ಮನೆ ಸುದ್ದಿ ಜಾಲ ಪಬ್‌ಜಿ ಆಡುವಾಗಲೇ ಹೆಚ್ಚಿದ ರಕ್ತದೊತ್ತಡ – ಯುವಕ ಸಾವು..!

ಪಬ್‌ಜಿ ಆಡುವಾಗಲೇ ಹೆಚ್ಚಿದ ರಕ್ತದೊತ್ತಡ – ಯುವಕ ಸಾವು..!

0

ಲಕ್ನೋ : ಕೊರಿಯನ್ ಲವ್ ಗೇಮ್‌ಗೆ ಗಾಜಿಯಾಬಾದ್‌ನ ಮೂವರು ಸಹೋದರಿಯರು ಬಲಿಯಾಗಿರುವ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ ಸಂಭವಿಸಿದೆ. ಪಬ್‌ಜಿ ಗೇಮ್ ಆಡುತ್ತಿರುವಾಗಲೇ ರಕ್ತದೊತ್ತಡ ಹೆಚ್ಚಿ ಯುವಕ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ.

ಮೊಹಮ್ಮದ್ ಕೈಫ್ (22) ಮೃತ ಯುವಕ. ಖೈರ್‌ನಗರದ ಗುಲಾರ್ ವಾಲಿ ಗಾಲಿಯ ನಿವಾಸಿಯಾಗಿರುವ ಪ್ರಾಪರ್ಟಿ ಡೀಲರ್ ಫಾರುಕ್ ಅವರ ಏಕೈಕ ಪುತ್ರ ಕೈಫ್ ಕಳೆದ ನಾಲ್ಕು ತಿಂಗಳಿನಿಂದ ಆನ್‌ಲೈನ್ ಗೇಮಿಂಗ್‌ಗೆ ಅಡಿಕ್ಟ್ ಆಗಿದ್ದ. ಶುಕ್ರವಾರ ತಡರಾತ್ರಿಯವರೆಗೂ ಪಬ್‌ಜಿ ಗೇಮ್ ಆಡುತ್ತಿದ್ದ. ತಡರಾತ್ರಿ ಸುಮಾರು 3 ಗಂಟೆಯ ವೇಳೆಗೆ ಪಬ್‌ಜಿ ಆಡುತ್ತಿರುವಾಗ ಕೈಫ್ ಕುಸಿದು ಬಿದ್ದಿದ್ದಾನೆ. ಶಬ್ದ ಕೇಳಿ ಮನೆಯವರು ಕೋಣೆಗೆ ಧಾವಿಸಿದಾಗ ಕೈಫ್ ಪ್ರಜ್ಞಾಹೀನಾ ಸ್ಥಿತಿಯಲ್ಲಿದ್ದ.

ಕೂಡಲೇ ಪೋಷಕರು ಕೈಫ್‌ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪರೀಕ್ಷೆ ವೇಳೆ ರಕ್ತದೊತ್ತಡ 300 ದಾಟಿರುವುದು ಕಂಡುಬಂದಿದೆ. ತಕ್ಷಣವೇ ಆತನನ್ನು ದೆಹಲಿಯ ಆಸ್ಪತ್ರೆಗೆ ರವಾನಿಸಿದ್ದು, 2 ದಿನಗಳ ಜೀವನ್ಮರಣ ಹೋರಾಟ ನಡೆಸಿ ಭಾನುವಾರ ಕೊನೆಯುಸಿರೆಳೆದಿದ್ದಾನೆ. ತೀವ್ರ ಮಾನಸಿಕ ಒತ್ತಡ, ನಿದ್ರಾಹೀನತೆಯಿಂದ ರಕ್ತದೊತ್ತಡ ಹೆಚ್ಚಿದ್ದು, ಮೆದುಳಿನ ರಕ್ತಸ್ರಾವಕ್ಕೆ ಕಾರಣವಾಗಿದೆ. ಇದರಿಂದ ಯುವಕ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.