ಮುಂಬೈ: ಭಾರತದ ಟಿ20 ಸೆಟಪ್ ನಲ್ಲಿ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರು ಶುಭಮನ್ ಗಿಲ್ ಅವರನ್ನು ಮೀರಿ ಹೋಗಿದ್ದಾರೆ ಎಂದು ಭಾರತದ ಮಾಜಿ ಬ್ಯಾಟರ್ ಆಕಾಶ್ ಚೋಪ್ರಾ ಹೇಳಿದ್ದಾರೆ.
ಇಂದೋರ್ ನ ಹೋಲ್ಕರ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು 6 ವಿಕೆಟ್‌ಗಳಿಂದ ಸೋಲಿಸಿದ ಭಾರತವು ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.
ಸಣ್ಣ ಗಾಯದಿಂದಾಗಿ ಸರಣಿಯ ಆರಂಭಿಕ ಪಂದ್ಯವನ್ನು ಕಳೆದುಕೊಂಡಿದ್ದ ಜೈಸ್ವಾಲ್ ಇಂದೋರ್ ನಲ್ಲಿ ಆಡಿದರು. ಜೈಸ್ವಾಲ್ ಮತ್ತು ಶಿವಂ ದುಬೆ ಅರ್ಧಶತಕದ ನೆರವಿನಿಂದ ಭಾರತವು 6 ವಿಕೆಟ್ ಹಾಗೂ 26 ಎಸೆತಗಳು ಬಾಕಿ ಇರುವಂತೆಯೇ ಗುರಿ ಬೆನ್ನಟ್ಟಿತು.
“ಯಶಸ್ವಿ ಅವರು ಬ್ಯಾಟಿಂಗ್ ಮಾಡುತ್ತಿರುವ ರೀತಿ ನೋಡಿದರೆ ನೀವು ಅವನನ್ನು ತಂಡಕ್ಕೆ ತೆಗೆದುಕೊಳ್ಳದಿದ್ದರೆ ಅದು ಅನ್ಯಾಯ ಎಂದು ನೀವು ಭಾವಿಸುತ್ತೀರಿ. ಅವರು ಇಲ್ಲಿ ರನ್ ಗಳನ್ನು ಮಾಡುತ್ತಿದ್ದಾರೆ. ಈಗ ಗಿಲ್ ನನ್ನು ಮೀರಿ ಹೋಗಿದ್ದಾರೆ. ಅವರನ್ನು ಮುಟ್ಟಲು ಸಾಧ್ಯವಾಗುವುದಿಲ್ಲ” ಎಂದು ಚೋಪ್ರಾ ಹೇಳಿದರು.
ಜೈಸ್ವಾಲ್ ಭಾರತದ ಅದ್ಭುತ ಆರಂಭ ಮಾಡಿದ್ದಾರೆ. ಅವರು ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ 45.14 ರ ಸರಾಸರಿಯಲ್ಲಿ 316 ರನ್ ಗಳಿಸಿದ್ದಾರೆ ಮತ್ತು 16 ಟಿ20 ಗಳಲ್ಲಿ 498 ರನ್ ಗಳಿಸಿದ್ದಾರೆ. ಸರಾಸರಿ 35.57 ಮತ್ತು 163.81 ರ ಸ್ಟ್ರೈಕ್ ರೇಟ್ ನಲ್ಲಿ ರನ್ ಗಳಿಸಿದ್ದಾರೆ.
ಜನವರಿ 17 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾರತ – ಆಫ್ಘಾನ್ ನಡುವಿನ ಮೂರನೇ ಟಿ20 ಪಂದ್ಯ ಆಡಲಿದೆ.