ಯೋಗ ಎನ್ನುವ ಪದ ಸಂಸ್ಕೃತ ಮೂಲ ಧಾತುವಾದ “ಯುಜ್” ಎನ್ನುವುದರಿಂದ ಬಂದಿದ್ದು ; ಬಂಧಿಸು,ಕೂಡಿಸು, ನೊಗಕ್ಕೆ ಕಟ್ಟು, ಚಿತ್ತವನ್ನು ನಿರ್ದೇಶಿಸಿ ಕೇಂದ್ರೀಕರಿಸು, ಉಪಯೋಗಿಸುವ ಮತ್ತು ಆಸಕ್ತಿ ವಹಿಸುವ ಎನ್ನುವ ಅರ್ಥಗಳನ್ನು ಕೊಡುತ್ತದೆ… ಸಂಯೋಜನೆ ಅಥವಾ ಸಂಸರ್ಗ ಎನ್ನುವ ಅರ್ಥವೂ ಇದಕ್ಕೆ ಇದೆ. ಭಗವಂತನ ಇಚ್ಛೆಯೊಂದಿಗೆ ನಮ್ಮ ಇಚ್ಛೆಯ ನಿಜವಾದ ಸಂಸರ್ಗವೆಂದರೆ ಇದೆ. ಮಹದೇವ ದೇಸಾಯಿಯವರ ʼಗಾಂಧೀಜಿಯವರ ದೃಷ್ಟಿಯಲ್ಲಿ ಗೀತೆʼ ಎನ್ನುವ ಪುಸ್ತಕದ ಪ್ರಸ್ತಾವನೆಯಲ್ಲಿ “ಶರೀರದ, ಮನಸ್ಸಿನ ಮತ್ತು ಆತ್ಮದ ಸರ್ವಶಕ್ತಿಗಳನ್ನು ಭಗವಂತನೊಡನೆ ಸಂಯೋಜಿಸುವುದು ಯೋಗ. ಇದು ಚಿತ್ತ, ಮನಸ್ಸು, ಭಾವನೆಗಳು, ಇಚ್ಛೆ ಎನ್ನುವ ಯೋಗದ ಮೂಲ ಭಾವನೆಗಳನ್ನು ಶಿಸ್ತುಗೊಳಿಸುವುದು ಮತ್ತು ಜೀವನದ ಎಲ್ಲಾ ಅಂಶಗಳನ್ನು ಸಮದೃಷ್ಟಿಯಿಂದ ನೋಡಲು ಸಹಾಯಕವಾಗುವ ಆತ್ಮದ ಒಂದು ನಿಲುವು” ಎಂದು ಹೇಳುತ್ತಾರೆ.
ಭಾರತೀಯ ಆಸಕ್ತಿ ದರ್ಶನದಲ್ಲಿ ಯೋಗವು ಒಂದು. ಅದನ್ನ ೧೮೫ ಕ್ಲಿಷ್ಟ ಸೂತ್ರಗಳನ್ನು ಒಳಗೊಂಡ ಯೋಗ ಸೂತ್ರಗಳೆಂಬ ಶಾಸ್ತ್ರೀಯ ಗ್ರಂಥದಲ್ಲಿ ಪತಂಜಲಿ ಮುನಿ ಸಂಶೋಧಿಸಿ ಸಂಯೋಜಿಸಿದ್ದಾರೆ. ಹಿಂದುತ್ವದಲ್ಲಿ ಪ್ರತಿಯೊಂದು ವಸ್ತುವು ಪರಾತ್ಪರ ವಿಶ್ವಶಕ್ತಿಯಿಂದ (ಪರಮಾತ್ಮ ಅಥವಾ ಭಗವಂತ) ಅವ್ಯಾಸವಾಗಿದ್ದು ಜೀವಾತ್ಮನು ಅದರ ಒಂದು ಅಂಶವೆಂದು ಪರಿಗಣಿಸಲ್ಪಟ್ಟಿದೆ. ಜೀವಾತ್ಮನು ಪರಮಾತ್ಮನೊಂದಿಗೆ ಐಕ್ಯ ಹೊಂದಲು ಅಥವಾ ಸಂಸಾರ ಹೊಂದಲು ಮಾರ್ಗವನ್ನು ತೋರಿಸಿ ಆ ಮೂಲಕ ಮೋಕ್ಷ ಸಂಪಾದಿಸಲು ಸಹಾಯಮಾಡುವುದರಿಂದ ಯೋಗಶಾಸ್ತ್ರಕ್ಕೆ ಆ ಹೆಸರು ಬರಲು ಕಾರಣ. ಯೋಗ ಮಾರ್ಗವನ್ನು ಅವಲಂಬಿಸಿರುವವನು ಯೋಗಿ. ಯೋಗದರ್ಶನಕ್ಕೆ ಬಹುಮುಖ್ಯವಾದ ಆಧಾರ ವಣಿಸುವ ಭಗವದ್ಗೀತೆಯ ಆರನೇ ಅಧ್ಯಯನದಲ್ಲಿ ಶ್ರೀ ಕೃಷ್ಣನು ಅರ್ಜುನನಿಗೆ ಯೋಗದ ಅರ್ಥ “ನೋವು ಮತ್ತು ದುಃಖಗಳ ಸ್ಪರ್ಶದಿಂದ ಬಿಡುಗಡೆ” ಎಂದು ಹೇಳಿದ್ದಾನೆ : “ಯಾವಾಗ ಮನಸ್ಸು, ಬುದ್ಧಿ, ಮತ್ತು ಅಹಂಕಾರ ನಿರ್ಗಹಿಸಲ್ಪಡುತ್ತವೆಯೋ, ಚಂಚಲವಾದ ಕಾಮಗಳಿಂದ ಬಿಡುಗಡೆ ಹೊಂದಲ್ಪಟ್ಟು ಆತ್ಮದಲ್ಲಿ ನಿಲ್ಲುತ್ತದೋ, ಆಗ ಮಾನವನು ಭಗವಂತನೊಡನೆ ಸಂಸರ್ಗ ಹೊಂದಿದ ʼಯುಕ್ತಾʼ ಎಂದಾಗುತ್ತಾನೆ. ಎಲ್ಲಿ ಗಾಳಿಯು ಬೀಸುವುದಿಲ್ಲವೋ ಅಲ್ಲಿ ದೀಪವು ಅಲಗುವುದಿಲ್ಲ. ಹಾಗೆಯೇ ಮನಸ್ಸನ್ನು ಬುದ್ಧಿಯನ್ನು, ಅಹಂಕಾರವನ್ನು, ಅಧೀನವಾಗಿಸಿಕೊಂಡು ಯೋಗಿಯ ವಿಚಾರವೂ ಕೂಡ. ಯೋಗಸಾಧನೆಯಿಂದ ಮನಸ್ಸಿನ, ಬುದ್ಧಿಯ, ಅಹಂಕಾರದ ಚಂಚಲತೆಯನ್ನು ಯಾವಾಗ ತಡೆಯಬಹುದು ಆಗ ಯೋಗಿಯು ಆತ್ಮದ ಪ್ರಸಾದದಿಂದ ಸಂತೃಪ್ತ ನಾಗುತ್ತಾನೆ. ಆಗ ಬುದ್ಧಿ- ತರ್ಕ ಹಿಡಿತಕ್ಕೆ ಸಿಗದ, ಇಂದ್ರಿಯಗಳ ಶಕ್ತಿಗೆ ಅತೀತವಾದ, ನಿತ್ಯಾನಂದವನ್ನು ಅರಿಯುತ್ತಾನೆ. ಅಂಥವನು ಈ ಸದ್ವಸ್ತುವಿನಲ್ಲಿ ನೆಲೆಸಿ ಆದರಿಂದ ಹೊರಗೆ ಬರುವುದೇ ಇಲ್ಲ. ಎಲ್ಲದ್ದಕ್ಕಿಂತ ಉತ್ಕೃಷ್ಟವಾದ ನಿಧಿಯನ್ನು ಹುಡುಕಿರುತ್ತಾರೆ. ಇದಕ್ಕಿಂತ ಉತ್ತಮತರ ನಿಧಿ ಬೇರೊಂದಿಲ್ಲ. ಇದನ್ನು ಸಾಧಿಸಿದವನು ಇಂಥ ತೀಕ್ಷ್ಣವಾದ ದುಃಖದಿಂದಲೂ ಚಲಿಸುವುದಿಲ್ಲ. ಇದು ಯೋಗದ ನಿಜವಾದ ಅರ್ಥ-ನೋವು ಮತ್ತು ದುಃಖದ ಸ್ಪರ್ಶದಿಂದ ಬಿಡುಗಡೆ.”
ಚೆನ್ನಾಗಿ ಕೊರೆದ ವಜ್ರವು ಅನೇಕ ಮುಖಗಳನ್ನು ಹೊಂದಿದ್ದು ಪ್ರತಿಯೊಂದು ಒಂದೊಂದು ಪ್ರತಿಬಿಂಬಿಸುವಂತೆ ಯೋಗವೆನ್ನುವ ಪದವೂ ತನ್ನ ವಿವಿಧ ಅಂಶಗಳಿಂದ ವಿವಿಧ ಅರ್ಥಗಳನ್ನು ಸೂಚಿಸಿ ಶಾಂತಿ ಮತ್ತು ಸುಖವನ್ನು ಹುಡುಕುವ ಮಾನವನ ಸಾಧನೆ ಯ ವಿವಿಧ ಮುಖಗಳನ್ನು ತೋರಿಸುತ್ತದೆ.
ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ |
ಮಾ ಕರ್ಮಫಲಹೇತುರ್ಭೂ ಮಾ ತೇ ಸಂಗೋಸ್ತ್ವ ಕರ್ಮಣಿ ||
ಯೋಗಸ್ಥಃ ಕುರು ಕರ್ಮಾಣಿ ಸಂಗಂ ತ್ಯಕ್ತ್ವಾ ಧನಂಜಯ |
ಸಿದ್ದಸಿದ್ಧ್ಯೋ ಸಮೋ ಭೂತ್ವಾ ಸಮತ್ವಂ ಯೋಗ ಉಚ್ಯತೇ || ಭ.ಗೀ. ೨ -೪೭,೪೮
ಭಗವದ್ಗೀತೆಯ ಯೋಗವೆನ್ನುವ ಪದಕ್ಕೆ ಇತರ ವಿವರಣೆಗಳನ್ನು ನೀಡಿ ಕರ್ಮ ಯೋಗ ಎನ್ನುವುದರ ಮೇಲೆಯೂ ಹೆಚ್ಚಿನ ಗಮನ ನೀಡಿದೆ. ಅಲ್ಲಿ ಹೇಗೆ ಹೇಳಲ್ಪಟ್ಟಿದೆ : “ಕರ್ಮಕ್ಕೆ ಮಾತ್ರ ನೀನು ಅಧಿಕಾರಿ, ಆದ್ದರಿಂದ ಬರುವ ಫಲಗಳ ಮೇಲಲ್ಲ. ಫಲಗಳೇ ಸಾಧನೆಯ ಗುರಿಯಾಗುವಂತೆ ಬಿಡಬೇಡ. ಅಲ್ಲದೆ ಕರ್ಮವನ್ನು ಮಾಡದೇ ಇರಬೇಡ. ಸ್ವಾರ್ಥದ ಆಶೆಗಳನ್ನು ಬಿಟ್ಟು ದೇವರ ಹೆಸರಿನಲ್ಲಿ ದುಡಿ. ಜಯ ಅಪಜಯಗಳಿಂದ ಬಾಧಿತನಾಗದಿರು. ಈ ಸಮತ್ವವೇ ಯೋಗ.”
ಯೋಗವೆನ್ನುವುದು ಕರ್ಮದಲ್ಲಿ ಕುಶಲತೆ ಸಾಮರಸ್ಯ ಮತ್ತು ತಾಳ್ಮೆಯನ್ನು ಸೂಚಿಸುವುದೆಂದು ವಿವರಿಸಲ್ಪಟ್ಟಿದೆ.
ನಾತ್ಯಶ್ನತಸ್ತು ಯೋಗೋಸ್ತಿ ನ ಚೈಕಾಂತಮನಶ್ನತಃ |
ನ ಚಾತಿಸ್ವಪ್ನಶೀಲಸ್ಯ ಜಾಗ್ರತೋ ನೈವ ಚಾರ್ಜುನ ||
ಯುಕ್ತಃ ಸ್ವಪ್ನಾವಬೋಧಸ್ಯ ಯೋಗೋ ಭವತಿ ದುಃಖಹಾ || ಭ.ಗೀ. ೬-೧೬-೧೭
“ಯೋಗವೆನ್ನುವುದು ಅತಿ ಆಶೆಯಿಂದ ಭಕ್ತಿಸುವವನಿಗೆ ಅಲ್ಲ, ಅತಿಯಾಗಿ ಉಪವಾಸ ಮಾಡುವವನಿಗೂ ಅಲ್ಲ, ಹೆಚ್ಚು ನಿದ್ರೆ ಮಾಡುವವನಿಗೂ ಅಲ್ಲ, ಯಾವಾಗಲೂ ನಿದ್ರೆ ಮಾಡದವನಿಗೂ ಅಲ್ಲ, ತಿನ್ನುವುದರಲ್ಲಿ ವಿಶ್ರಾಂತಿ ತೆಗೆದುಕೊಳ್ಳುವುದರಲ್ಲಿ ಮಧ್ಯವರ್ತಿಯಾಗುವಂತೆ, ಕೆಲಸ ಮತ್ತು ಕರ್ಮದಲ್ಲಿ ಕ್ರಮ ಪಾಲಿಸುವಂತೆ ನಿದ್ರೆ ಮತ್ತು ಎಚ್ಚರ ಇವುಗಳಲ್ಲಿ ಹೊಂದಾಣಿಕೆಗೊಳಿಸುವಂತೆ ಮಾಡಿ ಯೋಗವು ನೋವು ಮತ್ತು ದುಃಖವನ್ನು ನಿವಾರಿಸುತ್ತದೆ.”
ಕಠೋಪನಿಷತ್ತು ಯೋಗವನ್ನು ಈ ರೀತಿ ವಿವರಿಸುತ್ತದೆ : “ಇಂದ್ರಿಯಗಳು ನಿಗ್ರಹಿಸಲ್ಪಟ್ಟು ಮನಸ್ಸು ಸ್ಥಿಮಿತದಲ್ಲಿದ್ದು, ಬುದ್ಧಿ ಚಾಂಚಲ್ಯ ರಹಿತವಾಗಿದ್ದಾಗ ಅತ್ಯುನ್ನತ ಪದವನ್ನು ಸಾಧಿಸಿದಂತಾಗುವುದೆಂದು ಪಂಡಿತರು ಹೇಳುತ್ತಾರೆ. ಈ ರೀತಿಯ ಕ್ರಮಬದ್ಧ ಇಂದ್ರಿಯಗಳ ಮತ್ತು ಮನಸ್ಸಿನ ನಿಗ್ರಹವು ಯೋಗವೆಂದು ಹೇಳಲ್ಪಟ್ಟಿದೆ. ಇದನ್ನು ಸಾಧಿಸಿದವನು ಎಲ್ಲಾ ಭ್ರಮೆಗಳಿಂದಲೂ ನಿವೃತ್ತನಾಗುತ್ತಾನೆ.”
ಯೋಗ ಸೂತ್ರಗಳ ಪ್ರಥಮ ಅಧ್ಯಾಯದ ಎರಡನೇ ಸೂತ್ರದಲ್ಲಿ ಯೋಗವೆಂದರೆ “ಚಿತ್ತವೃತ್ತಿಗಳ ನಿರೋಧ” ಎಂದು ಪತಂಜಲಿಮುನಿ ವಿವರಣೆ ಕೊಟ್ಟಿದ್ದಾರೆ. ಇದನ್ನು ಮನಸ್ಸಿನ ವಿವಿಧ ವೃತ್ತಿಗಳನ್ನು ಹತೋಟಿಯಲ್ಲಿಡುವುದೆಂದೂ, ಚಿತ್ತದ ಚಂಚಲತೆಯನ್ನು ದಮನಗೊಳಿಸುವುದೆಂದು ಹೇಳಬಹುದು. ಚಿತ್ತವೆನ್ನುವ ಪದ ವಿಸ್ತಾರವಾದ ಅರ್ಥಗಳಲ್ಲಿ ಮನಸ್ಸಿನ ಈ ಮೂರು ಅಂಶಗಳನ್ನು ಕೂಡಿಕೊಂಡಂತೆ ಹೇಳಬಹುದು : ೧. ಮನಸ್ಸು (ಗಮನವಿಡುವ, ಆರಿಸುವ, ಬಿಡುವ ವ್ಯಕ್ತಿ ಇರುವ ಮನಸ್ಸಿನ ಶಕ್ತಿ. ಇದು ಮನಸ್ಸಿನ ಓಲಾಡುವ ಅನಿರ್ಧಾರದ ಶಕ್ತಿ) ೨. ಬುದ್ದಿ ಅಥವಾ ತರ್ಕ( ಬುದ್ಧಿ ಎಂದರೆ ವಸ್ತುಗಳ ಪರಸ್ಪರ ಅಂತರವನ್ನು ಗಮನಿಸುವ, ನಿರ್ಧರಿಸುವ ಹಂತ), ಮತ್ತು ೩. ಅಹಂಕಾರ (ʼನಾನು ತಿಳಿಯುತ್ತೇನೆʼ ಎನ್ನುವುದನ್ನು ತಿಳಿಸುವ ಹಂತ.)
“ವೃತ್ತಿ” ಎನ್ನುವ ಪದ ಸಂಸ್ಕೃತ ಮೂಲಧಾತುವಾದ “ವೃತ್” ಎನ್ನುವುದರಿಂದ ಬಂದಿದೆ ; ಇದು ಸುತ್ತು, ತಿರುವು, ಮುಂದುವರಿಸು ಎನ್ನುವ ಅರ್ಥಗಳನ್ನು ಕೊಡುತ್ತದೆ. ಈ ರೀತಿಯಲ್ಲಿ ಅದು ಕರ್ಮದ ಒಂದು ನಿಲುವು, ನಡವಳಿಕೆ, ಸ್ಥಿತಿ ಅಥವಾ ಮಾನಸಿಕ ಹಂತ ಎಂದು ಅರ್ಥ ಕೊಡುತ್ತದೆ. ಚಂಚಲ ಮನಸ್ಸಿಗೆ ಶಾಂತಿ ತರುವ ಕ್ರಿಯಾತ್ಮಕ ಮಾರ್ಗಗಳಲ್ಲಿ ನಮ್ಮ ಕ್ರಿಯಾಶಕ್ತಿಯನ್ನು ನಡೆಸುವುದು ಯೋಗ. ಒಂದು ಮಹಾನದಿಯು ಸರಿಯಾದ ರೀತಿಯಲ್ಲಿ ಅಡ್ಡಕಟ್ಟಲ್ಪಟ್ಟು ದೊಡ್ಡ ಸರೋವರವಾಗಿ ಕ್ಷಾಮವನ್ನು ನಿವಾರಿಸಿ ಕಾರ್ಯೋಧ್ಯಮಗಳಿಗೆ ಬೇಕಾದ ಚಾಲನಶಕ್ತಿ ಕೊಡುವಂತೆ, ಮನಸ್ಸು ಕೂಡ ಹತೋಟಿಯಲ್ಲಿದ್ದರೆ ಶಾಂತಿಯ ಸರೋವರವಾಗಿ ಮಾನವನ ಪ್ರಗತಿಗೆ ಬೇಕಾಗುವ ಸಕಲ ಸಾಮರ್ಥ್ಯವನ್ನು ಒದಗಿಸುತ್ತದೆ.
ಮನಸ್ಸಿನ ನಿಗ್ರಹದ ಪ್ರಶ್ನೆಗೆ ಸುಲಭವಾದ ಉತ್ತರ ಸಿಗದೆಂದು ಭಗವದ್ಗೀತೆಯ ಆರನೆಯ ಅಧ್ಯಾಯನದಲ್ಲಿ ಕೃಷ್ಣಾರ್ಜುನ ಸಂವಾದದಿಂದ ನಮಗೆ ತಿಳಿದು ಬರುತ್ತದೆ.
“ಕೃಷ್ಣ ! ಯೋಗವೆಂದರೆ ಸರ್ವಥಾ ಏಕವಾದ ಬ್ರಹ್ಮದೊಡನೆ ಸಂಯೋಗ ವೆಂದು ಹೇಳಿರುವೆ. ಆದರೆ ಮನಸ್ಸು ಅಷ್ಟು ಚಂಚಲವಾಗಿರುವಾಗ, ಅದು ಹೇಗೆ ಸಾಧ್ಯವಾದಿತು ? ಮನಸ್ಸು ಕ್ಷೋಭೆಯನ್ನುಂಟುಮಾಡುವುದು, ಬಲವತ್ತರವಾದುದು, ದೃಢವಾದದ್ದು, ಗಾಳಿಯನ್ನು ಹಿಡಿದಿಡಲು ದುಸ್ಸಾಧ್ಯವಾಗಿರುವಂತೆ ಇದರ ನಿಗ್ರಹವು ಕೂಡ ಇರುತ್ತದೆ.” ಅದಕ್ಕೆ ಕೃಷ್ಣನು ಉತ್ತರಿಸುತ್ತಾನೆ. “ಮನಸ್ಸು ಚಂಚಾಲ್ಯ ಸ್ವಭಾವದ್ದು, ನಿಗ್ರಹಿಸಲು ಕಷ್ಟಕರವಾದುದು ಎಂಬುದು ನಿಜ. ಆದರೆ ನಿರಂತರ ಅಭ್ಯಾಸದಿಂದ ಮತ್ತು ವೈರಾಗ್ಯದಿಂದ ಅದನ್ನು ನಿಗ್ರಹಿಸಬಹುದು. ಮನಸ್ಸನ್ನು ನಿಗ್ರಹ ಮಾಡಿಕೊಳ್ಳಬಲ್ಲವನಿಗೆ ತನ್ನ ಶಕ್ತಿಯನ್ನು ಸರಿಯಾದ ದಾರಿಯಲ್ಲಿ ಕೊಂಡೊಯ್ಯುವವನಿಗೆ, ಅದು ಸಾಧ್ಯ.”