ಮನೆ ರಾಜ್ಯ ಬೆಳಗಾವಿ ಅಧಿವೇಶನದಲ್ಲಿ ಸರಕಾರದ ಬಣ್ಣ ಬರಲು ಮಾಡುತ್ತೇವೆ : ಆರ್.ಅಶೋಕ್

ಬೆಳಗಾವಿ ಅಧಿವೇಶನದಲ್ಲಿ ಸರಕಾರದ ಬಣ್ಣ ಬರಲು ಮಾಡುತ್ತೇವೆ : ಆರ್.ಅಶೋಕ್

0

ಕಲಬುರಗಿ : ಬರ ಪರಿಸ್ಥಿತಿಯಿಂದ ಕಂಗಾಲಾಗಿರುವ ರೈತರ ನೆರವಿಗೆ ಮುಂದಾಗದ ರಾಜ್ಯ ಸರಕಾರ ಅವರ ಬದುಕಿನ ಜತೆ ಚೆಲ್ಲಾಟ ಆಡುತ್ತಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.

ಕಲಬುರಗಿ ಜಿಲ್ಲೆಯ ಬರ ಪೀಡಿತ ಪ್ರದೇಶಗಳಿಗೆ ಮಂಗಳವಾರ ಭೇಟಿ ನೀಡಿ ರೈತರ ಜತೆ ಸಂವಾದ ನಡೆಸಿದ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಪರಿಹಾರ ಕಾರ್ಯಕ್ರಮಗಳಿಗೆ ಹಣ ಬಿಡುಗಡೆ ಮಾಡದೆ ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಲಾಗುತ್ತಿದೆ ಎಂದು ಸರಕಾರವನ್ನು ತರಾಟೆಗೆ ತೆಗೆದುಕೊಂಡರು.

ನಮ್ಮ ಪಕ್ಷ ಅಧಿಕಾರದಲ್ಲಿ ಇದ್ದಾಗ ಒಂದಕ್ಕೆ ಎರಡರಷ್ಟು ಪರಿಹಾರ ನೀಡಿ ರೈತರ ಹಿತ ಕಾಯಲಾಗಿತ್ತು. ಎನ್ ಡಿ ಆರ್ ಎಫ್ ಮಾನದಂಡಗಳ ಅನ್ವಯ ಕೇಂದ್ರ ಪರಿಹಾರ ನೀಡುವುದು ವಾಡಿಕೆ. ಅದಕ್ಕೆ ಮುಂಚೆ ರಾಜ್ಯ ಸರಕಾರ ನೆರವಿಗೆ ಧಾವಿಸುವ ಕೆಲಸ ಮಾಡದೆ ಹೊಣೆಗಾರಿಕೆ ಯಿಂದ ನುಣುಚಿಕೊಳ್ಳುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.

ಮನಮೋನ್ ಸಿಂಗ್ ಅವರ ಕಾಲದಿಂದಲೂ ಅನುಸರಿಸಿರುವ ನೀತಿ ಅನ್ವಯವೇ ಕೇಂದ್ರದ ಪರಿಹಾರ ಬಿಡುಗಡೆ ಆಗುತ್ತದೆ. ಅಲ್ಲಿಯವರೆಗೆ ಕಾಯದೆ ನಿಮ್ಮ ಪಾಲಿನ ಕರ್ತವ್ಯ ನಿರ್ವಹಿಸಿ. ಅದನ್ನು ಬಿಟ್ಟು ನೆಲ ಡೊಂಕು ನಾಟಕ ಆಡುವುದನ್ನು ನಿಲ್ಲಿಸಿ ಎಂದು ಹರಿಹಾಯ್ದರು.

ನಿಲುವಳಿ ಸೂಚನೆ

ರಾಜ್ಯ ಸರ್ಕಾರದ ಈ ರೈತ ವಿರೋಧಿ ವರ್ತನೆ ವಿರುದ್ಧ ವಿಧಾನಸಭೆಯ ಒಳಗೆ ಮತ್ತು ಹೊರಗೆ ಹೋರಾಟ ನಡೆಸಲಾಗುತ್ತದೆ. ಬೆಳಗಾವಿ ಅಧಿವೇಶನದಲ್ಲಿ ಮೊದಲ ದಿನವೇ ನಿಲುವಳಿ ಸೂಚನೆ ಮಂಡಿಸಲಾಗುತ್ತದೆ. ರೈತರಿಗೆ ನ್ಯಾಯ ದೊರಕಿಸುವ ತನಕ ಮಿರಮಿಸುವ ಪ್ರಶ್ನೆಯಿಲ್ಲ ಎಂದರು.

ಉಚಿತ ಗ್ಯಾರೆಂಟಿಗಳಿಂದ ಖಜಾನೆ ಖಾಲಿ ಆಗಿದೆ. ಹೀಗಾಗಿ ಯಾವುದೇ ಕಾರ್ಯಕ್ರಮಗಳಿಗೆ ಹಣ ನೀಡಲು ಆಗುತ್ತಿಲ್ಲ. ಸರಕಾರ ಪಾಪರ್ ಆಗಿದೆ. ಈ ಸತ್ಯ ಮರೆಮಾಚಲು ಕೇಂದ್ರದತ್ತ ಕೈ ತೋರಿಸಿ ನಾಟಕ ಆಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ವಿರುದ್ಧ ಕಿಡಿ ಕಾರಿದರು.

ಗ್ಯಾರೆಂಟಿಗಳ ಅನುಷ್ಠಾನದ ಬಗ್ಗೆ ಸಮೀಕ್ಷೆ ನಡೆಸುತ್ತಾರಂತೆ, ಅದರ ಬದಲು ರೈತರ ಸಂಕಷ್ಟ, ಬರ ಪರಿಸ್ಥಿತಿ ಬಗ್ಗೆ ಸಮೀಕ್ಷೆ ನಡೆಸಿ ಎಂದರಲ್ಲದೆ,ವಾಸ್ತವ ಸಂಗತಿಗಳನ್ನು ಮರೆಮಾಚಿ ತೆಲಂಗಾಣ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಮುಖಂಡರು ಭಾಷಣ ಬಿಗಿಯುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಅನೇಕ ಅಸ್ತ್ರಗಳಿವೆ

ಅಧಿವೇಶನದಲ್ಲಿ ಪ್ರಸ್ತಾಪಿಸಲು ಈ ಸರಕಾರವೇ ಅನೇಕ ಅಸ್ತ್ರಗಳನ್ನು ನೀಡಿದೆ. ರೈತ ವಿರೋಧಿ ನೀತಿ, ಸಚಿವ ಜಮೀರ್ ಅಹಮದ್ ಅವರು ಸಂವಿಧಾನಿಕ ಸ್ಪೀಕರ್ ಪೀಠವನ್ನು ಅಪಮಾನಿಸಿರುವುದು, ಸ್ಟಾಲಿನ್ ಜತೆ ಒಳ ಒಪ್ಪಂದ ಮಾಡಿಕೊಂಡು ಕಾವೇರಿ ನೀರು ಬಿಡುಗಡೆ ಮಾಡಿರುವುದು ಸೇರಿದಂತೆ ಇತರೆ ವಿಷಯಗಳಿವೆ. ಇವುಗಳನ್ನು ಪ್ರಸ್ತಾಪಿಸಿ ಸರಕಾರದ ಕಿವಿ ಹಿಂಡುವ ಕೆಲಸ ಮಾಡುತ್ತೇವೆ. ಅದಕ್ಕೂ ಬಗ್ಗದಿದ್ದರೆ ಮುಂದೆ ಯಾವ ಅಸ್ತ್ರ ಪ್ರಯೋಗಿಸಬೇಕು ಎಂಬುದು ಗೊತ್ತಿದೆ ಎಂದರು.

ಗೂಂಡಾ ರಾಜ್ಯ

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಗೂಂಡಾ ಸಂಸ್ಕೃತಿ ತಲೆ ಎತ್ತುತ್ತದೆ. ಪಕ್ಷದ ಕಾರ್ಯಕರ್ತನ ಮೇಲೆ ಕಲಬುರಗಿಯಲ್ಲಿ ವಿನಾ ಕಾರಣ ಹಲ್ಲೆ ನಡೆಸಿರುವ ಘಟನೆ ಇದಕ್ಕೆ ಸಾಕ್ಷಿ. ಉಡುಪಿಯಲ್ಲಿ ಇಬ್ಬರು ಭಜರಂಗದಳ ಕಾರ್ಯಕರ್ತರನ್ನು ಗಡಿಪಾರು ಮಾಡಲಾಗಿದೆ. ಹಿಂದೆ ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ 23 ಹಿಂದೂಗಳ ಹತ್ಯೆ ಮಾಡಲಾಯಿತು. ಎಲ್ಲೆಡೆ ಹಿಂದೂಗಳನ್ನು ಗುರಿಯಾಗಿಸಿ ಹಲ್ಲೆ, ಹತ್ಯೆ ಯತ್ನಗಳು ಹೆಚ್ಚುತ್ತಿವೆ. ಇದು ಗೂಂಡಾ ರಾಜ್ಯವಾಗಿ ಪರಿವರ್ತನೆ ಆಗಿದೆ ಎಂದು ಕಿಡಿ ಕಾರಿದರು.

ಆರ್ ಎಸ್ ಎಸ್ ಮುಟ್ಟಿದ್ರೆ ಸರ್ವನಾಶ

ಸರಕಾರದ ಇಲಾಖೆಗಳು ಬಿಜೆಪಿ ಅವಧಿಯಲ್ಲಿ ಆರ್ ಎಸ್ ಎಸ್ ಶಾಖೆಗಳಾಗಿದ್ದವು, ಈಗ ಅವುಗಳನ್ನು ಕ್ಲೀನ್ ಮಾಡಲಾಗುತ್ತಿದೆ ಎಂಬ ಕಾಂಗ್ರೆಸ್ ಮುಖಂಡರ ಹೇಳಿಕೆಗೆ ಕಿಡಿ ಕಾರಿದ ಅಶೋಕ್, ಧಮ್ಮು ತಾಕತ್ತು ಇದ್ದರೆ ಮುಟ್ಟಿ ನೋಡಲಿ. ಅಂತಹ ಇಂದಿರಾಗಾಂಧಿ ಅವರ ಕೈನಲ್ಲಿ ಏನು ಮಾಡಲು ಆಗಲಿಲ್ಲ. ನಿರ್ಬಂಧ ಹೇರಿ ಹಿಂದೆ ಪಡೆದರು. ಆರ್ ಎಸ್ ಎಸ್ ವಿಷಯಕ್ಕೆ ಬಂದವರೆಲ್ಲಾ ಸರ್ವನಾಶ ಆಗಿದ್ದಾರೆ. ಇವರಿಗೂ ಅದೇ ಗತಿ ಕಾದಿದೆ ಎಂದರು.

ಅಪ್ರತಿಮ ದೇಶಪ್ರೇಮಿ ಸಾವರ್ಕರ್ ಭಾವಚಿತ್ರ ತೆಗೆದು ಹಾಕಿರುವುದು ಸರಿಯಲ್ಲ. ಅವರು ಹಿಂದೂ ಮಹಾಸಭಾ ಅಧ್ಯಕ್ಷರಾಗಿದ್ದರು ಎಂಬುದೇ ಕಾಂಗ್ರೆಸ್ಸಿಗರ ಹೊಟ್ಟೆಕಿಚ್ಚಿಗೆ ಕಾರಣ. ಬೇಕಿದ್ದರೆ ಮತ್ತೊಂದು ನೆಹರು ಭಾವಚಿತ್ರ ಹಾಕಿಕೊಳ್ಳಲಿ, ಸಾವರ್ಕರ್ ಚಿತ್ರ ತೆಗೆಯಬಾರದಿತ್ತ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಸಿದ್ದು ಹಿಂದೂ ವಿರೋಧಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದಿನಿಂದಲೂ ಹಿಂದೂಗಳನ್ನು ವಿರೋಧಿಸಿ ಕೊಂಡೇ ಬಂದಿದ್ದಾರೆ. ದಸರಾ ಕುಸ್ತಿ ವೇಳೆ ಕೇಸರಿ ಪೇಠ ಕಿತ್ತಸೆದರು. ಈಗ ಅವರ ಸಂಪುಟ ಸಹೋದ್ಯೋಗಿ ಜಮೀರ್ ಸ್ಪೀಕರ್ ಪೀಠಕ್ಕೆ ಧರ್ಮವನ್ನು ತಂದು ನೀಚ ರಾಜಕಾರಣ ಮಾಡುತ್ತಿದ್ದಾರೆ. ಇವೆಲ್ಲವನ್ನೂ ರಾಜ್ಯದ ಜನತೆ ಗಮನಿಸುತ್ತಾರೆ. ನಮ್ಮ ಪಕ್ಷ ವಿಧಾನಮಂಡಲದ ಒಳಗೆ ಮತ್ತು ಹೊರಗೆ ಈ ಎಲ್ಲಾ ವಿಷಯಗಳ ವಿರುದ್ಧ ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು.