ಮನೆ ರಾಜಕೀಯ ರಾಜ್ಯದಲ್ಲಿ ಪರಿಶಿಷ್ಟರಿಗೆ ಮೀಸಲಾತಿ ಹೆಚ್ಚಳಕ್ಕೆ ನಾವೇ ಕಾರಣರು: ಸಿದ್ದರಾಮಯ್ಯ ಪ್ರತಿಪಾದನೆ

ರಾಜ್ಯದಲ್ಲಿ ಪರಿಶಿಷ್ಟರಿಗೆ ಮೀಸಲಾತಿ ಹೆಚ್ಚಳಕ್ಕೆ ನಾವೇ ಕಾರಣರು: ಸಿದ್ದರಾಮಯ್ಯ ಪ್ರತಿಪಾದನೆ

0

ಮೈಸೂರು(Mysuru): ರಾಜ್ಯದಲ್ಲಿ ಪರಿಶಿಷ್ಟರಿಗೆ ಮೀಸಲಾತಿ ಹೆಚ್ಚಳಕ್ಕೆ ನಾವೇ ಕಾರಣರು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಪಾದಿಸಿದರು.

ಖಾಸಗಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದಕ್ಕಾಗಿ ಇಲ್ಲಿಗೆ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಸೋಮವಾರ ಬಂದಿಳಿದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಮೀಸಲಾತಿ ಹೆಚ್ಚಳ ಸಂಬಂಧ ನ್ಯಾ.ನಾಗಮೋಹನ್‌ದಾಸ್ ಆಯೋಗ ರಚನೆ ಆಗಿದ್ದು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ. ಆಗ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದರು. ನಮ್ಮ ಪ್ರಿಯಾಂಕ್‌ ಖರ್ಗೆ ಸಮಾಜ ಕಲ್ಯಾಣ ಸಚಿವರಾಗಿದ್ದರು. ಅವರು ಒತ್ತಡ ಹಾಕಿದ್ದರಿಂದ‌ಲೇ ಆಯೋಗ ರಚನೆಯಾಯಿತು. ಪ್ರತಿ ಸಭೆಯಲ್ಲೂ ಕಾಂಗ್ರೆಸ್ ಶಾಸಕರು ಈ ಬಗ್ಗೆ ಧ್ವನಿ ಎತ್ತುತ್ತಿದ್ದರು. ವಿಧಾನಮಂಡಲ ಅಧಿವೇಶನದಲ್ಲಿ ಪ್ರಶ್ನಿಸುತ್ತಿದ್ದರು. ಆಗ ಬಿಜೆಪಿ ಶಾಸಕರು ಯಾವುದೇ ಚಕಾರ ಎತ್ತದೇ ಮೌನವಾಗಿರುತ್ತಿದ್ದರು  ಎಂದು ಬಿಜೆ‍ಪಿ ವಿರುದ್ಧ ವಾಗ್ದಾಳಿ ನಡೆಸಿದರು.

ನಾಗಮೋಹನ್ ದಾಸ್ ನೇತೃತ್ವದ ಆಯೋಗವು ವರದಿ ನೀಡಿ 2 ವರ್ಷ 3 ತಿಂಗಳು ಕಳೆದ ಮೇಲೆ ಮೀಸಲಾತಿ ಹೆಚ್ಚಳ ಮಾಡಲಾಗಿದೆ. ಇಷ್ಟು ದಿನ ಏಕೆ ಸುಮ್ಮನಿದ್ದರು. ಈಗ ತರಾತುರಿಯಲ್ಲಿ ಹೆಚ್ಚಿಸಿದರ ಉದ್ದೇಶವೇನು ಎಂಬುದು ಎಲ್ಲರಿಗೂ ಅರ್ಥವಾಗಿದೆ. ಮುಂಬರುವ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಮೀಸಲಾತಿ ಹೆಚ್ಚಳ ಮಾಡಿದ್ದಾರೆ. ವಾಸ್ತವವಾಗಿ ಬಿಜೆಪಿಯವರು ಮೀಸಲಾತಿ ವಿರೋಧಿಗಳು. ಕೇವಲ ರಾಜಕೀಯ ಲಾಭಕ್ಕಾಗಿ ಈಗ ಹೆಚ್ಚಿಸಿದ್ದಾರೆ ಎಂದು ಟೀಕಿಸಿದರು.

ಮುಂದಿನ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿಯು ನವೆಂಬರ್ ಅಂತ್ಯಕ್ಕೆ ತಯಾರಾಗಲಿದೆ. ಈ ಸಂಬಂಧ ಈಗಾಗಲೇ ಪ್ರಕ್ರಿಯೆ ಆರಂಭವಾಗಿದೆ ಎಂದು ತಿಳಿಸಿದರು.

ಬಸವರಾಜ ಅಮರಗೋಳ ಎನ್ನುವವರು ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ, ಮೂಡಿಗೆರೆ ಹಾಗೂ ಕಡೂರು ಮೊದಲಾದ ಕಡೆಗಳಿಗೆ ಕೊರೊನಾ ಅಲೆಯಲ್ಲಿ ಉಪಕರಣಗಳನ್ನು ಪೂರೈಸಿದ್ದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆದೇಶದ ಮೇಲೆ ಮಾಡಿದ್ದರು. ಈಗ 2 ವರ್ಷ ಆಗಿದೆ. ಅದರಲ್ಲಿ ಕೇವಲ ಶೇ 20ರಷ್ಟು ಬಿಲ್‌ ಮಾತ್ರ ನೀಡಿದ್ದಾರೆ. ಬಾಕಿ ಹಣಕ್ಕಾಗಿ ಆತ ಮುಖ್ಯಮಂತ್ರಿಯನ್ನು 2 ಬಾರಿ ಭೇಟಿ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಇಲಾಖೆಯ ಮುಖ್ಯ ಕಾರ್ಯದರ್ಶಿ, ಅಧೀನ ಕಾರ್ಯದರ್ಶಿಯನ್ನೂ ಭೇಟಿಯಾಗಿದ್ದಾರೆ. ಇದರಿಂದ ಯಾವುದೇ ಉಪಯೋಗ ಆಗದಿದ್ದಕ್ಕೆ ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ. ಶೇ 35-40ರಷ್ಟು ಕಮಿಷನ್‌ ಕೇಳುತ್ತಿದ್ದಾರೆ, ಇಷ್ಟು ಹಣ ನನ್ನಿಂದ ಕೊಡಲಾಗುತ್ತಿಲ್ಲ. ನನ್ನ ಬಾಕಿ ಬಿಲ್‌ ಹಣವನ್ನು ಕೊಡಿಸಿ, ಇಲ್ಲದಿದ್ದರೆ ದಯಾಮರಣಕ್ಕೆ ಅನುಮತಿ ಕೊಡಿ ಎಂದು ಕೇಳಿದ್ದಾರೆ. ಇದು ಶೇ 40ರಷ್ಟು ಕಮಿಷನ್‌ ಸರ್ಕಾರ ಎಂಬುದಕ್ಕೆ ಪ್ರಬಲ ಸಾಕ್ಷಿಯಾಗಿದೆ ಎಂದು ಹೇಳಿದರು.

ಹೃದಯಾಘಾತದಿಂದ ನಿಧನರಾದ ಪೊಲೀಸ್‌ ಇನ್‌ಸ್ಪೆಕ್ಟರ್ ನಂದೀಶ್‌ ಅಂತಿಮ ದರ್ಶನ ಪಡೆಯಲು ಹೋಗಿದ್ದ ಎಂ.ಟಿ.ಬಿ.ನಾಗರಾಜ್‌ ಪೊಲೀಸ್‌ ಸಿಬ್ಬಂದಿ ಜೊತೆ ಮಾತನಾಡುವಾಗ ₹ 70 ಲಕ್ಷದಿಂದ ₹80 ಲಕ್ಷ ಕೊಟ್ಟು ವರ್ಗಾವಣೆ ಮಾಡಿಸಿಕೊಂಡರೆ ಹೃದಯಾಘಾತ ಆಗದಿರುತ್ತದೆಯೇ? ಎಂದು ಕೇಳಿದ್ದಾರೆ. ಇದನ್ನು ಯಾರೋ ದಾರಿಯಲ್ಲಿ ಹೋಗುವವರು ಹೇಳಿದ್ದಲ್ಲ; ಸಚಿವ ಸ್ಥಾನದಲ್ಲಿ ಇರುವವರು ಹೇಳಿದ್ದಾರೆ. ನಂದೀಶ್‌ ಸಾಲ ಮಾಡಿ ₹70ಲಕ್ಷದಿಂದ ₹ 80 ಲಕ್ಷ ಲಂಚ ನೀಡಿದ್ದಾರೆ. ಆಮೇಲೆ ಯಾವುದೋ ಕಾರಣಕ್ಕೆ ಅವರನ್ನು ಅಮಾನತು ಮಾಡಿದ್ದಾರೆ. ಇದರಿಂದ ಒತ್ತಡಕ್ಕೆ ಒಳಗಾಗಿ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ. ಇದಕ್ಕೆ ರಾಜ್ಯ ಸರ್ಕಾರ ಹೊಣೆ ಅಲ್ಲವೇ? ಈ ಲಂಚದ ಹಣವನ್ನು ಗೃಹ ಸಚಿವರು ಅಥವಾ ಮುಖ್ಯಮಂತ್ರಿ ಪಡೆದಿರಬೇಕು. ಅವರಿಗೆ ಹುದ್ದೆಯಲ್ಲಿ ಮುಂದುವರಿಯುವ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.