಟರು ತೆರಳಿರುತ್ತಾರೆ, ಹೀಗಾಗಿ ಪಾರದರ್ಶಕತೆ ಇರುವುದಿಲ್ಲ. ಎಣಿಕೆ ಮುಗಿದ ನಂತರ ಪರಿಶೀಲನೆ ನಡೆಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಏಜೆಂಟರು, ಪಕ್ಷಗಳು, ಅಭ್ಯರ್ಥಿಗಳು ಮುಂತಾದವರು ಇರುವಾಗ ಅಂದರೆ ಮತ ಎಣಿಕೆಯ ಆರಂಭದಲ್ಲಿ ಪರಿಶೀಲನೆ ನಡೆಯಬೇಕು” ಎಂದು ತಿಳಿಸಿದರು.
ಈ ನಿಟ್ಟಿನಲ್ಲಿ 2019ರ ಮಾರ್ಗಸೂಚಿಗಳಿವೆ ಎಂದು ಸಿಜೆಐ ರಮಣ ಹೇಳಿದರು. ಆ ಮಾರ್ಗಸೂಚಿಯಲ್ಲಿ ವಿವಿಪ್ಯಾಟ್‌ಗಳ ಪರಿಶೀಲನೆಯನ್ನು 1 ಇವಿಎಂನಿಂದ 5 ಇವಿಎಂಗಳಿಗೆ ಹೆಚ್ಚಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ಕನಿಷ್ಠ ಶೇ 50ರಷ್ಟು ಮತಗಟ್ಟೆಗಳಿಗೆ ವಿವಿಪ್ಯಾಟ್ ಪೇಪರ್ ಟ್ರೈಲ್ ಭೌತಿಕ ಪರಿಶೀಲನೆ ಕೋರಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಈ ಆದೇಶ ನೀಡಲಾಗಿತ್ತು.
ಆದರೆ ಪ್ರಸ್ತುತ ಒಂದು ಮತಗಟ್ಟೆಗೆ ಸಂಬಂಧಿಸಿದಂತೆ ಒಂದು ಬೂತ್ ಮತಯಂತ್ರದ ವಿವಿಪ್ಯಾಟ್ ಮಾತ್ರ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅರೋರಾ ಹೇಳಿದ್ದಾರೆ.
ತಡವಾಗಿ ನ್ಯಾಯಾಲಯದ ಮೊರೆ ಹೋಗಿದ್ದೇಕೆ ಎಂದು ಸಿಜೆಐ ಇದೇ ವೇಳೆ ಪ್ರಶ್ನಿಸಿದರು. “ಕೊನೆಯ ಘಳಿಗೆಯಲ್ಲಿ ನೀವು ಮನವಿ ಮಾಡಿದರೆ, ನಾವು ನಿಮಗೆ ಹೇಗೆ ಸಹಾಯ ಮಾಡಬಹುದು? ನಾಡಿದ್ದೇ (ಮಾ.10) ಮತ ಎಣಿಕೆ ಇದೆ. ನಾವು ನಾಳೆ ಇದನ್ನು ಆಲಿಸಿದರೂ, ಎಲ್ಲಾ ರಾಜ್ಯಗಳಿಗೆ ಅಂತಹ ನಿರ್ದೇಶನವನ್ನು ನೀಡಲು ಸಾಧ್ಯವೇ?” ಎಂದು ಪ್ರಶ್ನಿಸಿದರು.
ಆಗ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಬಹುದು ಎಂದು ಅರೋರಾ ತಿಳಿಸಿದರು. ಇದಕ್ಕೆ ನ್ಯಾಯಾಲಯವು ಚುನಾವಣಾ ಆಯೋಗ ನಾಳಿನ ವಿಚಾರಣೆ ವೇಳೆ ಹಾಜರಿರಬೇಕು ಎಂದು ಸೂಚಿಸಿತು. “ಏನು ಮಾಡಬಹುದು ಎಂದು ನೋಡೋಣ” ಎಂಬುದಾಗಿ ಸಿಜೆಐ ಈ ಸಂದರ್ಭದಲ್ಲಿ ಹೇಳಿದರು.
ಎಲ್ಲಾ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರೈಲ್ ಪರಿಶೀಲನೆಗಾಗಿ ಕೆಲವು ತಂತ್ರಜ್ಞರು ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ 2019ರ ಮೇನಲ್ಲಿ ವಜಾಗೊಳಿಸಿತ್ತು.