ಮನೆ ರಾಜಕೀಯ ರಾಜ್ಯ ಸರ್ಕಾರದಲ್ಲಿ ಅಭದ್ರತೆ ಇಲ್ಲ: ವಿ.ಸೋಮಣ್ಣ

ರಾಜ್ಯ ಸರ್ಕಾರದಲ್ಲಿ ಅಭದ್ರತೆ ಇಲ್ಲ: ವಿ.ಸೋಮಣ್ಣ

0

ಮೈಸೂರು : ಕೆಲವು ಶಾಸಕರು ಪ್ರತ್ಯೇಕವಾಗಿ ಕುಳಿತು ಮಾತನಾಡುವುದಕ್ಕೆ ಬೇರೆ ಅರ್ಥ ಕಲ್ಪಿಸಬೇಡಿ. ಕೆಲವರಿಗೆ ಸಂಜೆಯಾದರೆ ಅಲ್ಲಿ ಇಲ್ಲಿ ಕೂತು ಮಾತನಾಡುವ ಅಭ್ಯಾಸವಿರುತ್ತದೆ. ಅದು ಅವರ ವೈಯಕ್ತಿಕ ವಿಚಾರ. ರಾಜ್ಯ ಸರ್ಕಾರದಲ್ಲಿ ಯಾವುದೇ ಅಭದ್ರತೆ ಇಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

ಇಂದು ಸುತ್ತೂರು ಶಾಖಾ ಮಠಕ್ಕೆ ಆಗಮಿಸಿ‌ ಸುತ್ತೂರು ಶ್ರೀ ದೇಶಿ ಕೇಂದ್ರ ಮಹಾ ಸ್ವಾಮೀಜಿಯವರ ಆಶೀರ್ವಾದ ಪಡೆದು ಬಳಿಕ ಮಾಧ್ಯಮಗಳ ಜತೆ ಅವರು ಮಾತನಾಡಿದರು.

ಸಚಿವ ಸಂಪುಟ ವಿಸ್ತರಣೆ ಹಾಗೂ ಸಿಎಂ ಬದಲಾವಣೆ ಇವೆರಡೂ ವಿಚಾರಗಳು ಇಲ್ಲ. 2022ರ ಚುನಾವಣೆ ಬಸವರಾಜ ಬೊಮ್ಮಯಿ ನೇತೃತ್ವದಲ್ಲೇ ನಡೆಯುತ್ತದೆ‌. ಇದನ್ನ ಪಕ್ಷದ ವರಿಷ್ಠರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ‌ ಎಂದರು.ಕೋವಿಡ್ ಜಾಸ್ತಿಯಾಗಿರುವುದರಿಂದ ನಮ್ಮ ಮೊದಲ ಆದ್ಯತೆ ಅದನ್ನ ಕಡಿಮೆ ಮಾಡುವ ಕಡೆ.‌ ಬೊಮ್ಮಾಯಿ ಅವರು 6 ತಿಂಗಳು ಯಶಸ್ವಿಯಾಗಿ ಕೆಲಸ ಮುಗಿಸಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಹಾಗೂ ವರಿಷ್ಠರು ನೋಡಿಕೊಳ್ಳುತ್ತಾರೆ.‌ ನಮ್ಮದು ಕೋವಿಡ್ ಕಡಿಮೆ ಮಾಡುವ ಕಡೆ ಗಮನ ಅಷ್ಟೇ ಎಂದು ಸಚಿವ ವಿ.ಸೋಮಣ್ಣ ಸ್ಪಷ್ಟಪಡಿಸಿದರು.

ಮೇಕೆದಾಟು ಯೋಜನೆ ಜಾರಿಗೆ ತಂದೇ ತರುತ್ತೇವೆ : ದೇವರಾಣೆ ಹಾಗೂ ನಮ್ಮ ಅಪ್ಪನ ಮೇಲೆ ಆಣೆ ಮಾಡಿ ಹೇಳುತ್ತೇನೆ. ಮೇಕೆದಾಟು ಯೋಜನೆಯನ್ನ ನಮ್ಮ ಸರ್ಕಾರ ಜಾರಿಗೆ ತಂದೇ ತರುತ್ತದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ‌ ಇದೆ. ಆದ್ದರಿಂದ ಮೇಕೆದಾಟು ಯೋಜನೆ ಜಾರಿ ಮಾಡುವುದು ನಾವೇ ಎಂದರು.

ಬಾಯಿ ಚಪಲಕ್ಕೆ ಮಾತನಾಡುವ ಸಿದ್ದರಾಮಯ್ಯ:  ರಾಜ್ಯದಲ್ಲಿ ವಸತಿ ಇಲಾಖೆಯಿಂದ ಒಂದು ಮನೆಯನ್ನ ನೀವು ಕೊಟ್ಟಿಲ್ಲ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಸಚಿವರು, ಬಡವರಿಗೆ ಮನೆ ಕೊಡಲು ನೀವು ಬಿಟ್ಟಿಲ್ಲ. ನಾವಾಗಿರುವುದಕ್ಕೆ ನೀವು ಮಾಡಿರುವ ಅಡೆತಡೆ ಗಳನ್ನ ಬಗೆಹರಿಸಿ, ಯೋಜನೆ ಬಗ್ಗೆ ಕೇಂದ್ರದ ಆ್ಯಪ್​​ನಲ್ಲಿ ಎಂಟ್ರಿ ಮಾಡಬೇಕಿತ್ತು. ಆದರೆ, ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಕಾಲದಲ್ಲಿ ರಾಜ್ಯ ಸರ್ಕಾರ ತಾನೇ ಆ್ಯಪ್ ಮಾಡಿ ಅಪ್ಲೋಡ್ ಮಾಡಿ ಎಡವಟ್ಟು ಮಾಡಿತ್ತು. ಅದನ್ನು ನಾವು ಸರಿ‌ಪಡಿಸಿದ್ದೇವೆ.‌ ಸಿದ್ದರಾಮಯ್ಯ ಬಾಯಿ ಚಪಲಕ್ಕೆ, ‘ಮಾತು ಮನೆ ಕೆಡಿಸಿತು’ ಎಂಬ ಗಾದೆಯಂತೆ ಮಾತನಾಡುತ್ತಾರೆ. ‌ಅವರಿಗೆ ಯಾವುದೇ ಸಮರ್ಪಕ ಮಾಹಿತಿ ಇಲ್ಲ ಎಂದು ಟಾಂಗ್​ ನೀಡಿದರು.

ಹಿಂದಿನ ಲೇಖನಶೈಕ್ಷಣಿಕ ಪ್ರಮಾಣಪತ್ರಗಳ ಪೂರೈಕೆಗೆ `ಇ-ಸಹಮತಿ’ಗೆ ಹಸಿರು ನಿಶಾನೆ
ಮುಂದಿನ ಲೇಖನಕುತೂಹಲಕ್ಕೆ ಕಾರಣವಾದ ರಮೇಶ್ ಜಾರಕಿಹೊಳಿ- ಯತ್ನಾಳ್ ಸೀಕ್ರೆಟ್‌ ಮೀಟಿಂಗ್‌