ಮನೆ ಅಪರಾಧ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 2 ಕೋಟಿ ರೂ. ವಶ: ಯುವಕನ ಬಂಧನ

ದಾಖಲೆ ಇಲ್ಲದೇ ಸಾಗಿಸುತ್ತಿದ್ದ 2 ಕೋಟಿ ರೂ. ವಶ: ಯುವಕನ ಬಂಧನ

0

ಕಾರವಾರ(Karavara): ದಾಖಲೆಗಳಿಲ್ಲದೇ ₹2 ಕೋಟಿ ನಗದು ಸಾಗಿಸುತ್ತಿದ್ದ ಯುವಕನನ್ನು ಶಿರವಾಡ ರೈಲು ನಿಲ್ದಾಣದಲ್ಲಿ ಬುಧವಾರ ರಾತ್ರಿ ಪೊಲೀಸರು ಬಂಧಿಸಿದ್ದು, ನಗದನ್ನು ವಶಪಡಿಸಿಕೊಂಡಿದ್ದಾರೆ.

ರಾಜಸ್ಥಾನದ ಸೂಂತ್ರಿಯ ಚೇನ್ ಸಿಂಗ್ (22) ಬಂಧಿತ ಆರೋಪಿ.

ಆರೋಪಿ ಟಿಕೆಟ್ ತೆಗೆದುಕೊಳ್ಳದೇ ಪ್ರಯಾಣಿಸುತ್ತಿದ್ದುದು ಹಣ ಸಾಗಣೆಯ ಪ್ರಕರಣ ಬೆಳಕಿಗೆ ಬರಲು ಕಾರಣವಾಗಿದೆ.  

ಆತ ಮುಂಬೈನಿಂದ (ಸಿ.ಎಸ್.ಎಂ.ಟಿ) ಮಂಗಳೂರಿಗೆ (ಜಂಕ್ಷನ್) ಸಾಗುತ್ತಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ. ರೈಲಿನ ಟಿ.ಟಿ ಪ್ರಯಾಣಿಕರ ಬಳಿ ಪರಿಶೀಲಿಸುತ್ತ ಬಂದಾಗ ಆರೋಪಿಯ ವರ್ತನೆ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಆತನನ್ನು ಪರಿಶೀಲಿಸಿದಾಗ ಟಿಕೆಟ್ ಇಲ್ಲದೇ ಪ್ರಯಾಣಿಸುತ್ತಿರುವುದು ಗೊತ್ತಾಯಿತು. ಯುವಕನ ಬಳಿಯಿದ್ದ ಬಾಕ್ಸ್ ಬಗ್ಗೆ ವಿಚಾರಿಸಿದಾಗ ಸರಿಯಾಗಿ ಉತ್ತರಿಸಲಿಲ್ಲ. ಇದರಿಂದ ಅನುಮಾನಗೊಂಡ ಟಿಕೆಟ್ ಪರಿಶೀಲನಾ ಸಿಬ್ಬಂದಿ, ಕೊಂಕಣ ರೈಲ್ವೆಯ ಮುಖ್ಯ ಭದ್ರತಾ ಇನ್‌ಸ್ಪೆಕ್ಟರ್ ಎಚ್.ಕೆ.ಪ್ರಸನ್ನ ಅವರಿಗೆ ಮಾಹಿತಿ ನೀಡಿದರು.

ಇನ್ಸ್ ಪೆಕ್ಟರ್ ಬಾಕ್ಸ್ ತೆರೆದು ನೋಡಿದಾಗ ನೋಟುಗಳು ಕಂಡುಬಂದವು.ಆರೋಪಿ ಮತ್ತು ಬಾಕ್ಸ್ ವಶಕ್ಕೆ ಪಡೆದ ರೈಲ್ವೆ ಪೊಲೀಸರು, ಟಿಕೆಟ್ ರಹಿತ ಪ್ರಯಾಣಕ್ಕಾಗಿ ₹1,060 ದಂಡ ವಿಧಿಸಿದರು. ಬಳಿಕ ಆತನನ್ನು, ಹಣವನ್ನು ಕಾರವಾರ ಗ್ರಾಮೀಣ ಠಾಣೆ ಪೊಲೀಸರಿಗೆ ಹಸ್ತಾಂತರಿಸಿದರು.

ನೋಟಿನ ಕಂತೆಗಳನ್ನು ಎಣಿಸಿದಾಗ ₹2 ಕೋಟಿ ಪತ್ತೆಯಾಗಿದೆ. ತನಿಖೆಯ ವೇಳೆ ಆತ, ತಾನು ಮುಂಬೈನ ಭರತ್ ಭಾಯ್ ಅಲಿಯಾಸ್ ಪಿಂಟು ಎಂಬುವವರ ಜೊತೆ ಕೆಲಸ ಮಾಡುತ್ತಿದ್ದು, ತಿಂಗಳಿಗೆ ₹ 15 ಸಾವಿರ ಸಿಗುತ್ತದೆ. ತಾನು ಸಾಗಿಸುವ ಹಣವನ್ನು ಮಂಗಳೂರಿನ ರಾಜು ಎಂಬುವವರಿಗೆ ಕೊಡಬೇಕಿತ್ತು ಎಂದು ತಿಳಿಸಿದ್ದಾಗಿ ರೈಲ್ವೆ ರಕ್ಷಣಾ ಪಡೆಯ ಇನ್‌ಸ್ಪೆಕ್ಟರ್ ವಿಪಿನ್ ಸಿಂಗ್ ರಾಣಾ ತಿಳಿಸಿದ್ದಾರೆ.

ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.