ಬೆಂಗಳೂರು: ಪ್ರತಿಭಟನೆ ಮಾಡಲು ಯಾರಿಗೂ ನಾವು ಅಡ್ಡಿ ಮಾಡುವುದಿಲ್ಲ. ಆದರೆ ಬಂದ್ ಮಾಡಲು ಅವಕಾಶವಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಗುರುವಾರ ಹೇಳಿದರು.
ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದರ ವಿರುದ್ಧ ವಿವಿಧ ಸಂಘಟನೆಗಳು ಶುಕ್ರವಾರ ಕರ್ನಾಟಕ ಬಂದ್ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
ಸದಾಶಿವನಗರದ ನಿವಾಸದ ಬಳಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ನಾಳೆ ಸಾವರ್ಜನಿಕರಿಗೆ ರಕ್ಷಣೆ ಕೊಟ್ಟೇ ಕೊಡುತ್ತೇವೆ. ಸುಪ್ರೀಂ ಕೋರ್ಟ್, ಹೈಕೋರ್ಟ್ ಬಂದ್ ವಿಚಾರವಾಗಿ ಒಂದಷ್ಟು ಸೂಚನೆಗಳನ್ನು ನೀಡಿವೆ, ಅವನ್ನು ಪಾಲಿಸಬೇಕು. ದಯವಿಟ್ಟು ಕಾನೂನು ಪಾಲಿಸಿ, ಬಂದ್ ಮಾಡದೆ ಪ್ರತಿಭಟನೆ ಮಾಡಿ ಎಂದು ಜನರಲ್ಲಿ ಮನವಿ ಮಾಡಿದರು.
ನಾಳೆ ನಡೆಯುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಗೆ ಆನ್ ಲೈನ್ ಬದಲಿಗೆ ಖುದ್ದಾಗಿ ಭಾಗವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
ತಮಿಳುನಾಡಿನವರು 11,000 ಸಾವಿರ ಕ್ಯೂಸೆಕ್ ನೀರಿಗೆ ಬೇಡಿಕೆ ಇಟ್ಟಿದ್ದು, ರಾಜ್ಯದ ಅಧಿಕಾರಿಗಳು ಸಮರ್ಥವಾಗಿ ವಾದ ಮಂಡಿಸಲಿದ್ದಾರೆ. ರಾಜ್ಯದ ಬರ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಲಿದ್ದಾರೆ. ಈಗ ಸಹಜವಾಗಿ 2,000 ಕ್ಯೂಸೆಕ್ ನೀರು ಹೋಗುತ್ತಿರಬಹುದು ಎಂದು ಅವರು ತಿಳಿಸಿದರು.
ಹಿರಿಯ ಕೃಷಿ ತಜ್ಞರು, ನೀರಾವರಿ ತಂತ್ರಜ್ಞರ ಸಭೆ ಕರೆದಿದ್ದು ಅಲ್ಲಿ ಚರ್ಚೆ ಮಾಡಲಾಗುವುದು. ಯಾರು ಭಾಗವಹಿಸುತ್ತಾರೆ ಎಂದು ಹೆಸರು ಬಹಿರಂಗಪಡಿಸಲು ಆಗುವುದಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದರು.
ನಾಳಿನ ಬೆಳವಣಿಗೆ ನೋಡಿಕೊಂಡು ನ್ಯಾಯಾಲಯಕ್ಕೆ ಹೋಗುತ್ತೀರಾ ಎಂಬ ಪ್ರಶ್ನೆಗೆ, ಈಗಾಗಲೇ ನ್ಯಾಯಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ. ತಾಂತ್ರಿಕ ಸಮಿತಿಯವರು 3,000 ಕ್ಯೂಸೆಕ್ ನೀರು ಬಿಡುಗಡೆಗೆ ಶಿಫಾರಸ್ಸು ಮಾಡಿದ್ದಾರೆ. ನಾಳೆ ಪ್ರಾಧಿಕಾರದವರು ಏನು ಸೂಚನೆ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕು ಎಂದು ತಿಳಿಸಿದರು.