ತೂಕ ಇಳಿಸಲು ಚಿಂತೆ ಮಾಡುವವರಿಗೆ ಇಂದು ಹಲವು ವರ್ಕೌಟ್ ವಿಧಾನಗಳಿವೆ. ಅವುಗಳ ಸಾಲಿಗೆ ಉಷ್ಣತೆ ಹೆಚ್ಚು ಇರುವ ಕೋಣೆಯಲ್ಲಿ ಮಾಡುವ ಹೊಸದೊಂದು ವಿಧಾನವೊಂದು ಸೇರಿಕೊಂಡಿದೆ.
ಯೋಗದ ಒಂದು ಹೊಸ ವಿಧಾನವಿದು. ತೂಕವಿಳಿಸಲು ಇದು ಹೆಚ್ಚು ಪರಿಣಾಮಕಾರಿ ಎನ್ನಲಾಗಿರುವ ಈ ಯೋಗದ ಹೆಸರು ‘ಬಿಕ್ರಮ ಯೋಗ’.
ಇದು ಉಷ್ಣತೆ ಹೆಚ್ಚು ಇರುವ ಕೋಣೆಯಲ್ಲಿ ಮಾಡುವ ಯೋಗ. ವಾತಾವರಣದಲ್ಲಿರುವ ತೇವಾಂಶ ಹಾಗೂ ಉಷ್ಣತೆಯು ಯೋಗದ ಭಂಗಿಗಳನ್ನು ಹೆಚ್ಚು ಸುಲಭವಾಗಿ ಮಾಡಲು ಮತ್ತು ಬಹುಹೊತ್ತು ಭಂಗಿಗಳನ್ನು ಸಂಭಾಳಿಸಲು ಪೂರಕ ಎನ್ನಲಾಗಿದೆ. ಇದಲ್ಲದೆ ಹೆಚ್ಚು ಬಿಸಿಯಾದ ಕೋಣೆಯಲ್ಲಿ ಯೋಗ ಮಾಡುವಾಗ ಬೆವರುವುದೂ ಹೆಚ್ಚು. ಇದರಿಂದಾಗಿಯೇ ದೇಹ ಜಾಸ್ತಿ ಬೆವರುತ್ತದೆ ಕೂಡ. ಈ ಮೂಲಕ ಟಾಕ್ಸಿನ್ಗಳು ಅಧಿಕ ಪ್ರಮಾಣದಲ್ಲಿ ಹೊರ ಬೀಳುತ್ತವೆ. ಬಿಕ್ರಮ ಚೌಧರಿ ಎಂಬ ಯೋಗಪಟು ಜನಪ್ರಿಯಗೊಳಿಸಿರುವ ಈ ಯೋಗ ಈಗ ಅವರ ಹೆಸರಿನಲ್ಲೇ ಜನಪ್ರಿಯಗೊಳ್ಳುತ್ತಿದೆ.
ಅಧಿಕ ಉಷ್ಣತೆ, ಅಧಿಕ ಬೆವರು
400 ಡಿಗ್ರಿ ಸೆಂಟಿಗ್ರೇಡ್’ನಷ್ಟು ಉಷ್ಣತೆ ಇರುವ ಕೋಣೆಯಲ್ಲಿ 90 ನಿಮಿಷಗಳ ಕಾಲ ಯೋಗಾಸನದ ಭಂಗಿಗಳನ್ನು ಮಾಡುವುದನ್ನು ಈ ವಿಧಾನ ಒಳಗೊಂಡಿದೆ. ಈ ‘ಬಿಸಿ’ ಯೋಗ ದೇಹದಲ್ಲಿರುವ ಒತ್ತಡವನ್ನು ಹೊರಹಾಕಿ ಸಮಾಧಾನ ಮನಸ್ಥಿತಿಯನ್ನು ನೀಡುತ್ತದೆ. ಇದರಿಂದಾಗಿ ಈ ವರ್ಕೌಟ್ ವಿಧಾನ ಬೇಸರ ತರಿಸುವುದೂ ಇಲ್ಲ. ಪ್ರತಿದಿನವೂ ಮಾಡುವಂತೆ ಪ್ರೇರೇಪಿಸುತ್ತದೆ.ದೇಹವೂ ತಾನಾಗಿ ಸಣ್ಣದಾಗುತ್ತದೆ. ಉತ್ಕಟಾಸನ, ಹಾಲಾಸನ ಮತ್ತು ಅರ್ಧ ಮತ್ಸ್ಯೇಂದ್ರಾಸನಗಳನ್ನು ಇದರಲ್ಲಿ ಸೂಚಿಸಲಾಗಿದೆ.