ಹುಬ್ಬಳ್ಳಿ: ಬಿಜೆಪಿ ಒಡೆದು ಮೂರಾಬಟ್ಟೆಯಾಗಿದೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ತಮ್ಮ ಪಕ್ಷದ ತಪ್ಪುಗಳನ್ನು ಹೊರಹಾಕಿದ್ದಾರೆ. ಬಿಜೆಪಿ ತಪ್ಪು ಹೊರ ಹಾಕಿದ್ದಕ್ಕೆ ಕಾಂಗ್ರೆಸ್ ಮುಖವಾಣಿ ಆಗ್ತಾರಾ? ಎಂದು ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಪ್ರಶ್ನಿಸಿದರು.
ಶನಿವಾರ ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿನ ರಿಯಾಲಿಟಿ ಬಗ್ಗೆ ಯತ್ನಾಳ್ ಅವರು ಮಾತಾಡಿದ್ದಾರೆ. ಅವರು ಪಕ್ಷದ ಸಿದ್ಧಾಂತ ಇಟ್ಟುಕೊಂಡವರು. ಅವರೇ ತಮ್ಮ ಪಕ್ಷದ ಬಗ್ಗೆ ಮಾತನಾಡಿದ್ದಾರೆ ಅಂದ್ರೆ ನಮ್ಮ ಪಕ್ಷದವರು ಹೇಗೆ ಆಗುತ್ತಾರೆ ಎಂದು ಪ್ರಶ್ನಿಸಿದರು.
ಭ್ರಷ್ಟಾಚಾರ ನೋಡಿ ನೋಡಿ ನನಗೂ ಇದೆಲ್ಲಾ ಏನಪ್ಪಾ ಅಂತ ಅನ್ನಿಸಿಬಿಟ್ಟಿದೆ. ಹೀಗಾಗಿ ಹೊಸ ಹೊಸ ಯೋಜನೆ ತರಬೇಕಿದೆ. ವ್ಯವಸ್ಥೆ ಕೆಟ್ಟಿದ್ದು, ಸುಧಾರಣೆ ಮಾಡಬೇಕಿದೆ. ವ್ಯವಸ್ಥೆ ಹಾಗೆಯೇ ಉಳಿದುಕೊಂಡರೆ ಟೀಕೆಗಳು ಬರುತ್ತವೆ. ಹಾಗಾಗಿ ವ್ಯವಸ್ಥೆ ಸುಧಾರಣೆ ಮಾಡುವ ಕೆಲಸಕ್ಕೆ ನಾನು ಕೈಹಾಕಿರುವೆ. ಅದನ್ನು ಸುಧಾರಣೆ ಕೂಡ ಮಾಡುವೆ. ಈಗಾಗಲೇ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ ಬಂದ ಇಬ್ಬರು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ್ದೇವೆ ಎಂದು ಹೇಳಿದರು.
ಹಾಸನದಲ್ಲಿ ನಡೆಸಲು ಇಚ್ಛಿಸಿರುವ ಸ್ವಾಭಿಮಾನ ಸಮಾವೇಶದ ಬಗ್ಗೆ ಪ್ರತಿಕ್ರಿಯಿಸಿ, ಮಾಡಿದ್ರೆ ತಪ್ಪೇನು? ಕೆಲವರು ಅವರ ಅಭಿಪ್ರಾಯ ಹೇಳಿದ್ದಾರೆ. ಮಾಡಿದ್ರೆ ತಪ್ಪಿಲ್ಲ ಎಂದರು.
ಸಂಪುಟ ಪುನರ್ ರಚನೆ ಮಾಹಿತಿ ಇಲ್ಲ. ಸಚಿವರ ಮೌಲ್ಯಮಾಪನ ನಡೆಯಬೇಕು ಎಂದ ತಿಮ್ಮಾಪುರ, ಸಿದ್ದರಾಮಯ್ಯರನ್ನ ಕೆಳಗಿಳಿಸೋ ಶಕ್ತಿ ಸಿಎಲ್‌ಪಿ ಹಾಗೂ ಎಐಸಿಸಿಗೆ ಮಾತ್ರ ಇದೆ. ಸಿಎಲ್ಪಿಯಿಂದ ಸಿದ್ದರಾಮಯ್ಯ ಆಯ್ಕೆಯಾಗಿದ್ದಾರೆ. ಅಲ್ಲಿಂದ ಯಾವ ಮಾಹಿತಿ ಬಂದಿಲ್ಲ ಎಂದು ತಿಳಿಸಿದರು.