ಉಡುಪಿ : ಉಡುಪಿಯ ಕೋಟೇಶ್ವರದಲ್ಲಿ ಅತೀ ದುಃಖದ ಘಟನೆ ನಡೆದಿದೆ. ಬಡತನ ಮತ್ತು ಸಾಲದ ಬಾಧೆಯಿಂದ ಮನನೊಂದು ತಂದೆ ಬಾವಿಗೆ ಹಾರಿದರೆ, ಅವರನ್ನು ರಕ್ಷಿಸಲು ಹೋದ ಮಗನೂ ನೀರಿನಲ್ಲಿ ಮುಳುಗಿ ದುರಂತ ಅಂತ್ಯ ಕಂಡಿದ್ದಾನೆ. ತಾಯಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಸೇರಿದ್ದಾರೆ.
ಮೃತರಾದವರು ಮಾಧವ ದೇವಾಡಿಗ (ತಂದೆ) ಮತ್ತು ಪ್ರಸಾದ ದೇವಾಡಿಗ (ಮಗ). ಮಾಧವ ದೇವಾಡಿಗ ಕೋಟೇಶ್ವರದ ಅಂಕದಕಟ್ಟೆ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಹಲವಾರು ಕಡೆಗಳಿಂದ ಸಾಲ ಮಾಡಿ ಬಡ್ಡಿ ಕಟ್ಟಲಾಗದೆ, ಬಡತನದಲ್ಲಿ ಸಂಕಷ್ಟಪಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಳಗಿನ ಜಾವ ಅವರು ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮಗ ಪ್ರಸಾದ ತಂದೆಯನ್ನು ರಕ್ಷಿಸಲು ಬಾವಿಗೆ ಹಾರಿದ್ದಾನೆ. ಇಬ್ಬರೂ ಮುಳುಗಿ ದುರಂತ ಅಂತ್ಯ ಕಂಡಿದ್ದಾರೆ.
ಪತಿ ಮತ್ತು ಮಗನನ್ನು ರಕ್ಷಿಸಲು ತಾರಾ ದೇವಾಡಿಗ ಕೂಡ ಬಾವಿಗೆ ಹಾರಿದರು. ಅಷ್ಟರಲ್ಲಿ ಪತಿ ಮತ್ತು ಮಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ಈಜು ಬರವುದರಿಂದ ಬಾವಿಯ ಪೈಪ್ ಹಿಡಿದು ಜೀವ ಉಳಿಸಿಕೊಂಡರು. ಸ್ಥಳೀಯರು ಕೂಡಲೇ ಅಗ್ನಿಶಾಮಕ ದಳಕ್ಕೆ ಕರೆಮಾಡಿ ಸಹಾಯ ಪಡೆದರು. ತಾರಾ ದೇವಾಡಿಗರಿಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಪ್ರಾಥಮಿಕ ವರದಿ ಇದೆ. ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ. ಖಾಸಗಿ ಆಸ್ಪತ್ರೆಯಲ್ಲಿ ತಾರಾ ದೇವಾಡಿಗ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣದ ತನಿಖೆ ಪ್ರಗತಿಯಲ್ಲಿದೆ.