ಇಸ್ಲಾಮಾಬಾದ್ : ದೆಹಲಿಯ ಕೆಂಪುಕೋಟೆ ಬಳಿ ಕಾರು ಸ್ಫೋಟಗೊಂಡ ಪ್ರಕರಣದ ಬೆನ್ನಲ್ಲೇ ವಿಡಿಯೋವೊಂದು ಬಹಿರಂಗವಾಗಿದೆ. ಆಪರೇಷನ್ ಸಿಂಧೂರದ ಪ್ರತೀಕಾರ ತೀರಿಸಿಕೊಳ್ಳಲು ಬಾಂಗ್ಲಾದೇಶದ ಮೂಲಕ ಭಾರತದ ಮೇಲೆ ದಾಳಿ ನಡೆಸುತ್ತೇವೆ ಎಂದು ಲಷ್ಕರ್-ಎ-ತೈಬಾ ಉಗ್ರ ಸೈಫುಲ್ಲಾ ಸೈಫ್ ಬೆದರಿಕೆ ಹಾಕಿದ್ದ ವಿಡಿಯೋವೊಂದು ಹರಿದಾಡುತ್ತಿದೆ.
ಅ.30ರಂದು ಪಾಕಿಸ್ತಾನದ ಖೈರ್‌ಪುರ್ ತಮೇವಾಲಿಯಲ್ಲಿ ನಡೆದ ರ‍್ಯಾಲಿಯ ಸಂದರ್ಭದಲ್ಲಿ ತೆಗೆದಿದ್ದ ವಿಡಿಯೋವೊಂದು ಚರ್ಚೆಗೆ ಗ್ರಾಸವಾಗಿದೆ. ವಿಡಿಯೋದಲ್ಲಿ ಎಲ್‌ಇಟಿ ಉಗ್ರ ಸೈಫುಲ್ಲಾ ಸೈಫ್, ಹಫೀಜ್ ಸಯೀದ್ ಸುಮ್ಮನೆ ಕುಳಿತಿಲ್ಲ, ಬಾಂಗ್ಲಾದೇಶದ ಮೂಲಕ ಭಾರತದ ಮೇಲೆ ದಾಳಿ ಮಾಡಲು ತಯಾರಿ ನಡೆಸುತ್ತಿದ್ದಾನೆ.
ಆಪರೇಷನ್ ಸಿಂಧೂರದ ಪ್ರತೀಕಾರ ತೀರಿಸಿಕೊಳ್ಳಲು ಬಾಂಗ್ಲಾದೇಶದಲ್ಲಿ ಎಲ್‌ಇಟಿ ಸಂಘಟನೆ ಸಕ್ರಿಯವಾಗಿದೆ. ಈಗ ಅಮೆರಿಕ ನಮ್ಮೊಂದಿಗಿದೆ. ಬಾಂಗ್ಲಾದೇಶ ಪಾಕಿಸ್ತಾನಕ್ಕೆ ಹತ್ತಿರವಾಗುತ್ತಿದೆ ಎಂದು ಹೇಳಿದ್ದಾನೆ.
ದೆಹಲಿಯ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಗೇಟ್ 1ರ ಬಳಿ ಸೋಮವಾರ (ನ.10) ಸಂಜೆ 6:45ರ ಸುಮಾರಿಗೆ ಸಂಭವಿಸಿದ ಭಾರೀ ಸ್ಫೋಟದಲ್ಲಿ ಎಂಟು ಜನರು ಸಾವನ್ನಪ್ಪಿದ್ದು, 24 ಜನರು ಗಾಯಗೊಂಡಿದ್ದಾರೆ. ಸ್ಫೋಟದಿಂದಾಗಿ ಆರು ಕಾರುಗಳು, ಎರಡು ಇ-ರಿಕ್ಷಾಗಳು ಮತ್ತು ಒಂದು ಆಟೋರಿಕ್ಷಾ ಬೆಂಕಿಗಾಹುತಿಯಾಗಿವೆ. ಸದ್ಯ ರಾಜಧಾನಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಫೋಟದ ಕಾರಣ ಮತ್ತು ಉದ್ದೇಶವನ್ನು ಪತ್ತೆಹಚ್ಚಲು ಎನ್‌ಐಎ ತನಿಖೆ ನಡೆಸುತ್ತಿದೆ. ಸ್ಫೋಟದ ತೀವ್ರತೆಯಿಂದಾಗಿ ಮೀಟರ್‌ಗಟ್ಟಲೇ ದೂರದಲ್ಲಿ ನಿಲ್ಲಿಸಲಾಗಿದ್ದ ವಾಹನಗಳ ಕಿಟಕಿಗಳು ಪುಡಿಪುಡಿಯಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಕುರಿತು ಖಾಸಗಿ ಆಸ್ಪತ್ರೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾತನಾಡಿ, ಈ ಕುರಿತು ತನಿಖೆ ನಡೆಯುತ್ತಿದೆ. ಎಲ್ಲಾ ರೀತಿಯಲ್ಲಿಯೂ ತನಿಖೆ ಮಾಡಲಾಗುತ್ತದೆ ಎಂದು ತಿಳಿಸಿದರು.
ದೆಹಲಿ ಸ್ಫೋಟಕ್ಕೂ ಮುನ್ನ ಸೋಮವಾರ (ನ.10) ಬೆಳಗಿನ ಜಾವ ಜೈಶ್-ಎ-ಮೊಹಮ್ಮದ್ ಮತ್ತು ಅನ್ಸರ್ ಘಜ್ವತ್-ಉಲ್-ಹಿಂದ್‌ಗೆ ಸಂಬಂಧಿಸಿದ ವೈಟ್-ಕಾಲರ್ ಭಯೋತ್ಪಾದಕ ಜಾಲದ ಮೂವರು ವೈದ್ಯರು ಸೇರಿದಂತೆ ಒಟ್ಟು ಎಂಟು ಜನರನ್ನು ಬಂಧಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ, ಹರಿಯಾಣ ಮತ್ತು ಉತ್ತರ ಪ್ರದೇಶದ ಪೊಲೀಸರು ಸುಮಾರು 15 ದಿನಗಳ ಕಾಲ ನಡೆಸಿದ ಜಂಟಿ ಕಾರ್ಯಾಚರಣೆ ಬಳಿಕ ಫರಿದಾಬಾದ್‌ನಲ್ಲಿ ಅಮೋನಿಯಂ ನೈಟ್ರೇಟ್, ಪೊಟ್ಯಾಸಿಯಮ್ ನೈಟ್ರೇಟ್ ಮತ್ತು ಸಲ್ಫರ್ ಸೇರಿದಂತೆ ಒಟ್ಟು 2,900 ಕೆ.ಜಿ ಸ್ಫೋಟಕ, ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಯಿತು.
ಭಾರತೀಯ ಗುಪ್ತಚರ ಸಂಸ್ಥೆಗಳು ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಭದ್ರತೆ ಹೆಚ್ಚಿಸಿದ್ದು, ಕಣ್ಗಾವಲಿರಿಸಿದೆ. ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳು ಬಾಂಗ್ಲಾದೇಶ ಹಾಗೂ ಅಲ್ಲಿನ ರಾಜಕೀಯ ಪರಿಸ್ಥಿತಿಯನ್ನು ಬಳಸಿಕೊಂಡು ಭಾರತದೊಳಗೆ ನುಸುಳಲು ಯತ್ನಿಸುತ್ತಿವ ಎಂದು ಅಧಿಕಾರಿಗಳು ತಿಳಿಸಿದ್ದಾರೆ.















