ಬೆಂಗಳೂರು(Bengaluru): ಪೇ ಸಿಎಂ ಪೋಸ್ಟರ್ ಗೆ ಕೌಂಟರ್ ಆಗಿ ಕಾಂಗ್ರೆಸ್ ವಿರುದ್ಧ ಪೋಸ್ಟರ್ ಮಾಡಿದ್ದ ಬಿಜೆಪಿಗರ ಬಂಧನ ಏಕಿಲ್ಲ? ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ವಿಧಾನಸೌಧದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬಂಧನ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್ ಪಕ್ಷದಿಂದ 40% ಕಮಿಷನ್ ಆಂದೋಲನ ನಡೆಯುತ್ತಿದೆ. ನಾನು, ಡಿಕೆಶಿ, ಬಿ.ಕೆ ಹರಿಪ್ರಸಾದ್ ಎಲ್ಲರೂ ಆಂದೋಲನ ಮಾಡಿದ್ದೇವೆ. ಅದರ ಅಂಗವಾಗಿ ನಿನ್ನೆ ಪೋಸ್ಟರ್ ಅಂಟಿಸಿದ್ದಾರೆ. ಬಿಜೆಪಿ ಕೂಡ ಸುಳ್ಳು ಆರೋಪ ಮಾಡಿದ್ದಾರೆ ಎಂದು ಕಿಡಿಕಾರಿದರು.
ನಮಗೂ ಬೇಡವಾದವರು ಅಂತಾ ಪೊಸ್ಟರ್ ಅಂಟಿಸಿದ್ದಾರೆ ಅಲ್ವಾ? ಅವರನ್ನು ಯಾಕೆ ಬಂಧನ ಮಾಡಿಲ್ಲ. ಬಿ.ಆರ್. ನಾಯ್ಡು ಅವರನ್ನು ರಾತ್ರಿ ಬಂಧನ ಮಾಡಿದ್ದಾರೆ. ಅವರೇನು ಕಳ್ಳತನ ಮಾಡಿದ್ರಾ? ನಾವು ಆಂದೋಲನ ಮಾಡುತ್ತಿದ್ದೇವೆ. ಸರ್ಕಾರದ ವಿರುದ್ಧ ಹೋರಾಟ ಮಾಡಬಾರದಾ..? ಎಂದು ಪ್ರಶ್ನಿಸಿದರು.
ನಮಗೂ ರಿ-ಡೂ ಸಿದ್ದರಾಮಯ್ಯ ಅಂದಿದ್ದಾರೆ. ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಪತ್ರ ಬರೆದು ಎಷ್ಟು ದಿನ ಆಯ್ತು, ಯಾಕೆ ಈ ಬಗ್ಗೆ ತನಿಖೆ ಮಾಡಿಸಲಿಲ್ಲ. ಯಡಿಯೂರಪ್ಪ ಆಪ್ತನ ಮೆಲೆ ದಾಳಿಯಾಗಿತ್ತಲ್ವಾ, ಅವಾಗ ದಾಖಲೆ ಸಿಕ್ಕಿತ್ತು, ತನಿಖೆ ಮಾಡಿಸಬೇಕಿತ್ತಲ್ವಾ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಸಂಯೋಜಕರ ಬಂಧನ ಖಂಡಿಸಿ ನಾವೇ ಶುಕ್ರವಾರ ಪೋಸ್ಟರ್ ಹಿಡಿದು ಪ್ರತಿಭಟನೆ ಮಾಡಲಿದ್ದೇವೆ ಎಂದು ತಿಳಿಸಿದರು.