ನವದೆಹಲಿ/ತಿರುವನಂತಪುರಂ : ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ ವಿಷಯ ದೀರ್ಘ ಸಮಯದ ಬಳಿಕ ಮತ್ತೆ ಮುನ್ನೆಲೆಗೆ ಬಂದಿದ್ದು, ಇದು ಕೇರಳದಲ್ಲಿ ರಾಜಕೀಯ ಚರ್ಚೆಗೆ ನಾಂದಿ ಹಾಡಿದೆ. ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಸೆಪ್ಟೆಂಬರ್ 2018 ರ ತೀರ್ಪು ಮರುಪರಿಶೀಲನಾ ಅರ್ಜಿಯನ್ನ ಸುಪ್ರೀಂ ಕೋರ್ಟ್ ಅಂಗೀಕರಿಸಿದೆ. 9 ನ್ಯಾಯಮೂರ್ತಿಗಳ ಪ್ರತ್ಯೇಕ ಪೀಠವು ಏಪ್ರಿಲ್ 7 ರಿಂದ ಅರ್ಜಿ ವಿಚಾರಣೆ ನಡೆಸಲಿದ್ದು, ಏಪ್ರಿಲ್ 22 ರಂದು ಮುಕ್ತಾಯಗೊಳಿಸಲು ಉದ್ದೇಶಿಸಲಾಗಿದೆ.
ಸುಪ್ರೀಂ ಕೋರ್ಟ್ ಸಿಜೆಐ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಲ್ಯ ಬಾಗ್ಚಿ ಮತ್ತು ವಿಪುಲ್ ಎಂ ಪಾಂಚೋಲಿ ಅವರಿದ್ದ ನ್ಯಾಯಪೀಠವು ಈ ತೀರ್ಮಾನ ಪ್ರಕಟಿಸಿದೆ. 9 ನ್ಯಾಯಾಧೀಶರ ಪೀಠ ಸಂಯೋಜನೆಯನ್ನು ಸಿಜೆಐ ಆಡಳಿತಾತ್ಮಕ ಆದೇಶದ ಮೂಲಕ ಪ್ರತ್ಯೇಕವಾಗಿ ಘೋಷಿಸಲಾಗುತ್ತದೆ. ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶ ಕಲ್ಪಿಸುವ ತೀರ್ಪನ್ನು ಬೆಂಬಲಿಸುವ ಪಕ್ಷಗಳು ಏಪ್ರಿಲ್ 7 ರಿಂದ ಏಪ್ರಿಲ್ 9 ರ ವರೆಗೆ ಹಾಗೂ ವಿರೋಧಿಸುವ ಪಕ್ಷಗಳು ಏಪ್ರಿಲ್ 14 ರಿಂದ ಏಪ್ರಿಲ್ 16 ರ ವರೆಗೆ ವಾದ ಮಂಡಿಸಲು ದಿನಾಂಕ ನಿಗದಿಪಡಿಸಲಾಗಿದೆ. ಏಪ್ರಿಲ್ 21 ರಂದು ಮರುಪ್ರಶ್ನೆ ಸಲ್ಲಿಕೆಗಳು ನಡೆಯಲಿದ್ದು, ಏಪ್ರಿಲ್ 22 ರಂದು ವಿಚಾರಣೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ.
2018 ಸೆಪ್ಟೆಂಬರ್ ನಲ್ಲಿ ಶಬರಿಮಲೆ ಪ್ರವೇಶಕ್ಕೆ ಸುಪ್ರೀಂನ ಐದು ನ್ಯಾಯಾಧೀಶರ ಪೀಠವು ತೀರ್ಪು ನೀಡಿತ್ತು. ಆದರೆ ಇವರಲ್ಲಿ ಇಂದೂ ಮಲ್ಹೋತ್ರಾ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಅಕ್ಟೋಬರ್ ನಲ್ಲಿ ಮಹಿಳೆಯರ ಪ್ರವೇಶ ವಿರೋಧಿಸಿ ಕೆಲ ಹಿಂದೂ ಪರ ಸಂಘಟನೆಗಳು ಭಾರೀ ಪ್ರತಿಭಟನೆ ನಡೆಸಿದ್ದವು. ಹೀಗಾಗಿ ತೀರ್ಪು ಮರುಪರಿಶೀಲಿಸುವಂತೆ ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ಕೋರ್ಟ್ ಕೈಗೆತ್ತಿಕೊಂಡಿದೆ.
ಇದರೊಂದಿಗೆ ದರ್ಗಾ ಅಥವಾ ಮಸೀದಿಗಳಿಗೆ ಮುಸ್ಲಿಂ ಮಹಿಳೆಯರ ಪ್ರವೇಶ, ಪಾರ್ಸಿ ಅಲ್ಲದವರನ್ನ ವಿವಾಹವಾಗಿದ್ದರೆ ಅಗ್ನಿ ದೇವಾಲಯಗಳಿಗೆ ಪಾರ್ಸಿ ಮಹಿಳೆಯರ ಪ್ರವೇಶ, ದಾವೂದಿ ಬೊಹ್ರಾ ಸಮುದಾಯದವರಲ್ಲಿ ಬಹಿಷ್ಕಾರ ಮತ್ತು ಸ್ತ್ರೀ ಜನನಾಂಗ ಛೇದನದ ಪದ್ಧತಿಗಳ ಸಿಂಧುತ್ವಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಪಟ್ಟಿ ಮಾಡಲಾಗಿದೆ. ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಕೇರಳ ಸರ್ಕಾರ ಬೆಂಬಲ ನೀಡಿದೆ. ಆದರೆ ನಿರ್ಬಂಧವನ್ನು ಕೇಂದ್ರ ಸರ್ಕಾರ ಬೆಂಬಲಿಸಿದೆ.















