ಯಾದಗಿರಿ: ಮೀಟರ್ ಬಡ್ಡಿ ಸಾಲ ಮರು ಪಾವತಿಸದಕ್ಕೆ ಮಾರಣಾಂತಿಕವಾಗಿ ಹಲ್ಲೆ ಮಾಡಿ, ಹತ್ಯೆಗೈದಿರುವ ಘಟನೆ ಯಾದಗಿರಿ ನಗರದ ಲಾಡೇಜಗಲ್ಲಿಯಲ್ಲಿ ನಡೆದಿದೆ. ಖಾಸೀಂ ಮೃತ ವ್ಯಕ್ತಿ. ಯಾಸೀನ್ ಹತ್ಯೆಗೈದ ಆರೋಪಿ.
ಮೃತ ಖಾಸೀಂ ಆರೋಪಿ ಯಾಸೀನ್ ಬಳಿ ಸಾಲ ಪಡೆದಿದ್ದನು. ಜನವರಿ 19ರಂದು 35 ಸಾವಿರ ರೂಪಾಯಿ ಸಾಲ ಮರು ಪಾವತಿಸಬೇಕಿತ್ತು.
ಆದರೆ, ಸಾಲ ಮರು ಪಾವತಿಸುವಲ್ಲಿ ತಡವಾಗಿದ್ದಕ್ಕೆ ಯಾಸೀನ್ ಬಾರುಕೋಲ್, ಮೊಣಕಾಲಿನಿಂದ ಒದ್ದು ಖಾಸಿಂ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದನು. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಖಾಸೀಂನನ್ನು ಯಾದಗಿರಿ ಜಿಲ್ಲಾಸ್ಪತ್ರೆಗೆ ಕುಟುಂಬಸ್ಥರು ದಾಖಲಿಸಿದ್ದರು. ವೈದ್ಯರ ಸಲಹೆ ಮೇರೆಗೆ ಕುಟುಂಬಸ್ಥರು ಖಾಸಿಂನನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಖಾಸೀಂ ಕಲಬುರಗಿ ಸರ್ಕಾರಿ ಆಸ್ಪತ್ರೆಯಲ್ಲಿ ಉಸಿರು ಚೆಲ್ಲಿದ್ದಾನೆ. ಯಾಸೀನ್ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














