ಫೆಬ್ರವರಿಯಲ್ಲಿ ನಮ್ಮ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ ಇಂದು ಪ್ರಚಲಿತ ವಿದ್ಯಾಮಾನವಾಗಿದೆ
ಭಾರತವನ್ನು ಹಿಂದೂಸ್ತಾನ, ಇಂಡಿಯಾ, ಭಾರತ, ಭರತ ಭೂಮಿ, ಭಾರತ ವರ್ಷ ಎಂಬ ಹಲವು ಹೆಸರುಗಳಿಂದ ಕರೆಯಲಾಗುತ್ತದೆ. ಬ್ರಿಟಿಷರ ಆಡಳಿತಾವಧಿಯಲ್ಲಿ ಭಾರತವನ್ನು ಇಂಡಿಯಾ ಎಂದು ಕರೆಯುತ್ತಿದ್ದರು. ಅದಕ್ಕೂ ಮುನ್ನ ಮೊಘಲರು ಹಿಂದೂಸ್ತಾನ್ ಎಂದು ಕರೆಯುತ್ತಿದ್ದರು. ಬ್ರಿಟಿಷರು ಭಾರತದ ಸ್ವಾತಂತ್ರ್ಯ ಕಸಿದುಕೊಂಡಂತೆ ನಮ್ಮ ನೆರೆಯ ಸಿಂಹಳದ ಸ್ವಾತಂತ್ರ÷್ಯವನ್ನೂ ಕಸಿದುಕೊಂಡಿದ್ದರು. ಭಾರತಕ್ಕೆ ಸ್ವಾತಂತ್ರ್ಯ ಬಂದಂತೆ ಸಿಂಹಳಕ್ಕೂ ಬಂದಿತು. ಬ್ರಿಟಿಷರ ಕಪಿ ಮುಷ್ಠಿಯಲ್ಲಿದ್ದಾಗ ಸಿಂಹಳ ‘ಸಿಲೋನ್’ ಎಂದಾಗಿತ್ತು. ಆದರೆ ಬ್ರಿಟಿಷರ ಆಳ್ವಿಕೆ ತೊಲಗಿದ ಬಳಿಕ ಆ ದೇಶ ಮತ್ತೆ ತನ್ನ ಅಸ್ಮಿತೆಯನ್ನು ನೆನಪಿಸಿಕೊಂಡು ಸಿಲೋನ್ ಎಂದಾಗಿದ್ದ ದೇಶದ ಹೆಸರನ್ನು “ಶ್ರೀಲಂಕಾ” ಎಂದು ಬದಲಾಯಿಸಿಕೊಂಡು ಸ್ವಂತಿಕೆ ಮೆರೆದಿದೆ. ಅದೇ ರೀತಿ ನಮ್ಮ ನೆರೆಯ ಬರ್ಮಾ ದೇಶ ಕೂಡ ತನ್ನ ಹೆಸರನ್ನು ಮ್ಯಾನ್ಮಾರ್ ಎಂದು ಬದಲಿಸಿಕೊಂಡು ಸ್ವಾಭಿಮಾನ ಮೆರೆದಿದೆ. ಭಾರತದೊಳಗೇ ಇರುವ ಮದ್ರಾಸ್ ಈಗ ಚೆನ್ನೈ ಆಗಿದೆ. ಬ್ರಿಟಿಷರ ನಾಲಿಗೆ ತಿರುಗದ ಬಾಯಲ್ಲಿ ‘ಬಾಂಬೆ’ ಆಗಿದ್ದ ವಾಣಿಜ್ಯ ನಗರಿ ಈಗ ಮುಂಬೈ ಆಗಿದೆ. ಬ್ಯಾಂಗಲೋರ್ ಈಗ ಬೆಂಗಳೂರು, ಶಿಮೊಗ ಈಗ ಶಿವಮೊಗ್ಗ, ಹುಬ್ಲಿ ಈಗ ಹುಬ್ಬಳ್ಳಿ, ಬೆಲ್ಲಾರಿ ಈಗ ಬಳ್ಳಾರಿ, ಒರಿಸ್ಸಾ ಈಗ ಒಡಿಶಾ, ಕಲ್ಕಟಾ ಈಗ ಕೊಲ್ಕೊತ್ತಾ ಆಗಿ ಬದಲಾಗಿದೆ.
ಇಷ್ಟಾದರೆ ಸಾಕೆ? ಬ್ರಿಟಿಷರ ಬಾಯಲ್ಲಿ ವಿಕೃತಗೊಂಡ ಉಳಿದ ಹೆಸರುಗಳು ಹಾಗೆಯೇ ಇರಬೇಕೆ? ಅಷ್ಟಕ್ಕೂ ಅದ್ಯಾವ ಪಾಪಿ ಈ ನಮ್ಮ ಭರತ ದೇಶವನ್ನು ಇಂಡಿಯಾ ಎಂದು ಕರೆದನೋ ದೇವರಿಗೂ ಗೊತ್ತಿರಲಿಕ್ಕಿಲ್ಲ. ವಾಸ್ತವವಾಗಿ ಈ ದೇಶದ ಹೆಸರು ಭಾರತ ಎಂದು ಸಹಸ್ರಾರು ವರ್ಷಗಳಿಂದಲೂ ಕೇಳಿ ಬರುತ್ತಿದೆ. “ಗಾಯಂತಿ ದೇವಾಃ ಕಿಲ ಗೀತಕಾನಿ ಧನ್ಯಾಸ್ತುಯೇ ಭಾರತ ಭೂಮಿ ಭಾಗೆ” (ಸ್ವರ್ಗಕ್ಕೆ, ಮುಕ್ತಿಗೆ ದ್ವಾರವಾದ ಭಾರತದಲ್ಲಿ ಹುಟ್ಟಿದವರು ದೇವತೆಗಳಿಗಿಂತ ಧನ್ಯರು) ಹೀಗೆಂದು ಪ್ರಾಚೀನ ವೇದಗಳೇ ಸಾರಿವೆ. “ಉತ್ತರಂ ಯತ್ಸ ಮುದ್ರಸ್ಯ ಹಿಮಾದ್ರೇಶ್ಬೈವ ದಕ್ಷಿಣಂ| ವರ್ಷಂ ತದ್‌ಭಾರತಂ ನಾಮ ಭಾರತೀ ಯತ್ರ ಸಂತತಿಃ” (ಸಾಗರಗಳಿಂದ ಉತ್ತರಕ್ಕೆ ಮತ್ತು ಹಿಮಾಲಯದಿಂದ ದಕ್ಷಿಣಕ್ಕೆ ಇರುವ ಭೂಮಿಗೆ ಭರತ ವರ್ಷ ಎಂದು ಹೆಸರು. ಭಾರತೀಯರು ಇದರ ಮಕ್ಕಳು) ಈ ಮಾತನ್ನು ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ಪೂರ್ವಿಕರು ಹೇಳಿದ್ದಾರೆ. ಅಲ್ಲೆಲ್ಲೂ ಈ ದೇಶದ ಹೆಸರು ಇಂಡಿಯಾ ಎಂದು ಉಲ್ಲೇಖವಾಗಿಲ್ಲ. ಭಾರತವೆಂದೇ ಉಲ್ಲೇಖವಾಗಿದೆ. ಧಾರ್ಮಿಕ ಕ್ರಿಯೆಗಳಲ್ಲಿ ಮಂತ್ರ ಪಠಣ ಮಾಡುವಾಗಲೂ ಭರತ ವರ್ಷೇ, ಭರತ ಖಂಡೇ, ಜಂಬೂ ದ್ವೀಪೇ ಎಂದೇ ನಮ್ಮ ದೇಶವನ್ನು ಪರಿಚಯಿಸಲಾಗುತ್ತದೆ. ಇಂಡಿಯಾ ವರ್ಷೇ ಇಂಡಿಯಾ ಖಂಡೇ ಎಂದು ಎಂದು ಸಂಭೋದಿಸಿ ಹೇಳುವುದಿಲ್ಲ.
ರಾಷ್ಟ್ರಕವಿ ಕುವೆಂಪು ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ ಎಂದು ಈ ದೇಶವನ್ನು ಹಾಡಿ ಸ್ತುತಿಸಿದ್ದಾರೆಯೇ ಹೊರತು ಇಂಡಿಯಾ ಜನನಿಯ ತನುಜಾತೆ ಎಂದು ಅಪ್ಪಿತಪ್ಪಿಯೂ ಹೇಳಿಲ್ಲ. ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಸಂದರ್ಭಗಳಲ್ಲಿ ನಾವೆಲ್ಲ ಭಾರತ ಮಾತಾ ಕೀ ಜೈ ಎಂದು ಘೋಷಣೆ ಹಾಕುತ್ತೇವೆಯೇ ಹೊರತು ಇಂಡಿಯಾ ಮಾತಾ ಕೀ ಜೈ ಎಂದು ಯಾರೂ ಹೇಳುವುದಿಲ್ಲ. ಹಾಗಿದ್ದರೆ ಇಂಡಿಯಾ ಎಂಬ ಹೆಸರು ಈ ದೇಶಕ್ಕೆ ಅಂಟಿಕೊಂಡಿದ್ದಾದರೂ ಹೇಗೆ? ಅದಕ್ಕೇಕೆ ನಾವು ಇನ್ನೂ ಜೋತು ಬಿದ್ದಿದ್ದೇವೆ? ಇನ್ನೂ ಭಾರತವನ್ನು ನಾವು ಇಂಡಿಯಾ ಎಂದೇ ಸಂಭೋದಿಸಬೇಕೆ?
ಈ ಪ್ರಶ್ನೆಗೆ ಎನ್ ಸೈಕ್ಲೋಪೀಡಿಯಾ, ಇತಿಹಾಸದ ಪುಸ್ತಕಗಳು, ಇತ್ಯಾದಿಗಳನ್ನು ಹುಡುಕಿ ಜಾಲಾಡಿದರೂ ಸೂಕ್ತ ಉತ್ತರ ನಮಗೆ ದೊರಕುವುದಿಲ್ಲ. ಭಾರತಕ್ಕೆ ಈ ಹಿಂದೆ “ಹಿಂದೂಸ್ಥಾನ” ಎಂಬ ಹೆಸರಿತ್ತು ಎಂಬ ಬಗ್ಗೆ ಇತಿಹಾಸದ ಪುಟಗಳಲ್ಲಿ ಸಾಕಷ್ಟು ಉಲ್ಲೇಖಗಳಿವೆ. ಭಾರತ ಸಿಂಧೂ ನದಿಯ ತೀರದಲ್ಲಿದ್ದುದರಿಂದ ಪರ್ಶಿಯನ್ನರು, ಅವರ ಭಾಷೆಯಲ್ಲಿ ಸಕಾರ ಹಕಾರ ಆಗುವುದರಿಂದ ಸಿಂಧೂ ನದಿಯನ್ನು ಇಂಡಸ್ ಎಂದು ಕರೆದರೆಂದು, ಅದಾದ ಮೇಲೆ ೨೫೦೦ ವರ್ಷಗಳ ಬಳಿಕ ಗ್ರೀಕರು ಅದನ್ನು ಇಂಡೋಸ್ ಎಂದು ಕರೆದು, ಅನಂತರ ಲ್ಯಾಟಿನ್ ಭಾಷೆಯಲ್ಲಿ ಅದು ಇಂಡಸ್ ಆಗಿ ಮಾರ್ಪಟ್ಟಿತೆಂದು ಒಂದು ಅಧ್ಯಯನ ತಿಳಿಸುತ್ತದೆ. ಇಂಡಸ್ ನದಿಯ ತೀರದಲ್ಲಿರುವ ದೇಶವನ್ನು ಇಂಡಿಯಾ ಎಂದು ಯೂರೋಪಿಯನ್ನರು ಅನಂತರ ಕರೆಯತೊಡಗಿದರೆಂದು ಈ ಅಧ್ಯಯನದ ಸಾರ. ಬ್ರಿಟಿಷರು ವ್ಯಾಪಾರಕ್ಕೆಂದು ತಕ್ಕಡಿ ಹಿಡಿದು ಭಾರತಕ್ಕೆ ಬಂದ ಬಳಿಕ ಈ ದೇಶವನ್ನು ಇಂಡಿಯಾ ಎಂದೇ ಕರೆದಿರಬಹುದು. ಏಕೆಂದರೆ ಅವರು ಈ ದೇಶವನ್ನು ಉದ್ಧಾರ ಮಾಡುವುದಕ್ಕೆಂದು ಬಂದಿರಲಿಲ್ಲ. ಇಲ್ಲಿನ ಸಂಪತ್ತನ್ನು ದೋಚಿ, ಇಲ್ಲಿನ ನಾಗರಿಕತೆ, ಸಂಸ್ಕೃತಿ, ಸದಾಚಾರಗಳನ್ನು ಹೊಸಗಿ ಹಾಕಿ, ಇದನ್ನೊಂದು ಗುಲಾಮಿ ರಾಷ್ಟ್ರ ಮಾಡಬೇಕೆಂಬುದೇ ಅವರ ಹಿಡನ್ ಅಜೆಂಡಾ ಆಗಿತ್ತು. ಈ ಪ್ರಯತ್ನದಲ್ಲಿ ಅವರು ಯಶಸ್ವಿಯಾಗಿದ್ದು ಈಗ ಇತಿಹಾಸ.
ಹೀಗೆ ಯಾವುದೋ ಕಾರಣಕ್ಕೆ, ಯಾರದೋ ತೆವಲಿಗೆ ಅಥವಾ ಇನ್ನಾರದೋ ಕುತಂತ್ರಕ್ಕೆ ಇಂಡಿಯಾ ಎಂದು ವಿಕೃತಗೊಂಡು ಸೃಷ್ಟಿಯಾದ ಈ ದೇಶದ ಹೆಸರನ್ನು ಸ್ವಾತಂತ್ರ್ಯ ಬಂದ ಬಳಿಕ ಮತ್ತೆ ಸರಿಪಡಿಸಬೇಕೆಂಬ ತುಡಿತ ದೇಶದ ಆಡಳಿತ ಸೂತ್ರ ಹಿಡಿದ ಮೊಟ್ಟ ಮೊದಲ ಪ್ರಧಾನಿಗೆ ಇರಬೇಕಾಗಿತ್ತು. ಇಂಡಿಯಾ ಎಂದಾಗಿದ್ದನ್ನು ಭಾರತವೆಂದು ಬದಲಿಸಿದ್ದರೆ ಅದಕ್ಕೆ ತಕರಾರು ತೆಗೆಯುವವರು ಆಗ ಯಾರೂ ಇರಲಿಲ್ಲ. ಇವೆಲ್ಲಾ ಹಿಂದಿನ ಇತಿಹಾಸ. ಅದನ್ನೇ ರಬ್ಬರ್‌ನಂತೆ ಜಗ್ಗುತ್ತಿದ್ದರೆ ಏನು ಪ್ರಯೋಜನ? ದೇಶದ ಹೆಸರು ಉಲ್ಲೇಖವಾಗಿದ್ದುದು India that is Bharath ಎಂದು. ಅಂದರೆ ಇಂಡಿಯಾವನ್ನು ಭಾರತವೆಂಬ ಎಂಬ ಹೆಸರಿನಿಂದ ಗುರುತಿಸಬೇಕು ಎಂಬ ಆಶಯವನ್ನು ಸಂವಿಧಾನ ರಚನೆಯ ಸಮಿತಿಯಲ್ಲಿದ್ದ ಹಲವು ಗಣ್ಯರು ಆಗ್ರಹಿಸಿದ್ದರೂ ನೆಹರೂ ಮಾತ್ರ ಅದಕ್ಕೆ ಕಿವಿಗೊಡಲೇ ಇಲ್ಲ. ಬ್ರಿಟಿಷರ ಆಡಳಿತದಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಕ್ಷತೆಯ ಸಂವಿಧಾನ ರಚನಾ ಸಭೆಯಲ್ಲಿ ಈ ವಿಷಯ ತೀವ್ರವಾಗಿ ಚರ್ಚೆಯಾಯಿತು. ಭಾರತ ಎಂಬುದು ದೇಶದ ಪ್ರಾಥಮಿಕ ಹೆಸರಾಗಿದೆ. ಆದರೆ ಇಂಡಿಯಾ ಎಂಬುದು ಆಂಗ್ಲ ಭಾಷೆಯ ಹೆಸರಾಗಿದೆ ಎಂದು ಆಕ್ಷೇಪಗಳು ವ್ಯಕ್ತವಾಗಿದ್ದವು. ಈ ದೇಶದ ಹೆಸರು ಭಾರತ ಎಂದೇ ಇರಬೇಕೆಂದು ಡಾ. ಬಿ.ಆರ್. ಅಂಬೇಡ್ಕರ್ ಸಹ ಬಯಸಿದರು.
ಈಗ ಬ್ರಿಟಿಷರ ಆಡಳಿತ ಇಲ್ಲಿಲ್ಲ. ನೆಹರೂ ಕೂಡ ಈಗಿಲ್ಲ. ಸಿಲೋನ್ ನಂತಹ ಪುಟ್ಟ ದೇಶ ಶ್ರೀಲಂಕಾ ಆಗಿ ಸ್ವಾಭಿಮಾನದಿಂದ ತಲೆಯೆತ್ತಬಹುದಾದರೆ, ಬರ್ಮಾ ಮ್ಯಾನ್ಮಾರ್ ಆಗಿ ಹೆಮ್ಮೆ ಪಡಬಹುದಾದರೆ ಭಾರತವೆಂಬ ಬಹುದೊಡ್ಡ ದೇಶ ಇನ್ನೂ ಜಾಗತಿಕ ನಕ್ಷೆಯಲ್ಲಿ ಇಂಡಿಯಾ ಎಂದು ಪರಕೀಯರು ತಿರುಚಿದ ಅದೇ ವಿಕೃತ ಹೆಸರಿನಲ್ಲಿ ಉಳಿಯಬೇಕೆ? ಇಂಡಿಯಾ ಎಂಬ ಹೆಸರನ್ನು ಭಾರತ ಎಂದು ಬದಲಿಸಲು ಆಡಳಿತ ಸೂತ್ರ ಹಿಡಿದವರು ಯಾವುದೇ ಯುದ್ಧ ಮಾಡಬೇಕಾಗಿಲ್ಲ. ಗನ್ ಹಿಡಿಯಬೇಕಾಗಿಲ್ಲ. ಸಂಸತ್ತಿನಲ್ಲಿ ಈ ಬಗ್ಗೆ ಒಂದು ಮಸೂದೆಯನ್ನು ಮಂಡಿಸಿ, ಸಂವಿಧಾನಕ್ಕೆ ತಿದ್ದುಪಡಿ ತಂದು, ಅದನ್ನು ಸರ್ವಾನುಮತದಿಂದ ಅಂಗೀಕರಿಸಬೇಕು, ಅಷ್ಟೆ.
ಯಾವುದಾದರೂ ದೇಶವನ್ನು ಇನ್ನೊಂದು ದೇಶ ಆಕ್ರಮಿಸಿಕೊಂಡಾಗ ಮೊದಲು ಹೆಸರು ಬದಲಾವಣೆ ಮಾಡುವುದು ಸಾಮಾನ್ಯವಂತೆ. ಹೌದು ಯಾವುದೇ ನಾಮಪದ ಇಂಗ್ಲೀಷ್ ನಲ್ಲಿ ಒಂದು ಹೆಸರು, ಬೇರೆ ಭಾಷೆಯಲ್ಲಿ ಇನ್ನೊಂದು ಹೆಸರು ಇರುವುದು ಸಾಧ್ಯವಾ? ಇಂಡಿಯಾ ಎನ್ನುವುದು ಬ್ರಿಟಿಷರ ಗುಲಾಮಗಿರಿಯ ಸಂಕೇತ. ಸಂವಿಧಾನದ ೧ನೇ ವಿಧಿಯನ್ನು ತಿದ್ದುಪಡಿ ಮಾಡಲು ಆಗ್ರಹಿಸೋಣ. ಏಕೆಂದರೆ ೧ನೇ ವಿಧಿಯು ದೇಶದ ಹೆಸರು ಮತ್ತು ಅದರ ಪ್ರದೇಶಗಳನ್ನು ವ್ಯಾಖ್ಯಾನಿಸುತ್ತದೆ. ಇಂಡಿಯಾ ಎನ್ನುವುದು ಬ್ರಿಟಿಷರು ಇಟ್ಟ ಗುಲಾಮಗಿರಿಯ ಸಂಕೇತವಾಗಿದೆ. ಹಾಗಾಗಿ ಭಾರತ್ ಅಥವಾ ಹಿಂದುಸ್ತಾನ ಎಂಬುದು ನಮ್ಮ ಹೆಮ್ಮೆಯ ದೇಶದ ಹೆಸರಾಗಿದೆ. ಹೀಗಾಗಿ ಭಾರತ ಹೆಸರನ್ನು ಅಧಿಕೃತಗೊಳಿಸುವಂತೆ ಸರ್ಕಾರಕ್ಕೆ ನಾವೆಲ್ಲರು ಮನವಿ ಮಾಡೋಣ.
ಇಂಡಿಯಾವನ್ನು ಭಾರತ್ ಎಂದು ಮರುನಾಮಕರಣ: ಪ್ರಧಾನಿ ಮೋದಿ ನಿರ್ಣಯ ಮಂಡನೆ ಸಾಧ್ಯತೆ
ಪ್ರಧಾನಿ ನರೇಂದ್ರ ಮೋದಿ ಅವರು INDIA ವನ್ನು ‘ಭಾರತ್’ ಎಂದು ಮರುನಾಮಕರಣ ಮಾಡುವ ನಿರ್ಣಯ ಮಂಡಿಸುವ ಸಾಧ್ಯತೆಯಿದೆ. ಸೆಪ್ಟೆಂಬರ್ 18 ರಿಂದ 22 ರವರೆಗೆ ಐದು ದಿನಗಳ ವಿಶೇಷ ಸಂಸತ್ ಅಧಿವೇಶನ ನಡೆಯಲಿದೆ. ಈ ಅವಧಿಯಲ್ಲಿ ಹೊಸ ಸಂಸತ್ ಭವನದಲ್ಲಿ ನಿರ್ಣಯವನ್ನು ಪ್ರಧಾನಿ ಮಂಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿಶೇಷ ಸಂಸತ್ ಅಧಿವೇಶನದಲ್ಲಿ ಪ್ರಶ್ನೋತ್ತರ ಸಮಯ, ಶೂನ್ಯ ಸಮಯ ಮತ್ತು ಖಾಸಗಿ ಸದಸ್ಯರ ವ್ಯವಹಾರ ಇರುವುದಿಲ್ಲ. ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ನಡೆಯುವ ಅಧಿವೇಶನಗಳಿಗೆ ಇದನ್ನು ನಿರ್ವಹಿಸಲಾಗುತ್ತದೆ.