ವಿಜಯಪುರ/ಕೊಡಗು : ಕೃಷ್ಣಾ ಎಡದಂಡೆ ಕಾಲುವೆಯ ಅಪ್ಪರ್ ಕೃಷ್ಣಾ ಪ್ರೊಜೆಕ್ಟ್ ಯೋಜನೆಯ ಕಾಲುವೆ ಒಡೆದು ಅವಾಂತರ ಸೃಷ್ಟಿಸಿದೆ. 40 ಎಕರೆಗೂ ಅಧಿಕ ಜಮೀನು ಜಲಾವೃತವಾಗಿ ಬೆಳೆ ನಾಶವಾಗಿದೆ. ಇತ್ತ ಕೊಡಗು ಜಿಲ್ಲೆಯಲ್ಲಿರುವ ಏಕೈಕ ಹಾರಂಗಿ ಜಲಾಶಯ ಮಳೆಗಾಲದಲ್ಲಿ ತುಂಬಿ ನದಿ ಪಾತ್ರದ ಜನರಲ್ಲಿ ಆತಂಕ ಸೃಷ್ಟಿಸಿತ್ತು. ಹಾಗೆ ಅಬ್ಬರಿಸಿದ ಹಾರಂಗಿ ಡ್ಯಾಂನಲ್ಲಿ ಇದೀಗ ನೀರಿನ ಮಟ್ಟ ಗಣನೀಯವಾಗಿ ಇಳಿಮುಖವಾಗಿದೆ.
ಕೊಡಗು ಜಿಲ್ಲೆಯಲ್ಲಿ ಮಳೆಗಾಲ ಬಂದರೆ ಸಾಕು 4-5 ತಿಂಗಳು ಮಳೆ ಆರ್ಭಟವೇ ಹೆಚ್ಚಾಗಿ ಇರುತ್ತದೆ. ಇದರಿಂದಾಗಿ ಜಿಲ್ಲೆಯ ಏಕೈಕ ಹಾರಂಗಿ ಜಲಾಶಯ ಭರ್ತಿಯಾಗಿ ಕೆಆರ್‌ಎಸ್‌ಗೆ ಕಾವೇರಿ ನದಿಯ ಮೂಲಕ 30-40 ಟಿಎಂಸಿಯಷ್ಟು ನೀರನ್ನು ಹರಿಸಲಾಗುತ್ತದೆ. ಆದರೆ ಅದೇ ಹಾರಂಗಿ ಜಲಾಶಯದಲ್ಲಿ ಪ್ರಸ್ತುತ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಆದ್ದರಿಂದ ಹಾರಂಗಿ ಜಲಾಶಯವನ್ನ ಅವಲಂಬಿಸಿರೋ ಜನಸಾಮಾನ್ಯರು ಸೇರಿದಂತೆ ಜಾನುವಾರುಗಳಿಗೂ ನೀರಿನ ಹಾಹಾಕರ ಉಂಟಾಗುವ ಸಾಧ್ಯತೆಯಿದೆ.
ಹಾರಂಗಿ ಜಲಾಶಯವನ್ನೇ ಅವಲಂಬಿಸಿಕೊಂಡಿರುವ ಸೋಮವಾರಪೇಟೆ ತಾಲೂಕು ಮೈಸೂರು ಹಾಸನ ಭಾಗದ ಗ್ರಾಮೀಣ ಭಾಗದ ಜನರು ಆತಂಕಕ್ಕೆ ಒಳಗಾಗುತ್ತಿದ್ದಾರೆ. ಫೆಬ್ರವರಿ 2ನೇ ವಾರದಲ್ಲಿ ನೀರಿನ ಪ್ರಮಾಣ ಇಳಿಕೆಯಾಗಿದ್ದು ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉದ್ಭವ ಆಗೋ ಸಾದ್ಯತೆಯೇ ಹೆಚ್ಚಾಗಿದೆ.
ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಹಳ್ಳದ ಗೆಣ್ಣೂರ ಗ್ರಾಮದ ಹತ್ತಿರ ಇರುವ ಕಾಲುವೆ ಒಡೆದಿದೆ. ಇದು ಮುಳವಾಡ ಏತ ನೀರಾವರಿ ಯೋಜನೆಯ ಮೊದಲ ಹಂತದ ಕೃಷ್ಣಾ ಎಡದಂಡೆ ಕಾಲುವೆ. ಈ ಕಾಲುವೆ ತಡರಾತ್ರಿ ಒಡೆದು ರೈತರ ಜಮೀನಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. 40 ಎಕರೆಗೂ ಅಧಿಕ ಜಮೀನು ಜಲಾವೃತಗೊಂಡು ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಇನ್ನೇನು ಬೆಳೆ ಕೈಗೆ ಸಿಗಬೇಕು ಅನ್ನೋ ಅಷ್ಟರಲ್ಲಿ ನೀರುಪಾಲಾಗಿದೆ.
ಕೃಷಿಯನ್ನೇ ನಂಬಿ ಬದುಕುತ್ತಿದ್ದ ರೈತರ ಜಮೀನಿಗೆ ಕಾಲುವೆಯ ನೀರು ನುಗ್ಗಿದ್ದರಿಂದ ಕಬ್ಬು, ಈರುಳ್ಳಿ, ಬಾಳೆ, ಗೋಧಿ ಹಾಗೂ ಮೆಕ್ಕೆಜೋಳ ಬೆಳೆ ಹಾನಿಯಾಗಿವೆ. ಅಲ್ಲದೇ ಈ ವೇಳೆ ಜಮೀನಿನಲ್ಲಿದ್ದ ಮಹೇಶ್ ಗೌಡ ಪಾಟೀಲ್ ಪ್ರವಾಹದಂತೆ ಹರಿದು ಬಂದ ನೀರು ಕಂಡು ಗಾಬರಿಯಾಗಿ ಮನೆಯ ಮೇಲೆ ಕುಟುಂಬಸ್ಥರೆಲ್ಲರು ನಿಂತು ಸಹಾಯಕ್ಕಾಗಿ ಗ್ರಾಮಸ್ಥರಿಗೆ ಕರೆ ಮಾಡಿದ್ದಾರೆ. ಆಗ ಗ್ರಾಮಸ್ಥರು ಬಂದು ಮೊದಲು ಕೆಬಿಜೆಎನ್‌ಎಲ್ ಅಧಿಕಾರಿಗಳಿಗೆ ಕರೆ ಮಾಡಿ ನೀರು ಹರಿಸುವುದನ್ನ ನಿಲ್ಲಿಸಲು ಹೇಳಿ ಮಹೇಶ್ ಗೌಡ ಕುಟುಂಬವನ್ನು ರಕ್ಷಿಸಿದ್ದಾರೆ ಎಂದು ಹೇಳಲಾಗಿದೆ.















