ಹುಬ್ಬಳ್ಳಿ: ವಕ್ಫ್ ವಿಚಾರವಾಗಿ ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ. ಆದರೆ ಬಿಜೆಪಿಯವರು ರಾಜಕಾರಣಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಇವರ ಕಾಲದಲ್ಲಿ ನೋಟಿಸ್ ನೀಡಿರುವ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅವರು ಯಾವಾಗಲೂ ಸಮಸ್ಯೆ ಮೇಲೆ ಹೋರಾಟ ಮಾಡುವುದಿಲ್ಲ. ಇಡೀ ಪಕ್ಷ ಸುಳ್ಳು ಆರೋಪ ಮಾಡಿ ಜನರ ದಿಕ್ಕು ತಪ್ಪಿಸಿ ಹೋರಾಟ ಮಾಡುವುದೆ ಇವರ ಕೆಲಸ. ಇದೀಗ ಉಪ ಚುನಾವಣೆ ಹಾಗೂ ರಾಜಕಾರಣಕ್ಕಾಗಿ ವಕ್ಫ್ ವಿಚಾರವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದರು.
ಇವರ ಕಾಲದಲ್ಲಿ 246 ಪ್ರಕರಣಗಳಲ್ಲಿ ನೋಟಿಸ್ ನೀಡಿದ್ದಾರೆ. ಇದರ ಬಗ್ಗೆ ಬಿಜೆಪಿಯವರು ಯಾಕೆ ಮಾತನಾಡುತ್ತಿಲ್ಲ. ಅಂದು ನೋಟಿಸ್ ನೀಡಿದ ಬೊಮ್ಮಾಯಿ ಇದೀಗ ಉಲ್ಟಾ ಮಾತನಾಡುತ್ತಿದ್ದಾರೆ. ವಕ್ಫ್ ಆಸ್ತಿ ನಿನ್ನೆ ಮೊನ್ನೆಯದಲ್ಲ. ಎಲ್ಲಾ ಕಾಲದಲ್ಲೂ ನೋಟಿಸ್ ಕೊಟ್ಟಿದ್ದಾರೆ ಎಂದರು.
ನಾನು, ಸಚಿವರಾದ ಎಚ್.ಕೆ.ಪಾಟೀಲ್, ಕೃಷ್ಣಬೈರೇಗೌಡ ಸಭೆ ಮಾಡಿ ವಾಪಸ್ಸು ತೆಗೆದುಕೊಳ್ಳಲು ಸೂಚನೆ ನೀಡಿದ್ದೇವೆ. ವಿಚಾರಣೆ ಇಲ್ಲದೆ ಪಹಣಿ ಬದಲಾವಣೆ ಆಗಿದ್ದರೆ ರದ್ದು ಮಾಡಬೇಕು. ಯಾವುದೇ ಕಾರಣಕ್ಕೂ ರೈತರನ್ನು ಒಕ್ಕಲು ಎಬ್ಬಿಸಬಾರದು ಎಂದರು.