ಬೆಂಗಳೂರು(Bengaluru): ಎಷ್ಟೇ ದೊಡ್ಡವರು ಇದ್ದರೂ ಮುಲಾಜಿಲ್ಲದೆ ಒತ್ತುವರಿ ತೆರವು ಮಾಡುತ್ತೇವೆ ಎಂದು ಕಂದಾಯ ಸಚಿವ ಆರ್ ಅಶೋಕ್ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಐಟಿಯ 30 ಕಂಪನಿಗಳು ಒತ್ತುವರಿ ಮಾಡಿವೆ. ಪ್ರತಿ ಸರ್ಕಾರಗಳು ಬಹಳ ನಾಟಕ ಮಾಡ್ತಾ ಇದ್ದವು. ಮಳೆ ನಿಂತ ಬಳಿಕ ಡೆಮಾಲಿಶ್ ನಿಂತು ಹೋಗುತ್ತಿತ್ತು. ನಮ್ಮ ಇಲಾಖೆ ಪಟ್ಟಿ ರೆಡಿ ಮಾಡಿ, ಬಿಬಿಎಂಪಿಗೆ ಕೊಟ್ಟಿದೆ ಎಂದರು.
ದೊಡ್ಡವರು ಚಿಕ್ಕವರು ಅಂತ ನೋಡಲ್ಲ. ಕಂದಾಯ ಇಲಾಖೆ, ಬಿಬಿಎಂಪಿ, ಬಿಡಿಎ ಜಂಟಿ ಕಾರ್ಯಚರಣೆ ಮಾಡುತ್ತಿವೆ. ನೆರೆ ನಮಗೆ ಪಾಠ ಕಲಿಸಿದೆ. ಬಾಗಮನೆ ಪಾರ್ಕ್ಗೆ ಯಾವುದೇ ವಿನಾಯಿತಿ ಕೊಟ್ಟಿಲ್ಲ ಎಂದು ಸಚಿವರು ಹೇಳಿದ್ದಾರೆ.
ಬಿಬಿಎಂಪಿ ಆಯುಕ್ತರ ಜೊತೆ ಮಾತಾಡಿದ್ದೀನಿ. ಯಾರಿಗೂ ಕಾಲಾವಕಾಶ ನೀಡಲ್ಲ. ಕೋರ್ಟ್ಗೂ ನಾವು ವಿನಂತಿ ಮಾಡ್ತೀವಿ. ಕೋರ್ಟ್ ರಾಜಕಾಲುವೆ ಒತ್ತುವರಿ ತೆರವಿಗೆ ಸೂಚಿಸಿದೆ. ಕೆವಿಯಟ್ ಹಾಕುವುದರ ಕುರಿತು ಸಿಎಂ ಜೊತೆ ಚರ್ಚೆ ಮಾಡ್ತೀವಿ. ಎಜಿ ಬಳಿಯೂ ಈ ಬಗ್ಗೆ ಚರ್ಚೆ ಮಾಡ್ತೇನೆ ಎಂದು ಹೇಳಿದರು.