ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ 11 ಗಂಟೆಗೆ ನವದೆಹಲಿಯ ದ್ವಾರಕಾದಲ್ಲಿ ಇಂಡಿಯಾ ಇಂಟರ್ನ್ಯಾಷನಲ್ ಕನ್ವೆನ್ಷನ್ ಮತ್ತು ಎಕ್ಸ್ಪೋ ಸೆಂಟರ್ ‘ಯಶೋಭೂಮಿ’ಯ (ಐಐಸಿಸಿ) ಮೊದಲ ಭಾಗ ಲೋಕಾರ್ಪಣೆ ಮಾಡಲಿದ್ದಾರೆ. ಈ ಬೃಹತ್ ಸಮಾವೇಶ ಕೇಂದ್ರ ಇತ್ತೀಚೆಗೆ ಜಿ20 ಸಮಾವೇಶ ನಡೆದ ಭಾರತ್ ಮಂಟಪಕ್ಕಿಂತಲೂ ವಿಸ್ತಾರವಾಗಿದೆ. 1.07 ಲಕ್ಷ ಚದರ ಮೀಟರ್ಗಿಂತಲೂ ಹೆಚ್ಚು ಪ್ರದೇಶದಲ್ಲಿ ನಿರ್ಮಿಸಲಾದ ಪ್ರದರ್ಶನ ಸಭಾಂಗಣವನ್ನು ಪ್ರದರ್ಶನ, ವ್ಯಾಪಾರ ಮೇಳ ಮತ್ತು ವ್ಯಾಪಾರ ಕಾರ್ಯಕ್ರಮಗಳನ್ನು ಆಯೋಜಿಸಲು ಬಳಸಲಾಗುತ್ತದೆ.
ಪ್ರಧಾನಿ ಮೋದಿ ಇದೇ ಸಂದರ್ಭದಲ್ಲಿ, ದ್ವಾರಕಾ ಸೆಕ್ಟರ್-21ರಿಂದ ಯಶೋಭೂಮಿ ದ್ವಾರಕಾ ಸೆಕ್ಟರ್-25 ರವರೆಗೆ ಏರ್ಪೋರ್ಟ್ ಮೆಟ್ರೋ ಎಕ್ಸ್ಪ್ರೆಸ್ ಲೈನ್ ವಿಸ್ತರಣೆಯನ್ನೂ ಉದ್ಘಾಟಿಸಲಿದ್ದಾರೆ. ಹೊಸ ಯಶೋಭೂಮಿ ದ್ವಾರಕಾ ಸೆಕ್ಟರ್-25ರ ಒಂದು ಭೂಗತ ನಿಲ್ದಾಣವಾಗಿದ್ದು, ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 3 ಮತ್ತು ನವದೆಹಲಿ ರೈಲು ನಿಲ್ದಾಣದಂತಹ ಪ್ರಮುಖ ಸ್ಥಳಗಳಿಗೆ ನೇರವಾಗಿ ಸಂಪರ್ಕ ಕಲ್ಪಿಸುತ್ತದೆ.
ಅಧಿಕಾರಿಗಳ ಪ್ರಕಾರ, ದೇಶದಲ್ಲಿ ಮಹತ್ವದ ಸಭೆ, ಸಮ್ಮೇಳನ ಮತ್ತು ಪ್ರದರ್ಶನಗಳನ್ನು ಆಯೋಜಿಸಲು ವಿಶ್ವದರ್ಜೆಯ ಮೂಲಸೌಕರ್ಯವನ್ನು ಸೃಷ್ಟಿಸುವುದು ಪ್ರಧಾನಿ ಮೋದಿಯವರ ದೂರದೃಷ್ಟಿಯಾಗಿದೆ. ಈ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ಇಂದು ಬೆಳಗ್ಗೆ 11ರಿಂದ ನಿಗದಿಪಡಿಸಲಾಗಿದೆ. ಪ್ರಧಾನಿ ಮೋದಿ ಮಧ್ಯಾಹ್ನ 12:30ರ ಸುಮಾರಿಗೆ ಜನರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಕನ್ವೆನ್ಷನ್ ಸೆಂಟರ್ ಹೇಗಿದೆ?: ವಿಶಾಲ ಪ್ರದೇಶದಲ್ಲಿ ನಿರ್ಮಿಸಲಾದ ಸೆಂಟರ್, ಮುಖ್ಯ ಸಭಾಂಗಣ, ಗ್ರ್ಯಾಂಡ್ ಬಾಲ್ ರೂಂ ಮತ್ತು 13 ಸಭೆ ಸಭಾಂಗಣಗಳು ಸೇರಿ ಒಟ್ಟು 15 ಕನ್ವೆನ್ಷನ್ ಹಾಲ್ಗಳನ್ನು ಹೊಂದಿದೆ. ಇದರ ಒಟ್ಟು ಸಾಮರ್ಥ್ಯ 11,000 ಪ್ರತಿನಿಧಿಗಳು. ದೇಶದ ಅತಿ ದೊಡ್ಡ ಎಲ್ಇಡಿ ಪರದೆಯನ್ನು ಅಳವಡಿಸಲಾಗಿದೆ. ಮುಖ್ಯ ಸಭಾಂಗಣವು ಸುಮಾರು 6,000 ಅತಿಥಿಗಳ ಆಸನ ಸಾಮರ್ಥ್ಯ ಹೊಂದಿದೆ. ಮರದ ನೆಲಹಾಸು ಮತ್ತು ಸ್ವಯಂಚಾಲಿತ ಕುರ್ಚಿಗಳನ್ನು ಅಳವಡಿಸಲಾಗಿದೆ. ಇದರೊಂದಿಗೆ ಗೋಡೆಗಳ ಮೇಲೆ ಧ್ವನಿ ಫಲಕಗಳನ್ನು ಅಳವಡಿಸಲಾಗಿದ್ದು, ಇದು ಪ್ರವಾಸಿಗರಿಗೆ ವಿಶ್ವದರ್ಜೆಯ ಸೌಲಭ್ಯದ ಅನುಭವ ನೀಡುತ್ತದೆ.
ವೈಶಿಷ್ಟ್ಯಗಳು: ಟೆರಾಝೋ ಮಹಡಿಗಳು, ಹಿತ್ತಾಳೆಯ ಕೆತ್ತನೆಗಳು ಮತ್ತು ರಂಗೋಲಿ ಮಾದರಿಗಳ ರೂಪದಲ್ಲಿ ಭಾರತೀಯ ಸಂಸ್ಕೃತಿಯಿಂದ ಪ್ರೇರಿತವಾದ ವಸ್ತುಗಳನ್ನು ಒಳಗೊಂಡಿದೆ. 100% ತ್ಯಾಜ್ಯ ನೀರಿನ ಮರುಬಳಕೆ, ನೀರು ಕೊಯ್ಲು, ಸೌರ ಫಲಕಗಳನ್ನು ಹೊಂದಿದೆ.
ಮೆಟ್ರೋ ವೇಗ ಹೆಚ್ಚಳ: ದ್ವಾರಕಾ ಸೆಕ್ಟರ್ 25ರಲ್ಲಿ ಹೊಸ ಮೆಟ್ರೋ ನಿಲ್ದಾಣದ ಉದ್ಘಾಟನೆಯೊಂದಿಗೆ, ಇದು ದೆಹಲಿ ಏರ್ಪೋರ್ಟ್ ಮೆಟ್ರೋ ಎಕ್ಸ್ಪ್ರೆಸ್ ಲೈನ್ಗೂ ಸಂಪರ್ಕ ಒದಗಿಸುತ್ತದೆ. ದೆಹಲಿ ಮೆಟ್ರೋ ಏರ್ಪೋರ್ಟ್ ಎಕ್ಸ್ಪ್ರೆಸ್ ಲೈನ್ನಲ್ಲಿ ಮೆಟ್ರೋ ರೈಲುಗಳ ಕಾರ್ಯಾಚರಣೆಯ ವೇಗವನ್ನು ಗಂಟೆಗೆ 90 ಕಿ.ಮೀ/ಗಂ – 120 ಕಿಮೀ / ಗಂಟೆಗೆ ಹೆಚ್ಚಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ. ನವ ದೆಹಲಿಯಿಂದ ಯಶೋಭೂಮಿ ದ್ವಾರಕಾ ಸೆಕ್ಟರ್ 25 ಗೆ ಪ್ರಯಾಣವು ಸರಿಸುಮಾರು 21 ನಿಮಿಷ ತೆಗೆದುಕೊಳ್ಳುತ್ತದೆ.
ಮಧ್ಯಾಹ್ನ 3 ರಿಂದ ಸೇವೆ ಪ್ರಾರಂಭ: ಏರ್ಪೋರ್ಟ್ ಎಕ್ಸ್ಪ್ರೆಸ್ ಲೈನ್ನಲ್ಲಿ ದ್ವಾರಕಾ ಸೆಕ್ಟರ್ 21 ರಿಂದ ಯಶೋಭೂಮಿ ದ್ವಾರಕಾ ಸೆಕ್ಟರ್ 25 ವರೆಗಿನ ವಿಸ್ತರಣೆಯಲ್ಲಿ ಮೆಟ್ರೋ ಸೇವೆಗಳು ಇಂದು ಮಧ್ಯಾಹ್ನ 3 ಗಂಟೆಯಿಂದ ದೊರೆಯುತ್ತದೆ.