ನವದೆಹಲಿ: ವಕ್ಫ್ ತಿದ್ದುಪಡಿ ಕಾಯಿದೆ-2025 ವಿರುದ್ಧ ಸಲ್ಲಿಸಲಾದ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ಮಧ್ಯಂತರ ಆದೇಶ ನೀಡಿದ್ದು, ಮುಂದಿನ ವಿಚಾರಣೆಯವರೆಗೆ ವಕ್ಫ್ ಮಂಡಳಿಗೆ ಮುಸ್ಲಿಮೇತರರ ನೇಮಕಾತಿ ಮಾಡದಂತೆ ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾಯಮೂರ್ತಿ ಸಂಜಯ್ ಕುಮಾರ್ ಮತ್ತು ನ್ಯಾಯಮೂರ್ತಿ ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ಪೀಠ, “ಯಥಾಸ್ಥಿತಿಯನ್ನು ಕಾಪಾಡಬೇಕು” ಎಂಬ ಆಧಾರದ ಮೇಲೆ ಈ ಆದೇಶ ನೀಡಿದ್ದು, ವಕ್ಫ್ ಮಂಡಳಿಗಳಿಗೆ ತಾತ್ಕಾಲಿಕ ತಡೆ ನೀಡಿದೆ. 2025ರ ತಿದ್ದುಪಡಿ, ವಕ್ಫ್ ಮಂಡಳಿಗೆ ಮುಸ್ಲಿಮೇತರರನ್ನು ಸದಸ್ಯರಾಗಿ ನೇಮಕ ಮಾಡುವ ಅವಕಾಶ ನೀಡುತ್ತದೆ. ಇದನ್ನು ಪ್ರಶ್ನಿಸಿ ಹಲವಾರು ಅರ್ಜಿಗಳನ್ನು ಸಲ್ಲಿಸಲಾಗಿದ್ದು, ಈ ಕುರಿತು ಮುಂದಿನ ತೀರ್ಪು ಬರುವವರೆಗೆ ಯಾವುದೇ ಹೊಸ ನೇಮಕಾತಿ ಮಾಡುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಅದೇ ರೀತಿ, ಈಗಾಗಲೇ ನೋಟಿಫೈ ಆಗಿರುವ ಅಥವಾ ವರ್ಷಗಳಿಂದ ಧಾರ್ಮಿಕ ಕಾರ್ಯಚಟುವಟಿಕೆಗಳಿಗೆ ಬಳಸಲ್ಪಡುವ (ವಕ್ಫ್ ಬೈ ಯೂಸರ್) ಆಸ್ತಿಗಳ ಮೇಲೆ ಯಾವುದೇ ಬದಲಾವಣೆಗಳು ಅಥವಾ ಡಿನೋಟಿಫಿಕೇಷನ್ ಕೂಡ ಮಾಡಬಾರದು ಎಂದು ಸ್ಪಷ್ಟಪಡಿಸಿದೆ. ಜಿಲ್ಲಾಧಿಕಾರಿಗಳು ಈ ಆಸ್ತಿಗಳ ಸ್ಥಿತಿಗತಿಯಲ್ಲಿ ಯಾವುದೇ ಬದಲಾವಣೆ ಮಾಡದಂತೆ ಸೂಚಿಸಲಾಗಿದೆ.
ಕೇಂದ್ರ ಸರ್ಕಾರಕ್ಕೆ ತನ್ನ ಪ್ರತಿಕ್ರಿಯೆ ನೀಡಲು ಸುಪ್ರೀಂ ಕೋರ್ಟ್ ಒಂದು ವಾರದ ಕಾಲಾವಕಾಶ ನೀಡಿದ್ದು, ಈ ಅರ್ಜಿಗಳ ಮುಂದಿನ ವಿಚಾರಣೆ ಮೇ 5ಕ್ಕೆ ನಿಗದಿಯಾಗಿದೆ.
1995ರ ವಕ್ಫ್ ಕಾಯ್ದೆಗೆ 2025ರಲ್ಲಿ ತರಲಾಗಿರುವ ತಿದ್ದುಪಡಿಗಳ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ವಿವಿಧ ವ್ಯಕ್ತಿಗಳು ಮತ್ತು ಸಂಘಟನೆಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಈ ಸಂಬಂಧ ವಿಚಾರಣೆ ಸತತ ಎರಡನೇ ದಿನ ಕೂಡ ನಡೆಯಿತು.
ಈ ತಿದ್ದುಪಡಿಗಳನ್ನು ವಿರೋಧಿಸುತ್ತಿರುವವರು, ಇವು ಸಂವಿಧಾನಬದ್ಧ ಧರ್ಮನಿರಪೇಕ್ಷತೆಯ ತತ್ತ್ವಕ್ಕೆ ವಿರುದ್ಧವಾಗಿದೆ ಎಂದು ವಾದಿಸಿದ್ದಾರೆ. ನ್ಯಾಯಾಲಯದ ಈ ಮಧ್ಯಂತರ ತೀರ್ಪು, ಮುಂದಿನ ದಿನಗಳಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗುವ ಸಾಧ್ಯತೆಯಿದೆ.















