ರಾಮನಗರ: ತಮಿಳು ನಾಡು ರಾಜ್ಯಕ್ಕೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಇಂದು ನಡೆಯುತ್ತಿರುವ ಕರ್ನಾಟಕ ಬಂದ್ ಗೆ ರಾಮನಗರದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ರಾಜ್ಯದ ಸಂಸದರ ಫೋಟೊ ಹಿಡಿದುಕೊಂಡು, ನಾಲಾಯಕ್ ಸಂಸದರು ಎಂದು ಧಿಕ್ಕಾರ ಕೂಗಲಾಗುತ್ತಿದೆ.
ರಾಮನಗರದ ಐಜೂರು ವೃತ್ತದಲ್ಲಿ ಕನ್ನಡ ಪರ ಮತ್ತು ರೈತ ಸಂಘಟನೆಗಳು, ‘ಕಾವೇರಿ ನೀರಿನ ಬಗ್ಗೆ ಧ್ವನಿ ಎತ್ತದ ನಾಲಾಯಕ್ ಸಂಸದರು’ ಎಂದು ಘೋಷಣೆ ಕೂಗುತ್ತಿದ್ದಾರೆ.
ಖಾಲಿ ಮಡಕೆ ತೋರಿಸಿ ‘ನಮ್ಮಲ್ಲಿ ನೀರಿಲ್ಲ’ ಎಂದು ಘೋಷಣೆ ಕೂಗುತ್ತಿದ್ದು, ‘ಇಂದು ಸಭೆ ಕರೆದಿದ್ದೀರಿ ನಿಮಗೆ ಮಾನ ಮರ್ಯಾದೆ ಇದೆಯಾ’ ಎಂದು ಸರ್ಕಾರಕ್ಕೆ ಪ್ರಶ್ನೆ ಹಾಕುತ್ತಿದ್ದಾರೆ. ‘ಸಂಜೆಯೊಳಗೆ ನೀರು ನಿಲ್ಲಿಸದಿದ್ದರೆ ಡ್ಯಾಂ ಒಡೆಯಬೇಕಾಗುತ್ತದೆ ಎಂದು ಎಚ್ಚರಿಸುತ್ತಿದ್ದಾರೆ. ರಾಮನಗರ ಸಂಸದ ತಮಿಳುನಾಡಿಗೆ ಏಜೆಂಟ್ ರೀತಿ ಕೆಲಸ ಮಾಡುತ್ತಿದ್ದಾರೆ ಎಂದು ಘೋಷಣೆ ಕೂಗುತ್ತಿದ್ದಾರೆ.
ಎಮ್ಮೆ ಕೊರಳಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಭಾವಚಿತ್ರ ಹಾಕಿ ಮೆರವಣಿಗೆ ಮಾಡುತ್ತಿದ್ದಾರೆ. ಕನ್ನಡ, ರೈತ ಪರ ಸಂಘಟನೆಗಳು ನಗರದ ಕೆಂಪೇಗೌಡ ವೃತ್ತದಿಂದ ಐಜೂರು ವೃತ್ತದ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದಾರೆ.