ಬೆಂಗಳೂರು: 2013 ರಲ್ಲಿ ಶೋಭಾ ಕರಂದ್ಲಾಜೆ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಲೀಲಾ ಪ್ಯಾಲೇಸ್ ನಲ್ಲಿ ಭೇಟಿ ಮಾಡಿದ್ದು ಯಾರನ್ನು? ಮೂರ್ನಾಲ್ಕು ದಿನಗಳಲ್ಲಿ ಬಹಿರಂಗ ಮಾಡುತ್ತೇವೆ ಎಂದು ಮಾಜಿ ಸಚಿವ ಎಂಬಿ ಪಾಟೀಲ್ ಬಾಂಬ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ, ಶೋಭಾ ಕರಂದ್ಲಾಜೆ 2013 ರಲ್ಲಿ ದೆಹಲಿ ಲೀಲಾ ಪ್ಯಾಲೆಸ್ ಹೋಟೆಲ್ ನಲ್ಲಿ ಎರಡು ಬಾರಿ ಯಾರನ್ನು ಭೇಟಿ ಮಾಡಿದ್ದರು? ಏನು ಮಾತುಕತೆ ನಡೆದಿತ್ತು ಎಂಬುದನ್ನು ಮೂರ್ನಾಲ್ಕು ದಿನಬಿಟ್ಟು ಬಹಿರಂಗ ಮಾಡುತ್ತೇವೆ. ನಾವು ಗಾಳಿಯಲ್ಲಿ ಗುಂಡು ಹೊಡೆದಿಲ್ಲ, ನಮ್ಮದು ನಿಜ ಗುಂಡು ಎಂದರು.
ಯಡಿಯೂರಪ್ಪನವರನ್ನು ತೆಗೆಯುವಾಗ ಅನಾರೋಗ್ಯ ಇತ್ತಾ? ಇರಲಿಲ್ಲವಲ್ಲ. ಇವತ್ತೂ ದಷ್ಟಪುಷ್ಟವಾಗಿದ್ದಾರೆ. ಬಿಎಸ್ ವೈ ರಾಜೀನಾಮೆ ಕೊಡಿಸಿರುವ ವಿಚಾರವಾಗಿ ಹಿಡನ್ ಅಜೆಂಡಾ ಇತ್ತು. ಹೆದರಿಕೊಂಡು ಬೊಮ್ಮಾಯಿಯನ್ನು ಸಿಎಂ ಮಾಡಿದರು, ಅವರು ಆಕಸ್ಮಿಕ ಸಿಎಂ. ಶೆಟ್ಟರ್, ಸವದಿಗೆ ಟಿಕೆಟ್ ನಿರಾಕರಿಸಿದರು ಎಂದು ಕಿಡಿಕಾರಿದರು.
ಲಿಂಗಾಯತ ಸಮುದಾಯಕ್ಕೆ ಬಿಜೆಪಿಯ ಹಿಡನ್ ಅಜೆಂಡಾ ಅರಿವಾಗಿದೆ. ಬಿಜೆಪಿಯವರು ನಮ್ಮನ್ನು ಬಳಸಿ ಒಂದು ಹಂತಕ್ಕೆ ತಂದು ಕಸಕ್ಕೆ ಬಿಸಾಡಿದರು ಎಂಬುದು ಗೊತ್ತಾಗಿದೆ. ಲಿಂಗಾಯತರು ಶೇ.ಐವತ್ತರಷ್ಟು ಮಂದಿ ಕಾಂಗ್ರೆಸ್ಗೆ ಮತ ಹಾಕುತ್ತಾರೆ. ಮರಳಿ ಮನೆಗೆ ಮರಳುತ್ತಿದ್ದಾರೆ. ಇದರಿಂದ ಗಾಬರಿಗೊಂಡು ಮೋದಿ, ಅಮಿತ್ ಶಾ ಕರೆಸಲಾಗುತ್ತಿದೆ ಎಂದು ಆರೋಪಿಸಿದರು.
ಶೆಟ್ಟರ್, ಸವದಿ ಸೋಲಿಸಲು ಯಡಿಯೂರಪ್ಪರನ್ನು ಬಿಟ್ಟಿದ್ದಾರೆ. ಸವದಿ, ಶೆಟ್ಟರ್ ಮುಗಿಸಲು ಸಂತೋಷ್, ಜೋಶಿ ಮುಗಿಸಲಿ. ಇಬ್ಬರು ಮಕ್ಕಳ ಭವಿಷ್ಯಕ್ಕಾಗಿ ಅವರನ್ನು ಬಳಸಲಾಗುತ್ತಿದೆ. ಯಡಿಯೂರಪ್ಪರನ್ನು ಹೆದರಿಸಿದ್ದಾರೆ ಎಂದು ಆರೋಪಿಸಿದರು.
ಯಡಿಯೂರಪ್ಪನವರು ಕೆಜೆಪಿ ಸ್ಥಾಪನೆ ಮಾಡಿದಾಗ ಅವರು ನೇರ ಬಿಜೆಪಿ ಎದೆಗೆ ಚೂರಿ ಹಾಕಿದ್ದರು. ಯಡಿಯೂರಪ್ಪನವರಿಂದ ಕೆಟ್ಟ ಕೆಲಸ ಮಾಡಿಸಿದರು. ಕಣ್ಣೀರು ಹಾಕಿಸಿದರು. ಬಳಿಕ ಕಸದ ಬುಟ್ಟಿಗೆ ಎಸೆದಂತೆ ಎಸೆದರು ಎಂದು ಹೇಳಿದರು.
ನಾವು ನಿರ್ಣಾಯಕ ಹಂತಕ್ಕೆ ತಲುಪಿದ್ದೇವೆ. ನಮ್ಮಪಕ್ಷ ಸಂಘಟನೆ ಮೂಲಕ ವ್ಯಾಪಕವಾಗಿ ಪ್ರಚಾರ ನಡೆಸಲಾಗಿದೆ. ನಮ್ಮ ಕಾರ್ಯಕ್ರಮ, ಪ್ರಚಾರಕ್ಕೆ ಜನರ ಬೆಂಬಲ ವ್ಯಕ್ತವಾಗುತ್ತಿದೆ. ಕಾಂಗ್ರೆಸ್ 130-140 ಸ್ಥಾನ ಬರುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.