ಮನೆ ದೇವಸ್ಥಾನ ಯೋಗನರಸಿಂಹ, ತ್ರಿಕೂಟೇಶ್ವರ ನೆಲೆಸಿಹ ಗೊರೂರು

ಯೋಗನರಸಿಂಹ, ತ್ರಿಕೂಟೇಶ್ವರ ನೆಲೆಸಿಹ ಗೊರೂರು

ಹೊರಬಿತ್ತಿಗಳಲ್ಲಿ ಸೂಕ್ಷ್ಮ ಕೆತ್ತನೆ ಇಲ್ಲದಿದ್ದರೂ ಸುಂದರವಾದ ನರಸಿಂಹನ ವಿಗ್ರಹ ಇರುವ ಕ್ಷೇತ್ರ

0

ಪ್ರಕೃತಿ ಸೌಂದರ್ಯದ ಮಲೆನಾಡಿನ ಸೆರಗಲ್ಲೇ ಮುಂದುವರಿದಿರುವ ಹಾಸನ ಜಿಲ್ಲೆ ಶಿಲ್ಪ ಕಲೆಗಳ ತವರು. ಬೇಲೂರು, ಹಳೆಬೀಡು, ಶ್ರವಣಬೆಳಗೊಳದಂತಹ ಕಲಾ ಶ್ರೀಮಂತಿಕೆಯ ದೇಗುಲಗಳ ನೆಲೆವೀಡಾದ ಹಾಸನ ಜಿಲ್ಲೆ ಪವಿತ್ರ ಪುಣ್ಯಕ್ಷೇತ್ರಗಳ ತವರೂ ಹೌದು. ಇಂಥ ಪವಿತ್ರ ತಾಣಗಳಲ್ಲಿ ಗೊರೂರು ಸಹ ಒಂದು.

ಹಾಸನ ಜಿಲ್ಲೆ ಅರಕಲಗೂಡಿನಿಂದ 8 ಕಿ.ಮೀಟರ್ ದೂರದಲ್ಲಿ ಹೇಮಾವತಿ ದಂಡೆಯ ಮೇಲೆ ಇರುವ ಗೊರೂರು, ಯೋಗಾನರಸಿಂಹ ಸ್ವಾಮಿಯ ನೆಲೆವೀಡು. ಸಾಹಿತಿ ರಾಮಸ್ವಾಮಿ ಅಯ್ಯಂಗಾರ್ ಅವರ ಹುಟ್ಟೂರೂ ಆದ ಇದು ಸಾಹಿತ್ಯದ ಕರುನಾಡು.

ಈ ಊರಿಗೆ ಗೋಕರ್ಣ ಪುರಿ ಕ್ಷೇತ್ರ ಎಂಬ ಹೆಸರೂ ಇದೆ. ಗೋಕರ್ಣ ಋಷಿಗಳು ಈ ಪುಣ್ಯ ಕ್ಷೇತ್ರದಲ್ಲಿ, ಹೇಮಾವತಿ ನದಿ ತಟದಲ್ಲಿ ಪೂರ್ವಾಭಿಮುಖವಾಗಿ ಕುಳಿತು ತಪವನ್ನು ಆಚರಿಸಿದ್ದರು. ಅವರ ಭಕ್ತಿಗೆ ತಪಸ್ಸಿಗೆ ಮೆಚ್ಚಿದ ವಿಷ್ಣು ಯೋಗಾನರಸಿಂಹನಾಗಿ ಅವರ ಎದುರು ಪ್ರತ್ಯಕ್ಷನಾದನಂತೆ. ಗೋಕರ್ಣ ಋಷಿಗಳು ಪೂರ್ವಾಭಿಮುಖವಾಗಿ ಕುಳಿತಿದ್ದರಿಂದ ಅವರ ಎದುರು ಪ್ರತ್ಯಕ್ಷನಾದ ನರಸಿಂಹ ಪಶ್ಚಿಮದತ್ತ ಮುಖ ಮಾಡಿ ನಿಂತು ದರ್ಶನ ನೀಡಿ ಶಿಲೆಯಾಗಿದ್ದಾನೆ. ಹೀಗಾಗಿ ಇದನ್ನು ಉದ್ಭವ ಮೂರ್ತಿ ಎಂದೂ ಹೇಳಲಾಗುತ್ತದೆ. ಪಶ್ಚಿಮಾಭಿಮುಖವಾದ ಮೂರ್ತಿ ಅಪರೂಪವಾಗಿದ್ದು, ಮತ್ತೆಲ್ಲಿಯೂ ಇಲ್ಲ ಎಂದೂ ಹೇಳಲಾಗುತ್ತದೆ. ಹೀಗಾಗಿಯೇ ಇದು ಪವಿತ್ರ ಪುಣ್ಯ ಭೂಮಿ ಆಗಿದೆ. ಈ ವಿಷಯವನ್ನು ದೇವಾಲಯದಲ್ಲಿರುವ ಇತಿಹಾಸ ಫಲಕ ಪುಷ್ಪೀಕರಿಸುತ್ತದೆ.

ಹಿಂದೆ ಈ ಊರಿಗೆ ಗೂರವೂರು ಮತ್ತು ವಿಜಯಾದಿತ್ಯಪುರಿ ಎಂದು ಕರೆಯಲಾಗುತ್ತಿತ್ತು ಎಂಬ ಉಲ್ಲೇಖವೂ ಇದೆ. ಗೊರವೂರು ಬಳಿಕ ಗೊರೂರು ಆಯಿತು ಎಂದೂ ಹೇಳಲಾಗುತ್ತದೆ. ಈ ಊರಿನಲ್ಲಿ ಅತ್ಯಂತ ಸುಂದರ ಹಾಗೂ ಪ್ರಾಚೀನವಾದ ತ್ರಿಕೂಟಲಿಂಗ ದೇವಾಲಯವಿದೆ. ಇದನ್ನು ವಿಜಯಾದಿತ್ಯ ಹೆಗ್ಗಡೆ ನಿರ್ಮಿಸಿದನೆಂದು ಶಾಸನಗಳು ತಿಳಿಸುತ್ತದೆ. ಇಲ್ಲಿರುವ  ದೇವಾಲಯ ಸುಂದರ ಶಿಲ್ಪಕಲಾವೈಭವದಿಂದ ಕೂಡಿದೆ. 1586ರಲ್ಲಿ ಈ ದೇವಾಲಯ ನಿರ್ಮಾಣವಾಗಿದೆ.

ಮುಂಭಾಗದ ಗೊಪುರ ಹೊಯ್ಸಳರ ಶಿಲ್ಪಕಲೆಯಿಂದ ಸಮೃದ್ಧವಾಗಿದೆ. ಸಮೀಪದಲ್ಲೇ ಕೈಲಾಸೇಶ್ವರ ದೇಗುಲವೂ ಇದೆ. ಪ್ರಶಾಂತವಾಗಿ ಹರಿವ ಹೇಮಾವತಿ ನದಿ ದಂಡೆಯಲ್ಲಿ ಮೆಟ್ಟಿಲುಗಳಿಂದ ಕೂಡಿದ ಸುಂದರವಾದ ಸ್ನಾನಘಟ್ಟವಿದೆ.

ಯೋಗಾನರಸಿಂಹ ದೇಗುಲ:  ಹೇಮಾವತಿ ಹೊಳೆಯ ಎಡ ದಂಡೆಯಲ್ಲೇ ಇರುವ ಶ್ರೀ ಯೋಗಾನರಸಿಂಹ ಸ್ವಾಮಿ ದೇವಾಲಯ ಮನೋಹರವಾಗಿದೆ. ಪ್ರಶಾಂತವಾಗಿ ಹರಿಯುವ ಹೇಮಾವತಿಯನ್ನು ಕಣ್ತುಂಬಿಕೊಂಡು, ಸ್ನಾನ ಮಾಡಿ ಇಲ್ಲವೇ ಕೈಕಾಲು ತೊಳೆದು ದೇಗುಲದ ಬಳಿ ಬಂದರೆ ಮೊದಲು ಮಂಟಪ ಹಾಗೂ ರಾಜಗೋಪುರ ಮನಸೆಳೆಯುತ್ತದೆ. ಮಂಟಪ ಹಾಗೂ ದೇವಾಲಯದ ಗೋಪುರಗಳಲ್ಲಿ ನರಸಿಂಹ, ಗೋಕರ್ಣ ಋಷಿ, ನಾರದನೇ ಮೊದಲಾದ ಹಲವು ಗಾರೆಯ ಶಿಲ್ಪಗಳಿವೆ. ದೇಗುಲದ ದ್ವಾರದ ಮೇಲೆ ಶಂಖ, ಚಕ್ರ ಹಾಗೂ ತ್ರಿಪುಂಡರದ ಚಿತ್ರಗಳಿವೆ.

ದೇವಾಲಯದ ಒಳ ಪ್ರವೇಶಿಸಿದರೆ ಎತ್ತರವಾದ ಗರುಡಗಂಬ, ಹಾಗೂ ದೇವಾಲಯದ ಮಂಟಪ ಕಾಣುತ್ತದೆ. ವಿಶಾಲ ಪ್ರಾಂಗಣದಲ್ಲಿ ಇಲ್ಲಿ ಬಿತ್ತಿಯಲ್ಲಿ ಒಂದು ಕಡೆ ಆಂಜನೇಯ ಹಾಗೂ ಮತ್ತೊಂದು ಕಡೆ ಗರುಡನ ವಿಗ್ರಹಗಳಿವೆ.  ದೇವಾಲಯದ ಭಿತ್ತಿಗಳಲ್ಲಿ ಯಾವುದೇ ಸೂಕ್ಷ್ಮ, ಕಲಾತ್ಮಕ ಕೆತ್ತನೆಗಳು ಇಲ್ಲ. ಆದರೆ ದೇವಾಲಯದ ಮೇಲಿನ ಗೋಪುರದಲ್ಲಿ ದಶಾವತಾರದ ಗಾರೆಯ ಸುಂದರ ಶಿಲ್ಪಗಳಿವೆ. ಮಧ್ಯದಲ್ಲಿ ಹಿರಣ್ಯ ಕಶಿಪುವಿನ ಕರುಳು ಬಗೆದು ಮಾಲೆ ಹಾಕಿಕೊಳ್ಳುತ್ತಿರುವ ಉಗ್ರ ನರಸಿಂಹ ಸ್ವಾಮಿಯ ಸುಂದರ ಮೂರ್ತಿಯೂ ಇದೆ.

ಗರ್ಭಗುಡಿಯಲ್ಲಿ ಒಂದೂವರೆ ಅಡಿಯಷ್ಟು ಎತ್ತರದ ಸುಂದರ ಶಿಲ್ಪಕಲಾ ಪೀಠದ ಮೇಲೆ ಹೊಯ್ಸಳರ ಕಾಲದ ಮನಮೋಹಕವಾದ ಆರು ಅಡಿ ಎತ್ತರದ ಯೋಗಾನರಸಿಂಹ ಸ್ವಾಮಿಯ ಸುಂದರ ವಿಗ್ರಹ ಪ್ರತಿಷ್ಠಾಪಿಸಲಾಗಿದೆ. ಯೋಗ ಮುದ್ರೆಯಲ್ಲಿರುವ ಈ ವಿಗ್ರಹ ನಯನ ಮನೋಹರವಾಗಿದ್ದು, ಹೊಯ್ಸಳರ ಕಾಲದ ಶಿಲ್ಪಿಗಳ ಕಲಾ ಚಾತುರ್ಯಕ್ಕೆ ಸಾಕ್ಷಿಯಾಗಿದೆ.

ನಿತ್ಯ ಪೂಜೆ ಇಲ್ಲಿ ನಡೆಯುತ್ತದೆ. ಅಲಂಕಾರಗೊಂಡ ಯೋಗಾನರಸಿಂಹ ಸ್ವಾಮಿಯನ್ನು ನೋಡುವುದೇ ಒಂದು ಸೊಬಗು. ಪ್ರತಿವರ್ಷ ರಥಸಪ್ತಮಿಯಂದು ಇಲ್ಲಿ ರಥೋತ್ಸವ ಜರುಗುತ್ತದೆ. ಸುಗ್ಗಿಯ ಬಳಿಕ ಜಿಲ್ಲೆಯಲ್ಲಿ ನಡೆಯುವ ಪ್ರಥಮ ರಥೋತ್ಸವ ಎಂಬ ಖ್ಯಾತಿಯೂ ಇದಕ್ಕಿದೆ.

ಹಾಸನದಿಂದ 23 ಕಿ.ಮೀಟರ್ ದೂರದಲ್ಲಿರುವ ಗೊರೂರಿಗೆ ಸಾಕಷ್ಟು ಬಸ್ ಸೌಕರ್ಯವಿದೆ.. ಅತಿ ಸಮೀಪದಲ್ಲೇ 1977ರಲ್ಲಿ ನಿರ್ಮಿಸಲಾದ ಗೊರೂರು ಡ್ಯಾಮ್ ಕೂಡ ಇದೆ, ಕ್ರೆಸ್ಟ್ ಗೇಟ್ ತೆರೆದು ನೀರು ಹೊರಬಿಟ್ಟಾಗ ಅದನ್ನು ನೋಡುವುದು ನಿಜಕ್ಕೂ ಅವರ್ಣನೀಯ ಆನಂದ ತರುತ್ತದೆ.

ಹಿಂದಿನ ಲೇಖನಶಾಸಕ ಮಾಡಾಳ್‌ ವಿರೂಪಾಕ್ಷಪ್ಪರನ್ನು ಕೂಡಲೇ ಬಂಧಿಸಬೇಕು: ಸಿದ್ದರಾಮಯ್ಯ
ಮುಂದಿನ ಲೇಖನಚಿಕ್ಕಮಗಳೂರು: ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಪುರಸಭೆ ಅಧಿಕಾರಿಗಳು