ಮಡಿಕೇರಿ (Madikeri )- ಮಡಿಕೇರಿಯ ಶಾಲಾ ಆವರಣದಲ್ಲಿ ಭಜರಂಗದಳದ ಕಾರ್ಯಕರ್ತರಿಗೆ ಶಸ್ತ್ರಾಸ್ತ್ರ ತರಬೇತಿ ನೀಡಿರುವ ಕುರಿತಂತೆ ವಿರಾಜಪೇಟೆಯ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬಿಳಗಿ ಅವರು ಶಾಲೆಯ ಆಡಳಿತ ಮಂಡಳಿಯವರಿಂದ ವಿವರಣೆ ಪಡೆದುಕೊಂಡಿದ್ದಾರೆ.
ಪೊನ್ನಂಪೇಟೆಯ ಸಾಯಿ ಶಂಕರ ವಿದ್ಯಾಸಂಸ್ಥೆಯಲ್ಲಿ ಭಜರಂಗದಳದ ಕಾರ್ಯಕರ್ತರಿಗೆ ತ್ರಿಶೂಲ ದೀಕ್ಷೆ ಹಾಗೂ ಶಸ್ತ್ರಾಸ್ತ್ರ ತರಬೇತಿ ನಡೆಸಲಾಗಿತ್ತು. ವಿದ್ಯಾಸಂಸ್ಥೆಗೆ ಭೇಟಿ ನೀಡಿದ ಶ್ರೀಶೈಲ ಬಿಳಗಿ ಅವರು ಆಡಳಿತ ಮಂಡಳಿಯಿಂದ ವಿವರಣೆ ಪಡೆದುಕೊಂಡಿದ್ದಾರೆ.
ಈ ನಡುವೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ಸದಸ್ಯರು, ತರಬೇತಿಯಲ್ಲಿ ಭಾಗಿಯಾದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪೊಲೀಸರಿಗೆ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿಲ್ಲ.
ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಶಾಲಾ ಆವರಣ ನೀಡುವಂತೆ ಬಜರಂಗದಳದ ಮುಖಂಡರು ಮನವಿ ಮಾಡಿದ್ದರು. ಅದರಂತೆ ಶಾಲೆ ಆವರಣ ಬಿಟ್ಟು ಕೊಡಲಾಗಿತ್ತು. ಅಷ್ಟು ಮಾಹಿತಿ ಮಾತ್ರ ನಮ್ಮಲಿದೆ. ಶಾಲೆಯ ಶಿಕ್ಷಕರಾಗಲಿ, ಆಡಳಿತ ಮಂಡಳಿ ಸದಸ್ಯರಾಗಲಿ ಶಿಬಿರದಲ್ಲಿ ಭಾಗಿಯಾಗಿಲ್ಲ ಎಂದು ಆಡಳಿತ ಮಂಡಳಿ ಸದಸ್ಯರು ಶಿಕ್ಷಣಾಧಿಕಾರಿಗೆ ವಿವರಣೆ ನೀಡಿದ್ದಾರೆ.
ಮೇ 5ರಿಂದ 13ರ ತನಕ ಸಾಯಿ ಶಂಕರ ಶಾಲೆಯಲ್ಲಿ ನಡೆದ ಪ್ರಶಿಕ್ಷಣ ವರ್ಗದಲ್ಲಿ ಆರ್‌ಎಸ್‌ಎಸ್, ಭಜರಂಗದಳ, ವಿಎಚ್‌ಪಿ ಕಾರ್ಯಕರ್ತರಿಗೆ ಬಂದೂಕು ತರಬೇತಿ, ತ್ರಿಶೂಲ ವಿತರಣೆ ಮಾಡಿರುವ ಮಾಹಿತಿ ಗಮನಕ್ಕೆ ಬಂದಿದೆ. ವಿ.ಎಚ್.ಪಿ ಜಿಲ್ಲಾ ಅಧ್ಯಕ್ಷ ಪಿ.ಕೃಷ್ಣಮೂರ್ತಿ, ರಘು ಸಕಲೇಶಪುರ ಹಾಗೂ ಸಾಯಿ ಶಂಕರ ವಿದ್ಯಾಸಂಸ್ಥೆಯ ಅಧ್ಯಕ್ಷ ಜರು ಗಣಪತಿ ಶಿಬಿರ ಆಯೋಜಿಸಿದ್ದಾರೆ.
ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಸೇರಿ 120 ಮಂದಿ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಕೊಡಗು ಶಾಂತಿ, ಸಹಬಾಳ್ವೆಗೆ ಹೆಸರಾದ ಜಿಲ್ಲೆ. ಆತಂಕಕಾರಿ ತರಬೇತಿ ಶಿಬಿರದಿಂದ ಭವಿಷ್ಯದಲ್ಲಿ ಜಿಲ್ಲೆಯನ್ನು ಕೇಸರಿ ಭಯೋತ್ಪಾದನೆ ತಾಣವಾಗಿಸಲು ಹೊರಟಂತೆ ಕಾಣಿಸುತ್ತಿದ್ದು, ಆಯೋಜಕರು ಹಾಗೂ ಉತ್ತೇಜನ ನೀಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪಿಎಫ್‌ಐ ಸದಸ್ಯ ಕೆ.ಎಚ್.ಇಬ್ರಾಹಿಂ ಪೊನ್ನಂಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.