ಮನೆ ರಾಜಕೀಯ ವಕ್ಫ್ ಆಸ್ತಿ ವಿಚಾರ: ಬಿಜೆಪಿ ಅವಧಿಯಲ್ಲೂ ರೈತರಿಗೆ ನೋಟಿಸ್; ದಾಖಲೆ ಬಿಡುಗಡೆ ಮಾಡಿದ​ ಎಂ.ಬಿ. ಪಾಟೀಲ

ವಕ್ಫ್ ಆಸ್ತಿ ವಿಚಾರ: ಬಿಜೆಪಿ ಅವಧಿಯಲ್ಲೂ ರೈತರಿಗೆ ನೋಟಿಸ್; ದಾಖಲೆ ಬಿಡುಗಡೆ ಮಾಡಿದ​ ಎಂ.ಬಿ. ಪಾಟೀಲ

0

ಬೆಂಗಳೂರು: ವಕ್ಫ್​ ಆಸ್ತಿ ವಿಚಾರವಾಗಿ ವಿಜಯಪುರ ಜಿಲ್ಲೆಯ ಹಲವು ರೈತರಿಗೆ ನೋಟಿಸ್​​ ನೀಡಲಾಗಿದೆ. ಈ ವಿಚಾರವಾಗಿ ವಿರೋಧ ಪಕ್ಷ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯುತ್ತಿದೆ. ಇದೀಗ, ಬಿಜೆಪಿ ಸರ್ಕಾರದ ಅವಧಿಯಲ್ಲೂ ರೈತರಿಗೆ ವಕ್ಫ್​ನಿಂದ ನೋಟಿಸ್​ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ​ ದಾಖಲೆ ಸಮೇತ ತಿರುಗೇಟು ನೀಡಿದ್ದಾರೆ.

Join Our Whatsapp Group

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ಬಿಜೆಪಿಗರ ನಕಲಿ ಹಿಂದೂ ಪ್ರೇಮದ ಮೊಸಳೆ ಕಣ್ಣೀರು ಬಟಾ ಬಯಲು!.  2019ರಿಂದ 2022ರವರೆಗೆ ರಾಜ್ಯದಲ್ಲಿ ಆಡಳಿತ ನಡೆಸಿದ ಆಪರೇಷನ್ ಕಮಲದ ಸರ್ಕಾರದ ಅವಧಿಯಲ್ಲಿ ವಕ್ಫ್ ಬೋರ್ಡ್ ವಿಜಯಪುರದ ರೈತರಿಗೆ ನೀಡಿದ ನೋಟೀಸುಗಳಿವು. ಆಗ ಇರದ ಹಿಂದೂ ಪ್ರೇಮ ಈಗ ಕಪೋಲ ಕಲ್ಪಿತ ಸುಳ್ಳುಗಳ ಆಧಾರದ ಮೇಲೆ ಚಿಗುರೊಡೆದಿದ್ದು ಹೇಗೆ’ ಎಂದು ಪ್ರಶ್ನಿಸಿದ್ದಾರೆ.

ಅಭಿವೃದ್ಧಿ ಬಿಟ್ಟು ಹಿಜಾಬ್, ಹಲಾಲ್, ಉರಿ ಗೌಡ, ನಂಜೇಗೌಡ ಎಂದು ಆಡಳಿತ ನಡೆಸಿದ ನಾಟಕ ಮಂಡಳಿಯ ಮುಂದುವರೆದ ಭಾಗ ಈಗ ಪ್ರಸ್ತುತ ನಡೆಯುತ್ತಿರುವ ವಿದ್ಯಮಾನ. ಸುಳ್ಳು ಕಂತೆ ಕಟ್ಟಿ ಜನರ ಕಣ್ಣಿಗೆ ಮಣ್ಣೆರೆಚುವ ಇವರ ಕುತಂತ್ರ ಇಲ್ಲಿ ನಡೆಯುವುದಿಲ್ಲ. ವಿಜಯೇಂದ್ರ ಅವರ ಸತ್ಯಶೋಧನಾ ಸಮಿತಿ (ಅತ್ತು-ಗೋಗರೆದು ರಚನೆಗೊಂಡ ಪರಿಷ್ಕೃತ ಸತ್ಯಶೋಧನಾ ಸಮಿತಿ) ಅವರ ಸರ್ಕಾರದ ಅವಧಿಯಲ್ಲಿ ನಮ್ಮ ರೈತರಿಗೆ ಕಳುಹಿಸಿದ ನೋಟೀಸುಗಳಿಗೆ ಉತ್ತರ ಕೊಡಲಿ’ ಎಂದು ಸವಾಲು ಹಾಕಿದ್ದಾರೆ.

ನಾ ಮುಂದು, ತಾ ಮುಂದು ಎಂದು ತಮ್ಮ ಪ್ರತಿಷ್ಠೆಯ ಅಸ್ತಿತ್ವಕ್ಕಾಗಿ ಸದಾ ಸುಳ್ಳಿನಕಂತೆ ಕಟ್ಟುವ, ಜನರ ಭಾವನೆಗಳೊಂದಿಗೆ ಆಟವಾಡುವ ಇವರು, ನಮ್ಮ ರೈತರಿಗೆ ಕಳುಹಿಸಿರುವ ನೋಟಿಸುಗಳಿಗೆ ಉತ್ತರಿಸಲಿ.

ರಾಜ್ಯ ಬಿಜೆಪಿ ರಚಿಸಿರುವ ಸತ್ಯಶೋಧನಾ ಸಮಿತಿಯಲ್ಲಿ ಹಿರಿಯ ಸಂಸದರಾದ ರಮೇಶ್ ಜಿಗಜಿಣಗಿ ಹಾಗೂ ವಿಜಯಪುರದ ಶಾಸಕರಾದ ಬಸವನಗೌಡ ಪಾಟೀಲ ಯತ್ನಾಳರ ಹೆಸರು ಆರಂಭದಲ್ಲಿ ಇರಲಿಲ್ಲ. ಸೋಮವಾರ(ಅ.28) ದಿಢೀರನೆ ಅವರ ಹೆಸರು ಸೇರ್ಪಡೆಯಾಗಿದೆ. ಹಿರಿಯ ನಾಯಕರೆಂದು ಬಿಜೆಪಿಯಲ್ಲಿ ಗುರುತಿಸಲಾಗಿರುವ ಈ ಇಬ್ಬರು ನಾಯಕರು ಅತ್ತೂ ಕರೆದು, ಈ ಕಮಿಟಿಯಲ್ಲಿ ಸೇರುವ ಸ್ಥಿತಿಗೆ ಬಂದು ತಲುಪಿರುವುದು ಬಿಜೆಪಿಯ ದುಃಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ’ ಎಂದು ಕುಟುಕಿದ್ದಾರೆ.

ಸಮಸ್ಯೆಯೇ ಇಲ್ಲದ ವಕ್ಫ್ ಕುರಿತು ಸುಳ್ಳು ಹುಟ್ಟುಹಾಕುತ್ತಿರುವ ಈ ನಾಯಕರು ತಮ್ಮ ಮಧ್ಯದಲ್ಲಿ ಸತ್ಯವಾಗಿರುವ ಸಮಸ್ಯೆಗಳನ್ನು ಮೊದಲು ಬಗೆ ಹರಿಸಿಕೊಳ್ಳಲಿ ಎಂದೂ ಹೇಳಿದ್ದಾರೆ.