ಹಾಸನ: ನನ್ನಂತವರನ್ನ ಬಹಳ ಕಾಲ ಸುಮ್ಮನೇ ಕೂರಿಸಲು ಆಗಲ್ಲ. ನಾನೀಗ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಬಿಜೆಪಿ ಹಿರಿಯ ನಾಯಕ ಸಿ.ಟಿ. ರವಿ ಹೇಳಿದ್ದಾರೆ.
ಈ ನಡುವೆ ಹಾಸನದ ಹಾಸನಾಂಬ ದೇವಸ್ಥಾನಕ್ಕೆ ಭೇಟಿ ನೀಡಿ ಹಾಸನಾಂಬೆ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧರ್ಮದ ವಿರುದ್ಧ ಧರ್ಮ, ಅಸತ್ಯದ ವಿರುದ್ಧ ಸತ್ಯಕ್ಕೆ ಜಯ ಸಿಗಬೇಕು ಎಂದರು.
ಪಕ್ಷ ವಿಸ್ತರಿಸುವ ಕೆಲಸ ಆಗಬೇಕು. ಸ್ಪರ್ಧೆಯೇ ಇಲ್ಲದಿದ್ದಾಗ ರೇಸ್ನ ಪ್ರಶ್ನೆಯೇ ಉದ್ಭವಿಸಲ್ಲ. ರಾಮ, ಪಾಂಡವರಿಗೂ ವನವಾಸ ತಪ್ಪಿಲ್ಲ ಇನ್ನೂ ನಾನು ಯಾವ ಲೆಕ್ಕ ಎಂದರು.
ಪಕ್ಷ ಜವಾಬ್ದಾರಿ ನೀಡಿದಾಗ ಮಾತಾಡಿದರೆ ತಪ್ಪು ಸಂದೇಶ ಹೋಗುತ್ತದೆ. ಪಕ್ಷ ಗಟ್ಟಿಯಾಗಬೇಕೆಂದು ಬಯಸುತ್ತೇನೆ, ಯಾರ ಮೂಲಕ ಅಂತಲ್ಲ. ಕಾಲಕಾಲಕ್ಕೆ ಅನುಭವ ಇದ್ದವರು, ಇಲ್ಲದಿದ್ದವರಿಗೂ ಸ್ಥಾನಮಾನ ನೀಡಿದೆ. ಪಕ್ಷದ ವಿಚಾರದ ಬಗ್ಗೆ ಚರ್ಚೆ ಮಾಡಲು ನಾನು ಬಯಸುವುದಿಲ್ಲ ಎಂದರು. ಎರಡು ದಿನದ ಹಿಂದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ನನಗೆ ಕರೆ ಮಾಡಿದ್ದರು. ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನೇಮಕಾತಿ ಬಗ್ಗೆ ನನ್ನ ಜೊತೆ ಮಾತಾಡಿಲ್ಲ ಎಂದು ಸಿಟಿ ರವಿ ಹೇಳಿದರು.
ಬಿಜೆಪಿ ಪಕ್ಷದ ನಾಯಕರು ಕಾಂಗ್ರೆಸ್ನ ಆಪರೇಷನ್ ಹಸ್ತಕ್ಕೆ ಒಳಗಾಗುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಟಿ ರವಿ, ಕಾಂಗ್ರೇಸ್ನವರು ಈಗಿರುವರನ್ನೇ ಸಮಾಧಾನ ಪಡಿಸಲು ಆಗುತ್ತಿಲ್ಲ. ಕರೆದುಕೊಂಡು ಹೋದವರಿಗೆ ಏನ್ ಕೊಡುತ್ತಾರೆ ಎಂದು ಪ್ರಶ್ನಿಸಿದರು. ಅಲ್ಲದೆ, ಯಾವಾಗಲೂ ಸರ್ಕಾರ ಬಂದಾಗ ಇನ್ ಕಮಿಂಗ್ ನಂತರ ಔಟ್ ಗೋಯಿಂಗ್ ಇರುತ್ತದೆ ಎಂದರು.