ಭಾವಿ, ಕೆರೆ, ಜಲಾಶಯ ಇತ್ಯಾದಿಗಳನ್ನು ಕಟ್ಟಿಸುವದು ಮಹಾಪುಣ್ಯ ಕಾರ್ಯವು ಪ್ರತಿಯೊಬ್ಬ ಇದ್ದುಳ್ಳವರು ಸಾಧ್ಯವಾದ ಮಟ್ಟಿಗೆ ಇಂಥ ಪುಣ್ಯದ ಕಾರ್ಯವನ್ನು ತಪ್ಪದೇ ಮಾಡಿ, ಇಹದಲ್ಲೂ ಪರದಲ್ಲೂ ಸುಖ-ಸೌಖ್ಯಗಳನ್ನು ತಾನೂ ಅನುಭವಿಸಿ ತನ್ನ ವಂಶದ ಉದ್ಧಾರಕ್ಕೆ ಕಾರಣವಾಗಬೇಕೆಂದೇ ನಮ್ಮ ಅಭಿಮತವು ಭಾವಿ, ಕೆರೆ, ಜಲಾಶಯ ಇತ್ಯಾದಿಗಳನ್ನು ಕಡಿಸುವಾಗ, ಕಟ್ಟಿಸುವಾಗ್ಗೆ ಮೊದಲು ಭೂಮಿಯ ಲಕ್ಷಣವನ್ನು ಗಮನಿಸಬೇಕು.
ಇಂಥ ಭೂಮಿಯಲ್ಲಿ ಇಂತಿಷ್ಟು ಪ್ರಮಾಣದಲ್ಲಿ ಇಂಥ ನೇಮದಿಂದ ಭಾವಿ ತೆಗೆದರೆ, ಜಲಾಶಯ ನಿರ್ಮಿಸಿದರೆ, ಕೆರೆ ನಿರ್ಮಾಣ ಕೈಕೊಂಡರೆ ನೀರು ಬರುವ ಸಂಗ್ರಹವಾಗುವ ವಿಷಯವನ್ನು ತಿಳಿಸಿಕೊಡುವದೇ ಜಲಶಿಲ್ಪಶಾಸ್ತ್ರದ ತತ್ವವಾಗಿದೆ. ನಾವು ಭಾವಿ- ಜಲಾಶಯ- ಕೆರೆ ನಿರ್ಮಿಸುವ ಭೂಮಿಯನ್ನು ಶುಚಿರ್ಭೂತಗೊಳಿಸಿ, ಆ ಸ್ಥಳದಲ್ಲಿ ಅಷ್ಟವಿಧಾರ್ಚ ನೆಯಿಂದ ವರುಣದೇವನ ಪೂಜೆ ಮಾಡಿ ಪೂಜ್ಯರಿಗೆ ದಾನ ಧರ್ಮವನ್ನು ಮಾಡಿ ಆ ಸ್ಥಳದಲ್ಲೇ ಯಥಾಯೋಗ್ಯತೆಯಂತೆ ಬಡ ಜನರಿಗೆ ಅನ್ನದಾನವನ್ನು ಮಾಡಿಸಬೇಕು. ಗುರುಹಿರಿಯರನ್ನು ಪೂಜಿಸಿ, ಆಶೀರ್ವಾದ ಪಡೆದು ಅವರಿಗೆ ತೃಪ್ತಿಯನ್ನು ಪಡಿಸಬೇಕು. ನಂತರ ಆ ಭೂಮಿಯಲ್ಲಿ ಹಾಲು- ತುಪ್ಪ ಪಂಚಾಮೃತಗಳನ್ನು ಹಾಕಬೇಕು.
ಕೆರೆ, ಭಾವಿ, ಜಲಾಶಯಗಳನ್ನು ತೋಡಿಸುವದಕ್ಕೆ ಶುಭ ಮುಹೂರ್ತಗಳು :
ರೋಹಿಣಿ, ಮೃಗಶಿರ, ಪುಷ್ಯ, ಮಘ, ಉತ್ತರ, ಹಸ್ತ, ಅನುರಾಧ, ಪೂರ್ವಾಷಾಢ, ಉತ್ತರಾಷಾಢ, ಧನಿಷ್ಠ, ಶತತಾರ, ಉತ್ತರಾಭಾದ್ರ, ರೇವತಿ ಈ ನಕ್ಷತ್ರಗಳಲ್ಲಿ ಕೆಟ್ಟಯೋಗಗಳಿಲ್ಲದೆ ಪಂಚಾಂಗ, ಶುದ್ದಿಯುಳ್ಳ ತಾರಾಬಲ-ಚಂದ್ರಬಲವಿರುವಾಗ್ಗೆ ಶುಭ ವಾರಗಳಲ್ಲಿ ಶುಭ ತಿಥಿಗಳಲ್ಲಿ, ವೃಷಭ, ಕರ್ಕ, ಮಕರ, ಕುಂಭ, ಮೀನ ಲಗ್ನಗಳಲ್ಲಿ ಗುರು-ಶುಕ್ರ-ಚಂದ್ರರಿಂದ ಕೂಡಿರುವ ಅಥವಾ ಅವರ ಪೂರ್ಣ ದೃಷ್ಟಿಯುಳ್ಳ ಲಗ್ನದಲ್ಲಿ ಭಾವಿ ತೆಗೆಸುವ ಜಾಗದಲ್ಲಿ ಪಂಚಾಮೃತಾದಿಗಳಿಂದ ಗಣಪತಿ, ವರುಣ ದೇವತೆಗಳನ್ನು ಪೂಜಿಸಿ, ನಂತರ ಭಾವಿ ಕಡಿಯುವ ಸಾಮಾನುಗಳನ್ನು ಭಕ್ತಿಯಿಂದ ಪೂಜಿಸಿ, ದಾನ ಧರ್ಮಗಳನ್ನು ಮಾಡಿ, ಶಕ್ಯವಿದ್ದರೆ ಪೂಜ್ಯರಿಗೆ ಭೋಜನ ದಕ್ಷಿಣೆಗಳಿಂದ ತೃಪ್ತಪಡಿಸಿ ಭಾವಿ ತೋಡಿಸಲಿಕ್ಕೆ ಪ್ರಾರಂಭಿಸಬೇಕು.
ಸಮೃದ್ಧವಾಗಿ ಜಲ ಇರುವ ಭೂಮಿಯ ಲಕ್ಷಣವನ್ನು ಕಂಡು ಹಿಡಿಯುವುದು :
ಲಕ್ಕಿಯ ಕಂಟಿಯ ಸುತ್ತ ಮುತ್ತಲೂ, ಹಾವುಗಳ ಹುತ್ತಗಳು ಇದ್ದರೆ ಅಲ್ಲಿ ಭಾವಿ ತೋಡಲು ಆಳು ಪ್ರಮಾಣದ ತೆಗ್ಗಿನಲ್ಲಿ ಕೆಂಪುಮಣ್ಣು ಹೊರಡುವದು. ಅಲ್ಲಿ ಮತ್ತೆ ೧೨ ಫೂಟು ತೆಗ್ಗು ತೋಡಲು ದಕ್ಷಿಣ ಮುಖವಾಗಿ ಜಲಧಾರೆಯು ಹರಿದು ಬರುವದು. ಬೋರೆ, ಮುತ್ತಲ ಗಿಡಗಳು ಕೂಡಿಕೊಂಡು ಸಮೃದ್ಧವಾಗಿ ಬೆಳೆದ ಭೂಮಿಯಲ್ಲಿಂದ ಪಶ್ಚಿಮ ದಿಕ್ಕಿನತ್ತ೧೦ ಪೂಟು ಆಳವಾಗಿ ಭೂಮಿಯನ್ನು ಆಗಿಸಲು ೧೦ ಪೂಟು ಆಳದಲ್ಲಿ ಕರ್ಲು ಮಣ್ಣು ಕಾಣುವದು. ಅಲ್ಲಿ ೧೫ ಫೂಟು ಆಳವಾಗಿ ಭೂಮಿಯನ್ನು ಆಗಿಸಲು ಪಶ್ಚಿಮೋ ತರವಾಗಿ ನೀರು ಹರಿದು ಬರುತ್ತದೆ. ಆಲದ ಮರದ ಸಮೀಪದಲ್ಲಿ ಬಿಲ್ವಪತ್ರಿ ಮರಗಳು ಇದ್ದರೆ ಸಮೀಪದಲ್ಲೇ ನೀರು ಸಮೃದ್ಧವಾಗಿರುವದು. ಮೂವತ್ತೈದು ಫೂಟು ನೆಲವನ್ನು ಅಗಿದರೆ ಭಾವಿಯಲ್ಲಿ ಉತ್ತರ ದಿಕ್ಕಿನಿಂದ ನೀರು ಹರಿದು ಬರುವದು. ಅತ್ತೀಮರದ ಸಮೀಪದಲ್ಲಿ ಪಶ್ಚಿಮ ದಿಕ್ಕಿನತ್ತ ೩ ಫೂಟು ದೂರದಲ್ಲಿ ಭೂಮಿ ಅಗಿಯಲು ಅಲ್ಲಿ ಹಾವುಗಳು ಕಂಡು ಬರುತ್ತವೆ. ಅಲ್ಲಿ ೧೦ ಅಡಿ ನೆಲ ಅಗಿಯಲು ಕಪ್ಪು ಬಂಡೆ ಕಂಡು ಬರುವದು. ೧೦-೧೫ ಪೂಟು ಆಳಬಂಡೆಯನ್ನು ಒಡೆದು ತೆಗ್ಗು ತೆಗೆಯಲು ಅಲ್ಲಿ ಸಮೃದ್ದ ಸಿಹಿ ನೀರು ಹರಿಯುವದು. ತಾಳೇ ಮರದ ದಕ್ಷಿಣಕ್ಕೆ ಹಾವಿನ ಹುತ್ತವು ಇದ್ದರೆ ಅಲ್ಲಿ ೪-೬ ಫೂಟು ಅಂತರದಲ್ಲಿ ೧೫-೨೦ ಫೂಟು ತೆಗ್ಗು ತೆಗೆದರೆ ಜಲಧಾರೆ ಕಾಣುವದು. ತೆಂಗಿನಮರ ಇಲ್ಲವೆ ತಾಳೇಮರ ಬೆಳೆದಿರುವ ಜಾಗದಲ್ಲಿ ಹುತ್ತವಿದ್ದರೆ ಅಲ್ಲಿ ೩೫ ಫೂಟುಗಿಂತಲೂ ಹೆಚ್ಚು ಆಳವಾಗಿ ಭೂಮಿಯನ್ನು ಅಗಿಸಿದರೆ ಅಲ್ಲಿ ಸಮೃದ್ಧ ನೀರು ಹೊರಡುವದು. ಆ ಭೂಮಿಯಲ್ಲಿ ತೆಂಗು, ಬಾಳೆ ವೃಕ್ಷಗಳು ಸೊಂಪಾಗಿ ಬೆಳೆಯುವಷ್ಟು ನೀರು ಹೊರಟೀತು. ಬೋರೆ ಗಿಡ ಮತ್ತು ಕಕೈಗಿಡಗಳು ಬೆಳೆದಿರುವ ಭೂಮಿಯ ಸಮೀಪ ದಕ್ಷಿಣ ದಿಕ್ಕಿನಲ್ಲಿ ಭೂಮಿಯನ್ನು ಆಗಿಸಲು ತೀರ ಸಮೀಪದಲ್ಲಿಯೇ ನೀರು ಕಂಡು ಬರುವದು. ಬಿಲ್ವ ಪತ್ರಿಯ ಮರಗಳು ಇರುವ ಭೂಮಿಯಲ್ಲಿ ಹಾವಿನ ಹುತ್ತಗಳಿರುವ ಜಾಗದಲ್ಲಿ ಮೂರು ಫೂಟ ಅಂತರ ದೂರದಲ್ಲಿ ಭಾವಿ ತೋಡಿಸಲು ನೀರು ಕಾಣುವದು. ಸುತ್ತಲೂ ಗಿಡ ಮರಗಳಿದ್ದು ಮಧ್ಯ ಭೂಮಿಯಲ್ಲಿ ಹುತ್ತಗಳಿದ್ದರೆ, ಹುತ್ತಗಳಿಂದ ಮೂರಾಲ್ಕು ಪೂಟು ಅಂತರ ಬಿಟ್ಟು ಭೂಮಿಯನ್ನು ೧೫ ಫೂಟು ಆಳವಾಗಿ ಅಗೆಯಿಸಲು ತೆಗ್ಗಿನಲ್ಲಿ ಹಸಿಮಣ್ಣಿನ ವರ್ಣದ ಒಂದು ಕಪ್ಪೆ ಕಂಡು ಬಂದೀತು. ಅಲ್ಲಿ ಮತ್ತೆ ೧೦-೧೫ ಪೂಟು ಭೂಮಿ ಆಗಿಸಲು ಹಸಿರು ವರ್ಣದ ಕರ್ಲು ಭೂಮಿ ಕಾಣುವದು. ಅಲ್ಲಿ ಮತ್ತೆ ೪೦ ಫೂಟು ಆಳವಾಗಿ ಭೂಮಿಯನ್ನು ಅಗಿಸಲು ಅಲ್ಲಿ ಸಮೃದ್ಧ ಸಾಕಷ್ಟು ಸಿಹಿ ನೀರು ಕಾಣುವದು ನಿಶ್ಚಯ. ಮುತ್ತಲ ಮರಗಳ ಪೂರ್ವಕ್ಕೆ ಹತ್ತು ಪೂಟು ಅಂತರದಲ್ಲಿ ಮೂವತ್ತು ಫೂಟು ಆಳದಲ್ಲಿ ತೆಗ್ಗನ್ನು ತೆಗೆಸಲು ಅಲ್ಲಿ ಕಪ್ಪು ಮಣ್ಣು ಕಂಡೀತು, ಮತ್ತೆ ೨೫ ಫೂಟು ಆಳವಾಗಿ ತೆಗ್ಗು ತೆಗೆಯಲು ಅಲ್ಲಿ ಸಮೃದ್ಧವಾಗಿ ನೀರು ಕಂಡೀತು. ಗಿಡ-ಮರಗಳು ಯಾವಾಗಲೂ ಹಚ್ಚು ಹಸುರಾಗಿ ಕಂಗೊಳಿಸುತ್ತ, ಅವುಗಳ ಟೊಂಗೆಗಳು ಭೂಮಿಯತ್ತ ಬಾಗಿದ್ದರೆ, ವಿಶೇಷವಾಗಿ ಟೊಂಗೆಗಳು ಭೂಮಿಯತ್ತ ಬಾಗಿದ ಸ್ಥಳದ ಭೂಮಿಯಲ್ಲಿ ಸಮೃದ್ಧ ಜಲವು ಇದ್ದೇ ಇರುತ್ತದೆ. ಆಲದ ಮರವಿರುವ ಭೂಮಿಯ ಸಮೀಪ ಹುಲುಗಿಲ ಗಿಡವು ಬೆಳೆದ ಜಾಗದ ಸಮೀಪ ೩೫ ಫೂಟು ತೆಗ್ಗು ತೆಗೆದರೆ ಸಮೃದ್ಧ ನೀರು ಇದೆ. ತಾಳೆಮರ, ಅರಳೆಮರ, ತೆಂಗಿನ ಮರಗಳು ಇತ್ಯಾದಿ ಹಾಲುಳ್ಳ ಮರಗಳಿದ್ದಲ್ಲಿ ೪೦ ಫೂಟು ಭೂಮಿಯನ್ನು ಅಗಿದು ಬಾವಿ ತೋಡಲು ಸಮೃದ್ದ ನೀರು ದೊರೆಯುವದು. ಸಮೃದ್ಧವಾಗಿ ಹುಲ್ಲು ಬೆಳೆಯುವ ಪ್ರದೇಶದಲ್ಲಿ ಬಾವಿ ತೆಗೆಸಿದರೆ ಅಲ್ಲಿ ಸಮೃದ್ಧ ನೀರು ಇರುವದು. ಪುರುಷ ಪ್ರಮಾಣದಲ್ಲಿ ಒಂದು ತೆಗ್ಗನ್ನು ತೆಗೆದು ಅಲ್ಲಿ ನೋಡಲು ನೆಲವು -ಹಸಿಯಾಗಿ ಕಂಡರೆ, ಅಲ್ಲಿ ಮತ್ತೆ ೧೦ ಫೂಟಿನಷ್ಟು ತೆಗ್ಗು ತೆಗೆಯಲು ಕಪ್ಪು ಕಲ್ಲು ಕಂಡು ಬರುವದು. ಈ ಕಲ್ಲನ್ನು ಒಡೆದು ತೆಗೆದು ಮತ್ತೆ ೧೦-೧೫ ಫೂಟು ಭೂಮಿಯನ್ನು ಆಗಿದರೆ ಅಲ್ಲಿ ಸಮೃದ್ಧ ನೀರು ದೊರಕುವದು.
ಮಾನ್ಯರೇ, ಮೇಲೆ ಹೇಳಿದ ಪ್ರಮಾಣದಲ್ಲಿ ಈ ಪ್ರಕಾರ ಭಾವಿ ತೋಡಿದರೆ ನೀರು ದೊರಕುವದು ಸಂಶಯ. ಯಾಕೆಂದರೆ ಈಗ ನೀರಿನ ಪಾತಳಿ ಇನ್ನೂ ಕೆಳಕ್ಕೆ ಇಳಿದಿದೆ ಯೆಂಬುದು ಭೂ- ವಿಜ್ಞಾನಿಗಳ ಅಭಿಪ್ರಾಯವಾಗಿದೆ. ಇದೂ ನಿಜವಿದೆ. ಈಗ ಮಳೆಯ ಪ್ರಮಾಣ ತೀರ ಕಡಿಮೆಯಾಗಿ ನೀರಿನ ಬಳಕೆ ವಿಚಿತ್ರವಾಗಿ ಬೆಳೆದಿದೆ. ಆದ್ದರಿಂದ ಭೂಮಿಯ ಅಡಿಯಲ್ಲಿ ನೀರಿದ್ದರೂ ಅದು ತೀರ ಆಳದಲ್ಲಿದೆ. ಇದನ್ನು ಮನಗಂಡು ಭಾವಿಯನ್ನು ತೋಡಬೇಕು. ಹೊಳೆ ಹಳ್ಳಗಳಿಂದ ದೂರವಿರುವ ಪ್ರದೇಶದಲ್ಲಿ ನೀರಿನ ಸೆಲೆಗಳು ತೀರ ಆಳದಲ್ಲಿರುತ್ತವೆಯೆಂಬುದನ್ನು ಅರಿತಿರಬೇಕು. ಭಾವಿಯನ್ನು ತೆಗೆಯಿಸುವಾಗ್ಗೆ ಜಾಗ್ರತೆ ತೀರ ಅವಶ್ಯ. ತೆಗೆಯಿಸುವಾಗ ಜಾಗ್ರತೆ ತೀರ ಅವಶ್ಯ.
ಇದಕ್ಕಿಂತ ಹೆಚ್ಚು ಚೆನ್ನಾಗಿ ಜಲಶಿಲ್ಪ ಶಾಸ್ತ್ರವನ್ನು ಅಭ್ಯಾಸ ಮಾಡಬೇಕೆನ್ನುವವರು ನಮ್ಮಿಂದಲೇ ವಿರಚಿತವಾದ ಗೃಹ ಆಯ ನಿರ್ಣಯ ದರ್ಪಣ ಎಂಬ ನೂತನ ಗೃಹವಾಸ್ತು ದರ್ಪಣ ಎಂಬ ಪುಸ್ತಕವನ್ನು ತರಿಸಿ ನೋಡಿರಿ, ಈ ಪುಸ್ತಕದಲ್ಲಿ ಜಲ ಶೋಧನೆಗೆ ಅವಶ್ಯವಾಗಿ ತಿಳಿದಿರಲೇಬೇಕಾದ ಅನುಭವಿಕ ಶಾಸ್ರೋಕ್ತ ವಿಷಯ ಸಂಗ್ರಹವಿದೆ. ಭೂಮಿಯು ಅಡಗಿರುವ ಜಲಶೋಧನೆಯ ಬಗ್ಗೆ ಸಂಪೂರ್ಣ ವಿಷಯ ಸಂಗ್ರಹವಿದೆ.