ಮನೆ ರಾಜಕೀಯ ಬಿಜೆಪಿ ಉಳಿಸಿಕೊಳ್ಳಲು ನಮಗೆ ಗೊತ್ತಿದೆ. ಜೆಡಿಎಸ್ ಉಳಿಸಲು ನಾನ್ಯಾಕೆ ಕೆಲಸ ಮಾಡಬೇಕು?: ಪ್ರೀತಂ ಜೆ. ಗೌಡ...

ಬಿಜೆಪಿ ಉಳಿಸಿಕೊಳ್ಳಲು ನಮಗೆ ಗೊತ್ತಿದೆ. ಜೆಡಿಎಸ್ ಉಳಿಸಲು ನಾನ್ಯಾಕೆ ಕೆಲಸ ಮಾಡಬೇಕು?: ಪ್ರೀತಂ ಜೆ. ಗೌಡ ಅಸಮಾಧಾನ

0

ಹಾಸನ: ಬಿಜೆಪಿ ಪಕ್ಷ ಉಳಿಸಿಕೊಳ್ಳಲು ನಮಗೆ ಗೊತ್ತಿದೆ. ಜೆಡಿಎಸ್ ಉಳಿಸಲು ನಾನ್ಯಾಕೆ ಕೆಲಸ ಮಾಡಬೇಕು? ಯಾರೋ ಒಬ್ಬರ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಈ ಮೈತ್ರಿ ಅನಿವಾರ್ಯ ಅಂತ ಹೇಳಿದರೆ, ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಪ್ರೀತಂ ಜೆ. ಗೌಡ ಅಸಮಾಧಾನ ವ್ಯಕ್ತಪಡಿಸಿದರು.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಸಿಎಂ ಕುಮಾರಣ್ಣ ಜಿಲ್ಲೆಯಲ್ಲಿ ಒಕ್ಕಲಿಗ ನಾಯಕರು ಬೆಳೆಯಬಾರದು, ಬೆಳೆಯಬಾರದು ಎಂದು ವಿಧಾನಸಭಾ ಚುನಾವಣೆಯಲ್ಲಿ ತನ್ನ ವಿರುದ್ಧ ಪ್ರಚಾರ ಮಾಡಿದ್ದರು. ಜೆಡಿಎಸ್‌ ನವರು ನನ್ನ ಮನೆಗೆ ಕಲ್ಲು ಹೊಡೆದರು. ಈಗ ಅವರೊಂದಿಗೆ ಚೆನ್ನಾಗಿರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

28 ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ನಿಲ್ಲಲಿ, ನರೇಂದ್ರ ಮೋದಿ ಪ್ರಧಾನಮಂತ್ರಿ ಆಗಬೇಕು ಅಂತ ಬಂದರೆ ಸ್ವಾಗತವಿದೆ. ಆದರೆ ಆ ರೀತಿಯ ರಾಜಕಾರಣದ ಅವಶ್ಯಕತೆ ಬಿಜೆಪಿ ಕಾರ್ಯಕರ್ತರಿಗೆ ಇಲ್ಲ. ಅವರ ಪಕ್ಷ, ಕಾರ್ಯಕರ್ತರನ್ನು ಉಳಿಸಿಕೊಳ್ಳಲು ಮೈತ್ರಿ ಮಾಡಿಕೊಂಡರೆ ಇಡೀ ರಾಜ್ಯದ ಬಿಜೆಪಿ ಕಾರ್ಯಕರ್ತರು ಒಪ್ಪೋದಿಲ್ಲ, ಅದರಲ್ಲಿ ಪ್ರೀತಂಗೌಡ ಕೂಡ ಒಬ್ಬ ಎಂದು ಸ್ಪಷ್ಟಪಡಿಸಿದರು.

ನಾವು ಕುಟುಂಬ ರಾಜಕಾರಣ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಹಾಸನದಲ್ಲಿ ಅವರ ಕುಟುಂಬದವರು ಅಭ್ಯರ್ಥಿ ಆಗುತ್ತಾರೆ. ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತನಾಗಿ ಜೆಡಿಎಸ್ ಉಳಿಸಲು ನಾನ್ಯಾಕೆ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ಒಪ್ಪಲ್ಲಎಂದು ಮೈತ್ರಿ ಬಗ್ಗೆ ವಿರೋಧ ವ್ಯಿಕ್ತಪಡಿಸಿದರು.

ಮೈತ್ರಿ ಬಗ್ಗೆ ಬಿಜೆಪಿಯ ಯಾವುದೇ ಮುಖಂಡರು‌ ಅಥವಾ ನಿರ್ಧಾರ ತೆಗೆದುಕೊಳ್ಳುವ ಹಂತದಲ್ಲಿರುವ ನಾಯಕರಾರೂ ಮಾತನಾಡುತ್ತಿಲ್ಲ. ಮೈತ್ರಿ ಅಂತಾ ಹೇಳಿರೋದು ಯಾರು ಅಂತಾ ಸ್ವಲ್ಪ ಗಮನಿಸಬೇಕು. ಯಾರಿಗೋ ಒಬ್ಬರಿಗೆ ಕಷ್ಟ ಇದೆ, ಆ ಕಷ್ಟದಿಂದ ಪರಿಹಾರ ಆಗೋದಕ್ಕೆ ಮೈತ್ರಿ ಅಂತಾ ಅನೌನ್ಸ್ ಮಾಡ್ತಾರೆ ಎಂದು ಜೆಡಿಎಸ್‌ ಬಗ್ಗೆ ಹೇಳಿದರು.

ನರೇಂದ್ರ ಮೋದಿ ಪ್ರಧಾನಿ ಆಗಲಿ ಅಂತಾ ತಪಸ್ಸು ಮಾಡುತ್ತಿರುವವರಲ್ಲಿ ನಾನೂ ಒಬ್ಬ. ಮೋದಿವರು ಪ್ರಧಾನಿ ಆಗಲಿ ಅಂತಾ ಬಂದ್ರೆ ಎಲ್ಲರಿಗೂ ಸ್ವಾಗತ ಇದೆ. ಆದರೆ, ನಮ್ಮ ಕಾರ್ಯಕರ್ತರನ್ನ ಉಳಿಸಿಕೊಳ್ಳಬೇಕು. ನಮ್ಮ‌ಪಕ್ಷ ಉಳಿಸಿಕೊಳ್ಳಬೇಕು ಅಂತಾ ಮೈತ್ರಿಯನ್ನು ಪ್ರಸ್ತಾಪ‌ ಮಾಡಿ ಮಾತಾಡಿದ್ದಾರೆ. ಅವರ ಕಾರ್ಯಕರ್ತರನ್ನು ಅವರ ಪಕ್ಷವನ್ನ ಉಳಿಸಿಕೊಳ್ಳೋದಕ್ಕೆ ಮೈತ್ರಿ ಅನಿವಾರ್ಯ ಇದೆ ಎಂದಾದರೆ ಆ ಮೈತ್ರಿಯ ಅವಶ್ಯಕತೆ ಬಿಜೆಪಿಗೆ ಇಲ್ಲ ಎಂದು ಪ್ರತಿಪಾದಿಸಿದ್ದಾರೆ ಪ್ರೀತಮ್‌ ಗೌಡ.

ಮೋದಿಯವರು ಪ್ರಧಾನಿ ಆಗಬೇಕು ಅಂತಾ ಬಂದ್ರೆ ಅವರು ನಮ್ಮ ಶತ್ರುಗಳಾದ್ರೂ ಅವರನ್ನ ಅಪ್ಪಿಕೊಳ್ತೇವೆ. ಕಾರ್ಯಕರ್ತರನ್ನ ಉಳಿಸಿಕೊಳ್ಳಬೇಕು ಅಂತಾ ಬಂದ್ರೆ ಅದು ಮತ್ಲಬಿ ರಾಜಕಾರಣ ಆಗುತ್ತದೆ. ಆ ಮತ್ಲಬಿ ರಾಜಕಾರಣದ ಅವಶ್ಯಕತೆ ಬಿಜೆಪಿಗೆ ಇಲ್ಲ ಎಂದು ಪ್ರೀತಮ್‌ ಗೌಡ ಹೇಳುತ್ತಾರೆ.