ಮನೆ ಪ್ರವಾಸ ವಿಜಯಪುರದಲ್ಲಿ ಪ್ರವಾಸಿಗರು ಯಾವ್ಯಾವ ಸ್ಥಳಕ್ಕೆ ಭೇಟಿ ನೀಡಬಹುದು ? ಇಲ್ಲಿದೆ ಮಾಹಿತಿ

ವಿಜಯಪುರದಲ್ಲಿ ಪ್ರವಾಸಿಗರು ಯಾವ್ಯಾವ ಸ್ಥಳಕ್ಕೆ ಭೇಟಿ ನೀಡಬಹುದು ? ಇಲ್ಲಿದೆ ಮಾಹಿತಿ

0

ವಿಜಯಪುರ: ಗೋಳಗುಮ್ಮಟ ವೀಕ್ಷಿಸಲು ಪ್ರವಾಸಿಗರ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿದೆ, ಹೇಳಿ ಕೇಳಿ ಈ ಜಿಲ್ಲೆ ಬರದ ನಾಡೆಂದು ಬಿಂಬಿಸಿಕೊಂಡಿದೆ. ಹೀಗಾಗಿ ಬೇಸಿಗೆ ಕಾಲದಲ್ಲಿ ಪ್ರವಾಸಿಗರಿಲ್ಲದೇ ಇಲ್ಲಿನ ಐತಿಹಾಸಿಕ ಸ್ಥಳಗಳು ಬಿಕೋ ಎನ್ನುತ್ತಿದ್ದವು. ಸದ್ಯ ನಿಧಾನವಾಗಿ ಮಳೆಗಾಲ ಆರಂಭವಾಗುತ್ತಿದ್ದು ರಾಜ್ಯ ಸೇರಿದಂತೆ ಅನ್ಯ ರಾಜ್ಯದಿಂದಲೂ ಪ್ರವಾಸಿಗರ ದಂಡು ವಿಜಯಪುರದತ್ತ ಹರಿದುಬರುತ್ತಿದೆ. ಗೋಳಗುಮ್ಮಟ ಸೇರಿದಂತೆ ವಿಜಯಪುರದಲ್ಲಿ ಪ್ರವಾಸಿ ಸ್ಥಳಗಳನ್ನು ಕಣ್ತುಂಬಿಕೊಳ್ಳಲು ವಿಶ್ವದ ನಾನಾ ಭಾಗಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಹಾಗಾದರೆ ಗೋಳಗುಮ್ಮಟದ ಜೊತೆಗೆ ವಿಜಯಪುರದಲ್ಲಿ ಇನ್ನೂ ಏನೆಲ್ಲ ಪ್ರವಾಸಿ ಸ್ಥಳಗಳನ್ನು ವೀಕ್ಷಿಸಬಹುದು? ಪ್ರವಾಸಿಗರಿಗೆ ಸೌಕರ್ಯ ಹೇಗಿದೆ? ಊಟ ಉಪಹಾರಕ್ಕೆ ತಕ್ಕ ವ್ಯವಸ್ಥೆ ಇದೆಯೇ? ಎಲ್ಲ ವಿವರ ಇಲ್ಲಿದೆ.

Join Our Whatsapp Group

ಗೋಳ ಗುಮ್ಮಟ ನೋಡಲೇಬೇಕು

ರಾಜ್ಯದಲ್ಲಿಯೇ ಸುಂದರ ಜಿಲ್ಲೆಗಳಲ್ಲಿ ಒಂದಾಗಿರುವ ವಿಜಯಪುರ ಐತಿಹಾಸಿಕ ಸ್ಮಾರಕಗಳಿಗೆ ಹೆಸರುವಾಸಿಯಾಗಿದೆ. ಪ್ರಾಚೀನ ನಗರಗಳಲ್ಲಿ ಒಂದಾದ ವಿಜಯಪುರ ಜಿಲ್ಲೆ 200 ವರ್ಷಗಳ ಕಾಲ ಆದಿಲ್ ಶಾಹಿಯ ರಾಜರು ಆಳಿ ಹೋಗಿದ್ದಾರೆ. ಮುಖ್ಯವಾಗಿ ಈ ಗೋಳ ಗುಮ್ಮಟದಲ್ಲಿ ಒಂದು ಬಾರಿ ಪಿಸುಗುಟ್ಟರೆ ಸಾಕು, ಅದು ಏಳು ಬಾರಿ ಪ್ರತಿಧ್ವನಿಸುತ್ತದೆ!  ನಿರ್ಮಿಸಿದ ಬಗ್ಗೆ ತಿಳಿದುಬರುತ್ತದೆ. ಜಗತ್ತಿನ ಏಳು ಅದ್ಭುತಗಳಲ್ಲಿ ಗೋಳ ಗುಮ್ಮಟ ಕೂಡಾ ಒಂದಾಗಿದ್ದು ಮೊಹಮ್ಮದ್ ಆದಿಲ್ ಶಾ ಇದನ್ನು ನಿರ್ಮಿಸಿದ್ದಾನೆ. ಗೋಳ ಗುಮ್ಮಟವನ್ನು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ವೀಕ್ಷಿಸಲು ಅವಕಾಶವಿದೆ.

ಇಬ್ರಾಹಿಂ ರೋಜಾ

ಇಬ್ರಾಹಿಂ ರೋಜಾ ಇಸ್ಲಾಂ ಸ್ಮಾರಕಗಳಲ್ಲೊಂದು. ಇದಕ್ಕೆ ದಕ್ಷಿಣ ಭಾರತದ ಆಗ್ರಾ ಎಂದು ಕರೆಯುವುದುಂಟು. ಇದು ವಿಜಯಪುರ ನಗರದ ಪಶ್ಚಿಮ ಭಾಗದಲ್ಲಿ ಬರುತ್ತದೆ. ಇಲ್ಲಿ ಎರಡನೇ ಆದಿಲ್ ಶಹಾನ ಮತ್ತು ಆತನ ಹೆಂಡತಿಯ ಸಮಾಧಿ ಇಲ್ಲಿದೆ. ಪಕ್ಕದಲ್ಲಿರುವ ಮಸೀದಿಗಳು ಬಹಳಷ್ಟು ಅದ್ಬುತವಾಗಿವೆ. ಎತ್ತರದ ಕಲ್ಲಿನ ಮೇಲೆ ಬೃಹತ್ ಕಟ್ಟಡ ನಿರ್ಮಿಸಲು ಸಾಧ್ಯವೇ ? ಆದರೆ ಇಲ್ಲಿ ಸಾಧ್ಯವಾಗಿದೆ.

ಗಗನ ಮಹಲ್

ನಗರದ ಬಸ್ ನಿಲ್ದಾಣದಿಂದ ಅಂದಾಜು 2 ಕಿ.ಮೀ. ಕ್ರಮಿಸಿದರೆ ಸಿಗುವುದು ಈ ಗಗನ ಮಹಲ್.  ಕ್ರಿ.ಶ. 1561ರ ಕಾಲಘಟ್ಟದಲ್ಲಿ ಮೊಘಲ್ ಸಾಮ್ರಾಜ್ಯದ ದೊರೆ 1ನೇಯ ಆದಿಲ್ ಶಾ ನಿತ್ಯ ವಿಶ್ರಮಿಸಲು ಮತ್ತು ಇಲ್ಲಿ ಆರಾಮ್ ಪಡೆಯುವ ಉದ್ದೇಶದಿಂದ ಇದನ್ನು ನಿರ್ಮಿಸಲಾಯಿತು. ಇದರ ಮುಂದಿರುವ ಅರಮನೆ ಆವರಣ ಆದಿಲ್ ಶಾ ಆಸ್ಥಾನವಾಗಿತ್ತು. ಇದನ್ನು ಅತಿಥಿಗಳಿಗೆ, ಗಣ್ಯವ್ಯಕ್ತಿಗಳಿಗೆ ಮೀಸಲಾಗಿತ್ತು. ನೋಡಲು ಅಷ್ಟೊಂದು ಸುಂದರವಾಗಿಲ್ಲದಿದ್ದರೂ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.

ಬಾರಾ ಕಮಾನ್

ಹಿಂದಿಯ ಬಾರಹಾ ಎಂಬುದರಿಂದ ಬಾರಾ ಎಂಬ ಹೆಸರು ಹುಟ್ಟಿಕೊಂಡಿದೆ. ಈ ಕಟ್ಟಡ 12  ಕಮಾನುಗಳನ್ನು ಹೊಂದಿದ್ದರಿಂದ ಇದಕ್ಕೆ ಬಾರಾ ಕಮಾನ್ ಎನ್ನುತ್ತಾರೆ. ಇದನ್ನು 1672ರಲ್ಲಿ ಎರಡನೇ ಆದಿಲ್ ಷಾ ನಿರ್ಮಿಸಿದ ಬಗ್ಗೆ ಉಲ್ಲೇಖವಿದೆ. ಈ ಬಾರಾ ಕಮಾನ್ ಸಂಪೂರ್ಣಗೊಳ್ಳದ ಕಟ್ಟಡವಾಗಿದೆ. ಹೌದು, ಎರಡನೇ ಆದಿಲ್ ಷಾನ ತಂದೆ ಮೊಹಮ್ಮದ್ ಆದಿಲ್ ಶಾ ಕೈಯಲ್ಲಿ ಮಗನ ಕೊಲೆಯಾಗುತ್ತಾನೆ. ಬಾರಾ ಕಮಾನ್ ನಿರ್ಮಾಣವಾದರೆ, ಗೋಲ್ ಗುಂಬಜ್‌ ವಾಸ್ತುಶಿಲ್ಪದ ವೈಭವ ಕಡಿಮೆಯಾಗುತ್ತದೆ ಎಂಬ ಕಾರಣದಿಂದ ಹೀಗೆ ಮಾಡಿರಬಹುದೆಂದು ಅಂದಾಜಿಸಲಾಗಿದೆ.

ಬಾರಾ ಕಮಾನ್ ಬಳಿ ಎರಡನೇ ಅಲಿ ಆದಿಲ್ ಶಾ, ಅವನ ಪತ್ನಿ ಚಂದ್ ಬೀಬಿ ಮತ್ತು ಉಪಪತ್ನಿಯರು ಹಾಗೂ ಅವರ ಹೆಣ್ಣುಮಕ್ಕಳ ಸಮಾಧಿಗಳನ್ನು ನೀವಿಲ್ಲಿ ಕಾಣಬಹುದು.

ಬಿಜಾಪುರದ ಕೋಟೆ ನೋಡಿ!

ಕ್ರಿ.ಶ 1566 ರಲ್ಲಿ ಯುಸೂಫ್ ಆದಿಲ್ ಶಾ ಈ ಕೋಟೆಯನ್ನು ನಿರ್ಮಿಸಿದ. ಈ ಕೋಟೆಯ ಗೋಡೆ 30ರಿಂದ 60ಅಡಿ ಎತ್ತರವಿದೆ. 10 ಮುಖ್ಯ ದ್ವಾರಗಳಿದ್ದು , 96 ಬುರ್ಜ್​ಗಳಿವೆ. ಇದು ಭಾರತದ ಪ್ರಮುಖ ಸ್ಮಾರಕಗಳಲ್ಲಿ ಒಂದಾಗಿದೆ. ಇಲ್ಲಿಗೆ ಬರುವ ಪ್ರವಾಸಿಗರು ಗೈಡ್ ಗಳೊಂದಿಗೆ ಬರುವುದು ಸೂಕ್ತವಾಗಿದೆ.

ಶಿವಗಿರಿಯ ಶಿವನ ಪ್ರತಿಮೆ

ವಿಜಯಪುರಕ್ಕೆ ಬಂದ ಪ್ರವಾಸಿಗರು ಈ ಶಿವಗಿರಿಗೆ ಬರ್ಲೆಬೇಕು. ಹೌದು, ಈ ಶಿವನ ಪ್ರತಿಮೆ‌ ವಿಶ್ವದ ನಾಲ್ಕನೇ ಅತಿ ಎತ್ತರದ ಶಿವನ ಪ್ರತಿಮೆ ಇದಾಗಿದೆ. 85 ಅಡಿ ಎತ್ತರದ ಶಿವನ ಪ್ರತಿಮೆ ಸುಮಾರು ನಾಲ್ಕು ಕಿಲೋಮೀಟರ್ ದೂರದಿಂದಲೇ ಕಾಣಿಸುತ್ತದೆ. ಇದು ರಂಬಾಪುರ ಗ್ರಾಮದ ಉಕ್ಕಲಿ ರಸ್ತೆಯಲ್ಲಿದೆ. 2006ರಲ್ಲಿ ಶಿವಗಿರಿಯ ಶಿವನ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಲಾಗಿದೆ.

ಟಾಂಗಾದಲ್ಲಿ ಸಂಚರಿಸುವುದೇ ಚಂದ

ಕುದುರೆ ಟಾಂಗಾಗಳು ಹೆಚ್ಚಾಗಿ ಎಲ್ಲೂ ಕಾಣಿಸುವುದಿಲ್ಲ. ಆದರೆ ವಿಜಯಪುರದ ಗೋಳಗುಮ್ಮಟದ ಮುಂದೆ ಟಾಂಗಾಗಳು ಸಾಲುಗಟ್ಟಿ ನಿಂತಿರುತ್ತವೆ. ಗೋಳಗುಮ್ಮಟ ನೋಡಿಕೊಂಡು ಇದರಲ್ಲಿ ಕುಳಿತು ಪ್ರವಾಸಿ ಸ್ಥಳಗಳತ್ತ ಸಂಚರಿಸುತ್ತ ಬಾಲ್ಯದ ನೆನಪನ್ನು ಮೆಲುಕುಹಾಕಬಹುದು. ಆಟೋಗಳಲ್ಲಿ ಸಂಚರಿಸಿದರೆ ದುಪ್ಪಟ್ಟು ಹಣ ನೀಡಬೇಕಾಗುತ್ತದೆ. ಆದರೆ ಟಾಂಗಾದಲ್ಲಿ ಸಂಚರಿಸಿದರೆ ಹಣ ಉಳಿತಾಯವಾಗುತ್ತದೆ.

ಸದ್ಯ ಕೋವಿಡ್ ಕಡಿಮೆಯಿದೆ.  ಲಾಕ್​ಡೌನ್ ಇಲ್ಲ. ಬಿಸಿಲು ಬೇಗೆ ಕಣ್ಮರೆಯಾಗಿ ಮಳೆಯಿಂದ ಎಲ್ಲೆಂದರಲ್ಲಿ ತಂಪನೆಯ ಗಾಳಿ ಸೂಸುತ್ತಿದೆ. ಹೀಗಾಗಿ ವಿಜಯಪುರಕ್ಕೆ ಪ್ರವಾಸ ಹೊರಡಲು ಇದು ಸಖತ್ ಸೂಕ್ತ ಸಮಯವಾಗಿದೆ.

ವಿಜಯಪುರಕ್ಕೆ ಹೇಗೆ ಬರುವುದು?

ಮಂಗಳೂರು, ಬೆಂಗಳೂರು, ಮೈಸೂರಿಂದ ವಿಜಯಪುರಕ್ಕೆ ನೇರ ರೈಲು ಸಂಪರ್ಕವಿದೆ. ಬಸವ ಎಕ್ಸ್‌ಪ್ರೆಸ್ ಮಧ್ಯಾಹ್ನ 1.25ಕ್ಕೆ ಹೊರಟು ಮರುದಿನ ಬೆಳಗ್ಗೆ 9 ಗಂಟೆಗೆ ವಿಜಯಪುರ ತಲುಪಬಹುದು. ಗೋಲ್ ಗುಂಬಜ್ ಎಕ್ಸ್‌ಪ್ರೆಸ್ ಮಧ್ಯಾಹ್ನ 3.45ಕ್ಕೆ ಹೊರಟು ಮರುದಿನ 8.30ಕ್ಕೆ ವಿಜಯಪುರ ತಲುಪುತ್ತದೆ. ಮಂಗಳೂರಿನಿಂದ ಪ್ರತಿದಿನ ವಿಜಯಪುರ ವಿಶೇಷ ಎಕ್ಸ್‌ಪ್ರೆಸ್‌ ಮಧ್ಯಾಹ್ನ 2.50ಕ್ಕೆ ಹೊರಟು ಮರುದಿನ ಬೆಳಗ್ಗೆ 9.50ಕ್ಕೆ ವಿಜಯಪುರಕ್ಕೆ ಆಗಮಿಸುವುದು. ಪ್ರವಾಸಿಗರು ಈ ರೈಲಿಗೆ ಬರುವುದು ಒಳ್ಳೆಯದು. ಸರ್ಕಾರಿ ಬಸ್ ಮೂಲಕ ಬರುತ್ತೀರಿ ಅಂತಾದರೆ ಎಲ್ಲಾ ನಗರ, ಪಟ್ಟಣದಿಂದ ಬಸ್​​ಗಳ ಸೌಲಭ್ಯವಿದೆ.

ವಿಜಯಪುರದಲ್ಲಿ ವಸತಿಗೆ ಬೇಕಾದಷ್ಟು ಖಾಸಗಿ ಹೋಟೆಲ್​ಗಳಿವೆ. ಆದರೆ ದರ ಮಾತ್ರ ಕೊಂಚ ದುಬಾರಿ. ಹೀಗಾಗಿ ನಿಮ್ಮ ಪರ್ಸ್ ಸ್ವಲ್ಪ ದಪ್ಪಗಿರಲಿ! ಹಿತ ಮಿತವಾಗಿ ಖರ್ಚು ಮಾಡಿಯೂ ಒಳ್ಳೆಯ ಅನುಭವ ಪಡೆಯಬಹುದು.